ಬೆಂಗಳೂರು :  ಸಚಿವ ಸ್ಥಾನದಿಂದ ಕೈಬಿಟ್ಟಿರುವ ಕುರಿತು ಅಸಮಾಧಾನ ಹೊಂದಿರುವ ತಮ್ಮ ಸಹೋದರ ರಮೇಶ್‌ ಜಾರಕಿಹೊಳಿ ಎಲ್ಲೂ ಹೋಗಿಲ್ಲ. ಅವರೊಂದಿಗೆ ಖುದ್ದು ನಾನೇ ಮಾತನಾಡುತ್ತೇನೆ ಎಂದು ನೂತನ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಮಂಗಳವಾರ ಸಂಜೆ ಕುಮಾರಕೃಪಾ ಅತಿಥಿಗೃಹದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾನು ಯಾವುದೇ ನಿರ್ದಿಷ್ಟಖಾತೆಯ ನಿರೀಕ್ಷೆ ಹೊಂದಿಲ್ಲ. ಪಕ್ಷ ಯಾವ ಖಾತೆಯನ್ನು ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ. ನೂತನವಾಗಿ ಸಚಿವ ಸ್ಥಾನ ನೀಡಿರುವುದರಿಂದ ವೇಣುಗೋಪಾಲ್‌ರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಬಂದಿದ್ದೆ. ನಾಳೆ ಮಾತನಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಇಂದು ಯಾವುದೇ ಮಾತುಕತೆ ನಡೆಸಿಲ್ಲ ಎಂದರು.

ಸಹೋದರನ ಅತೃಪ್ತಿ ಬಗ್ಗೆ ಮಾತನಾಡಿದ ಅವರು, ರಮೇಶ್‌ ಜಾರಕಿಹೊಳಿ ಗೋಕಾಕ್‌ನಲ್ಲಿ ಇದ್ದಾರೆ. ಅವರ ಬಳಿ ನಾನೇ ಮಾತನಾಡುತ್ತೇನೆ. ರಮೇಶ್‌ ಜಾರಕಿಹೊಳಿ ಬುಧವಾರ ಪಕ್ಷದ ಹಿರಿಯರನ್ನು ಭೇಟಿ ಮಾಡುತ್ತಾರೆ. ಅವರು ಎಲ್ಲೂ ಹೋಗಿಲ್ಲ ಎಂದು ಹೇಳಿದರು.

ಇದೇ ವೇಳೆ ನೂತನ ಸಚಿವ ಎಂ.ಬಿ. ಪಾಟೀಲ್‌ ಮಾತನಾಡಿ, ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಲು ಬಂದಿದ್ದೆವು. ನಾಳೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರದಂತೆ ಯಾವುದೇ ಖಾತೆ ನೀಡಿದರೂ ಸ್ವೀಕರಿಸುತ್ತೇನೆ ಎಂದರು.