ಬೆಂಗಳೂರು :  ಹೋಟೆಲ್‌ಗಳು, ಖಾಸಗಿ ಕಾರ್ಖಾನೆಗಳು, ತಳ್ಳುವಗಾಡಿಯ ತರಕಾರಿ ವ್ಯಾಪಾರಿಗಳು ಸೇರಿದಂತೆ ಇತರೆ ಸಣ್ಣಪುಟ್ಟ ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮಾರುಕಟ್ಟೆಯ ಹೋಲ್‌ಸೇಲ್ ದರಕ್ಕಿಂತ ಕಡಿಮೆ ಬೆಲೆಯಲ್ಲಿ ತರಕಾರಿ ಮಾರಾಟ ಮಾಡಲು ಹಾಪ್‌ಕಾಮ್ಸ್ ಮುಂದಾಗಿದೆ. 

ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಲಾಲ್‌ಬಾಗ್ ಸಮೀಪದ ಹಾಪ್‌ಕಾಮ್ಸ್ ಕೇಂದ್ರದಲ್ಲಿ ‘ಕ್ಯಾಷ್ ಅಂಡ್ ಕ್ಯಾರಿ’ ಮಳಿಗೆ ಗುರುವಾರದಿಂದ (ಜ. 24) ಆರಂಭವಾಗಲಿದೆ. ಖಾಸಗಿ ಸಂಘ, ಸಂಸ್ಥೆಗಳು, ಕಾರ್ಖಾನೆಗಳು, ಕೇಟರಿಂಗ್, ತಳ್ಳುವ ಗಾಡಿ ತರಕಾರಿ ವ್ಯಾಪಾರಿಗಳು, ಕ್ಲಬ್, ಹೋಟೆಲ್‌ಗಳಿಗೂ ತರಕಾರಿ ಸರಬರಾಜು ಮಾಡಲು ತೀರ್ಮಾನಿಸಿದೆ. 

ಇನ್ನು ಮುಂದೆ ಹೋಲ್ ಸೇಲ್ ಮಾರುಕಟ್ಟೆಯಲ್ಲಿನ ದರಕ್ಕಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ನುಗ್ಗೆಕಾಯಿ, ಎಲೆಕೋಸು, ಹೂಕೋಸು, ಕ್ಯಾರೆಟ್, ಬೀಟ್‌ರೋಟ್, ಬದನೆ, ಟೊಮೇಟೋ, ಬೆಳ್ಳುಳ್ಳಿ, ಈರುಳ್ಳಿ, ತೆಂಗಿನ ಕಾಯಿ ಸೇರಿದಂತೆ ವಿವಿಧ ತರಕಾರಿಗಳು ಹಾಪ್‌ಕಾಮ್ಸ್‌ನಲ್ಲಿ ಲಭ್ಯವಾಗಲಿವೆ.

ಆರಂಭದಲ್ಲಿ ಲಾಲ್‌ಬಾಗ್ ಸಮೀಪದ ಹಾಪ್ ಕಾಮ್ಸ್ ಕೇಂದ್ರದಲ್ಲಿ ಮಾತ್ರ ‘ಕ್ಯಾಶ್ ಅಂಡ್ ಕ್ಯಾರಿ’ ಮಳಿಗೆ ತೆರೆಯಲಾಗುತ್ತಿದೆ. ಇಲ್ಲಿ ವ್ಯವಹಾರ ಹೇಗೆ ನಡೆಯುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಎಂಟತ್ತು ಕಡೆಗಳಲ್ಲಿ ಪ್ರಾರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ. 

ಹೆಚ್ಚು ಖರೀದಿಸಿದರೆ ರಿಯಾಯಿತಿ: ಯಾವುದೇ ತರಕಾರಿಯನ್ನು ತಲಾ 10 ಕೆ.ಜಿ, ಈರುಳ್ಳಿ 25 ಕೆ.ಜಿ, ಬೆಳ್ಳುಳ್ಳಿ-ಶುಂಠಿ 5 ಕೆ.ಜಿ. ಟೊಮೇಟೋ 15 ಕೆ.ಜಿ.ಗಿಂತ ಹೆಚ್ಚು ಖರೀದಿಸಿದರೆ ದರದಲ್ಲಿ ರಿಯಾಯಿತಿ ಸಿಗಲಿದೆ. ಕೇವಲ ಸಣ್ಣಪುಟ್ಟ ತರಕಾರಿ ವ್ಯಾಪಾರಿಗಳಿಗೆ ಮಾತ್ರವಲ್ಲದೆ ಮದುವೆ-ಮುಂಜಿ ಇತ್ಯಾದಿ ಕಾರ್ಯಕ್ರಮಗಳಿಗೆ ಹೆಚ್ಚು ತರಕಾರಿ ಬೇಕಾದವರಿಗೂ ಇದು ಅನ್ವಯವಾಗಲಿದೆ. 

ಸಾಲ ಸಿಗುವುದಿಲ್ಲ: ಕ್ಯಾಶ್ ಅಂಡ್ ಕ್ಯಾರಿ ಮಳಿಗೆಯಲ್ಲಿ ಸಾಲ ಸಿಗುವುದಿಲ್ಲ. ಎಲ್ಲವೂ ನಗದು ವ್ಯವಹಾರವಾಗಿರುತ್ತದೆ. ರೈತರಿಗೆ ಹಣ ಪಾವತಿಸಬೇಕಾಗಿರುವುದರಿಂದ ‘ಕ್ಯಾಶ್ ಅಂಡ್ ಕ್ಯಾರಿ’ ಮಳಿಗೆ ಎಂದು ಹೆಸರಿಡಲಾಗಿದೆ ಎಂದು ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.