ಬೆಂಗಳೂರಿನ ಯಲಹಂಕದ ಎಸ್ಎಫ್ಎಸ್ 208 ವಸತಿ ಬಡಾವಣೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ 8 ವಾಣಿಜ್ಯ ಮಳಿಗೆಗಳನ್ನು ಪಾಲಿಕೆ ಅಧಿಕಾರಿಗಳು ಮುಚ್ಚಿಸಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಆಯುಕ್ತರ ನಿರ್ದೇಶನದಂತೆ ಈ ದಿಢೀರ್ ಕಾರ್ಯಾಚರಣೆ ನಡೆದಿದೆ. ಜಿಬಿಎ ಕಾಯ್ದೆ 2024ರ ಅಡಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು (ಅ.28): ಬೆಂಗಳೂರಿನ ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ತಲೆಎತ್ತಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಯಲಹಂಕದ ಎಸ್ಎಫ್ಎಸ್ 208 (SFS 208) ವಸತಿ ಬಡಾವಣೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಹಾಗೂ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಬರೋಬ್ಬರಿ 8 ವಾಣಿಜ್ಯ ಮಳಿಗೆಗಳನ್ನು ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ ಮುಚ್ಚಿಸಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ಖಡಕ್ ನಿರ್ದೇಶನದಂತೆ ಈ ಮಹತ್ವದ ಕಾರ್ಯಾಚರಣೆ ನಡೆದಿದೆ. ವಸತಿ ವಲಯಗಳಲ್ಲಿ ಅನುಮತಿಯಿಲ್ಲದೆ ಅಕ್ರಮವಾಗಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಸ್ಥಳೀಯ ನಿವಾಸಿಗಳ ನೆಮ್ಮದಿಗೆ ಭಂಗ ಬರುತ್ತಿದ್ದು, ಟ್ರಾಫಿಕ್ ಹಾಗೂ ನೈರ್ಮಲ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದವು. ಈ ಸಂಬಂಧ ಸ್ಥಳೀಯ ನಾಗರಿಕರಿಂದ ಸರಣಿ ದೂರುಗಳು ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಸರ್ವೋಚ್ಚ ನ್ಯಾಯಾಲಯದ (Supreme Court) ಆದೇಶಗಳು ಹಾಗೂ ವಲಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಿದ್ದರು. ಅದರಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ಬೀಗ ಜಡಿದಿದ್ದಾರೆ.
ಬೀಗ ಬಿದ್ದ 8 ವಾಣಿಜ್ಯ ಮಳಿಗೆಗಳು ಇವೇ ನೋಡಿ:
ಪಾಲಿಕೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕೆಳಕಂಡ ಹೋಟೆಲ್, ಬಿರಿಯಾನಿ ಸೆಂಟರ್ ಹಾಗೂ ಮಳಿಗೆಗಳನ್ನು ಬಂದ್ ಮಾಡಲಾಗಿದೆ.
- ಬಿಗ್ ಡ್ಯಾಡೀಸ್ ಬಿಬಿಕ್ಯೂ ಶಾವರ್ಮಾ (Big Daddy’s BBQ Shawarma)
- ಜೈನ್ ತಟ್ಟೆ ಇಡ್ಲಿ (Jain Tatte Idli)
- ನ್ಯಾಟಿ ಸ್ಟೈಲ್ ಬಿರಿಯಾನಿ ಮನೆ (Naati Style Biryani Mane)
- ಆರ್ಎಸ್ ಮೋಟಾರ್ಸ್ (RS Motors)
- ಡೆನ್ಸ್ ಸ್ಮೋಕ್ (Dens Smoke)
- ಹೋಳಿಗೆ ಮನೆ (Holige Mane)
- ಹೆಲ್ದಿ ಐಸ್ (Healthy Ice)
- ನಮ್ಮ ಬಿರಿಯಾನಿ (Namma Biryani)
ಜಿಬಿಎ ಕಾಯ್ದೆ 2024ರ ಅಡಿ ಕಠಿಣ ಎಚ್ಚರಿಕೆ:
ವಸತಿ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಅನಧಿಕೃತ ವಾಣಿಜ್ಯ ವಹಿವಾಟಿಗೆ ಅವಕಾಶವಿಲ್ಲ ಎಂದು ಪಾಲಿಕೆ ಸ್ಪಷ್ಟಪಡಿಸಿದೆ. 'ವಸತಿ ವಲಯಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಸೂಕ್ತ ಅನುಮತಿ ಪಡೆಯದೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವವರು ಹಾಗೂ ವಸತಿ ನಿವೇಶನಗಳಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವವರು ಕಾನೂನು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಂತಹ ನಿಯಮಬಾಹಿರ ಕೃತ್ಯಗಳು ಕಂಡುಬಂದಲ್ಲಿ ಜಿಬಿಎ (GBA) ಕಾಯ್ದೆ, 2024ರ ಅನ್ವಯ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಹಾಗೂ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.






