ಬೆಂಗಳೂರು :  ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಪಕ್ಷದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಸಂಪರ್ಕಿಸಿ ಮಾತನಾಡುತ್ತೇನೆ. ಪ್ರತಿ ಸಂಪುಟ ವಿಸ್ತರಣೆಯಲ್ಲೂ ಅಸಮಾಧಾನ ಸಹಜ. ಕೆಲ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ್‌ ಜಾರಕಿಹೊಳಿ ಅವರು ಉದ್ವೇಗದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರಬಹುದು. ರಾಜೀನಾಮೆ ಅವರ ವೈಯಕ್ತಿಕ ವಿಚಾರ, ಅವರ ಹೇಳಿಕೆಗೆ ಹೆಚ್ಚು ಮಹತ್ವ ನೀಡುವುದಿಲ್ಲ. ಅವರಿಗೆ ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ. ವೈಯಕ್ತಿಕ ಕಾರಣದಿಂದ ರಮೇಶ್‌ ಜಾರ​ಕಿ​ಹೊಳಿ ಅವರು ಸಮ​ರ್ಥ​ವಾಗಿ ಕಾರ್ಯ​ನಿ​ರ್ವ​ಹಿ​ಸ​ಲಿಲ್ಲ. ಉಸ್ತುವಾರಿ ಜಿಲ್ಲೆಯ ಪ್ರವಾಸ, ಜಿಲ್ಲೆಯ ಅಭಿ​ವೃದ್ಧಿ ಕೆಲಸ ಕಾರ್ಯಗಳು ಆಗುತ್ತಿರಲಿಲ್ಲ. ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿದೆ ಎಂದರು.

ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಕೂಡ ಯಾವುದೇ ಸಂದರ್ಭದಲ್ಲೂ ಪಕ್ಷದ ವಿರುದ್ಧವಾಗಿ ನಡೆದುಕೊಳ್ಳುವವರಲ್ಲ ಎಂಬ ನಂಬಿಕೆ ಇದೆ. ಕೆಲವು ವೇಳೆ ವೈಯಕ್ತಕ ನಿಲುವುಗಳನ್ನು ವ್ಯಕ್ತಪಡಿಸಿರಬಹುದು. ಹಿರಿಯರಾದ ಅವರ ಕೊಡುಗೆ ಪಕ್ಷಕ್ಕೆ ಸಾಕಷ್ಟಿದೆ. ಪಕ್ಷದ ಪರವಾಗಿಯೇ ಅವರು ಮಾತನಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ ಎಂದರು.

ಇಬ್ಬರು ನಾಯಕರು ಎಲ್ಲಿಯೂ ಪಕ್ಷದಿಂದ ತಮಗೆ ಅನ್ಯಾಯವಾಗಿದೆ ಎಂದಾಗಲಿ, ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುವುದಾಗಲಿ ಮಾಡಿಲ್ಲ. ಇಬ್ಬರನ್ನೂ ಸಂಪರ್ಕಿಸಿ ನಾನೇ ವೈಯಕ್ತಿಕವಾಗಿ ಮಾತನಾಡುತ್ತೇನೆ. ಪರಿಸ್ಥಿತಿಯನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಎರಡು ಮೂರು ದಿನಗಳಲ್ಲಿ ಎಲ್ಲರೂ, ಎಲ್ಲವೂ ಸರಿಹೋಗಲಿದೆ. ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

ವೇಣು ಬಂದ ಬಳಿಕ ಖಾತೆ ಹಂಚಿಕೆ:

ಇನ್ನು, ಹೊಸದಾಗಿ ಸಚಿವ ಸಂಪುಟ ಸೇರಿರುವ ಕಾಂಗ್ರೆಸ್‌ ಸಚಿವರಿಗೆ ಕೆಲ ದಿನಗಳಲ್ಲೇ ಖಾತೆ ಹಂಚಿಕೆ ನಡೆಯಲಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರು ಮಂಗಳವಾರ ರಾಜ್ಯಕ್ಕೆ ಆಗಮಿಸಲಿದ್ದು, ಬಳಿಕ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಯಾರಿಗೆ ಯಾವ ಖಾತೆ ನೀಡಬೇಕೆಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ರಮೇಶ್‌ ಜಾರಕಿಹೊಳಿ ಅವರು ತಮಗೆ ಪಕ್ಷದಿಂದ ಅನ್ಯಾಯವಾಗಿದೆ ಎಂದು ಎಲ್ಲೂ ಹೇಳಿಲ್ಲ. ಪಕ್ಷದ ವಿರುದ್ಧವಾಗಿ ಯಾವುದೇ ಹೇಳಿಕೆಗಳನ್ನೂ ನೀಡಿಲ್ಲ. ಉದ್ವೇಗದಿಂದ ಕೆಲವು ಸಲ ವೈಯಕ್ತಿಕ ನಿಲುವುಗಳನ್ನು ವ್ಯಕ್ತಪಡಿಸಿರಬಹುದು. ಹಾಗಾಗಿ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳುವಂತಹ ಪ್ರಮೇಯ ಉದ್ಭವಿಸುವುದಿಲ್ಲ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ