ತುಮಕೂರು: ಸಚಿವ ಸ್ಥಾನದಿಂದ ಕೈಬಿಟ್ಟಬಳಿಕ ಅಸಮಾಧಾನದ ಮಾತುಗಳನ್ನು ಆಡುತ್ತಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಪಕ್ಷದ ಪ್ರಮುಖರು ಹೇಳುತ್ತಿದ್ದರೆ, ಅವರು ಪಕ್ಷ ತೊರೆಯುವುದು ಖಚಿತ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಬಹಿರಂಗ ಹೇಳಿಕೆ ನೀಡಿದ್ದಾರೆ.

ಜಾರಕಿಹೊಳಿ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಕಾರಣ ಬಿಚ್ಚಿಟ್ಟ ದಿನೇಶ್

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ರಮೇಶ್‌ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿ ಇರುವುದಿಲ್ಲ. ಅವರು ರಾಜೀನಾಮೆ ಕೊಡುತ್ತಾರೋ, ಸರ್ಕಾರ ಉರುಳಿಸುತ್ತಾರೋ, ಶಾಸಕರನ್ನು ಕರೆದುಕೊಂಡು ಹೋಗುತ್ತಾರೋ ಇದರ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಆದರೆ ಅವರು ಕಾಂಗ್ರೆಸ್‌ ತೊರೆಯುವುದು ಖಚಿತ ಎಂದರು.

ರಮೇಶ್‌ ಜಾರಕಿಹೊಳಿ ಎಲ್ಲಿ..? ಸತೀಶ್ ಜಾರಕಿಹೊಳಿ ಹೇಳಿದ್ದೇನು..?

ಸಮ್ಮಿಶ್ರ ಸರ್ಕಾರ ಪ್ರಣಾಳ ಶಿಶು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯೇ ಹೇಳಿಕೆ ನೀಡಿದ್ದಾರೆ. ಏಳೂವರೆ-ಎಂಟು ತಿಂಗಳಿಗೆ ಹುಟ್ಟಿದ ಈ ಕೂಸು ಎಷ್ಟುವರ್ಷ ಬದುಕುತ್ತೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ಜೆಡಿಎಸ್‌ನಿಂದ ಕಾಂಗ್ರೆಸ್‌ ಸಂಘಟನೆಗೆ ತೊಂದರೆ ಇದೆ. ಆ ತೊಂದರೆ ನಿವಾರಣೆ ಮಾಡಿ, ಕಾಂಗ್ರೆಸ್‌ ಪಕ್ಷ ಉಳಿಸಬೇಕಿದೆ. ಜ.14 ನಂತರ ತುಮಕೂರಿನಿಂದಲೇ ಕಾಂಗ್ರೆಸ್‌ ಉಳಿವಿಗಾಗಿ ಚಾಲನೆ ನೀಡಲಿದ್ದೇವೆ ಎಂದು ತಿಳಿಸಿದರು.