ಫಾರೀಸ್ ಅನ್ಸಾರಿ ಎಂಬ ಎಂಜಿನಿಯರ್ಗೆ ಮುಸ್ಲಿಂ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ನಾಲ್ಕು ಕಡೆ ಮನೆ ಮಾಲೀಕರು ಬಾಡಿಗೆ ನೀಡಲು ನಿರಾಕರಿಸಿದ್ದಾರೆ. ಈ ಕುರಿತು ಅವರು ಎಕ್ಸ್ನಲ್ಲಿ ಮಾಡಿದ ಪೋಸ್ಟ್ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು: ಮುಸ್ಲಿಂ ಎಂಬ ಕಾರಣಕ್ಕೆ ನಾಲ್ಕು ಫ್ಲ್ಯಾಟ್ಗಳ ಮಾಲೀಕರು ಬಾಡಿಗೆ ನೀಡಲು ನಿರಾಕರಿಸಿದ್ದಾರೆ ಎಂದು ಎಂಜಿನಿಯರ್ವೊಬ್ಬರು ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ವೈರಲ್ ಆಗಿ 24 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ವ್ಯಾಪಕ ಚರ್ಚೆ ನಡೆದಿದೆ.
ನನ್ನ ಅನಿಸಿಕೆ ಸುಳ್ಳು ಎನಿಸಿತು
‘ಬೆಂಗಳೂರಿನಲ್ಲಿ ಫ್ಲ್ಯಾಟ್ ಬಾಡಿಗೆ ಪಡೆಯಲು ನಾನು ಮತ್ತು ನನ್ನ ಪತ್ನಿ ಹುಡುಕಾಟ ನಡೆಸುತ್ತಿದ್ದೇವೆ. ಈ ವೇಳೆ ನಾಲ್ಕು ಫ್ಲ್ಯಾಟ್ಗಳು ನಮಗೆ ಇಷ್ಟವಾದವು. ಎಲ್ಲಾ ನಾಲ್ಕು ಮನೆ ಮಾಲೀಕರು ನಾವು ಮುಸ್ಲಿಂ ಎಂಬ ಕಾರಣಕ್ಕೆ ನಿರಾಕರಿಸಿದರು. ಮೊದಲ ಮನೆ ಮಾಲೀಕರು ನಿರಾಕರಿಸಿದಾಗ ಏನೋ ಒಂದು ಅಪರೂಪದ ಘಟನೆ ಎಂದುಕೊಂಡೆ. ಆದರೆ, ನಂತರದಲ್ಲಿ ನನ್ನ ಅನಿಸಿಕೆ ಸುಳ್ಳು ಎನಿಸಿತು. ಇದು ನೋವಿನ ಸಂಗತಿ ಎಂದು ಫಾರೀಸ್ ಅನ್ಸಾರಿ ಎಂಬುವರು ಪೋಸ್ಟ್ ಮಾಡಿದ್ದಾರೆ.
ಮುಸ್ಲಿಂ ಮಾಲೀಕತ್ವದ ಫ್ಲ್ಯಾಟ್ ಹುಡುಕಿಕೊಳ್ಳಿ
ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಆರತಿ ಅಯ್ಯಂಗಾರ್ ಎಂಬುವರು, ಒಂಟಿ ಪುರುಷ, ಒಂಟಿ ಮಹಿಳೆಯರಿಗೂ ಮನೆಗಳು ಸುಲಭವಾಗಿ ಸಿಗುವುದಿಲ್ಲ. ನೀವು ವಿಶೇಷವೇನಲ್ಲ. ತಾರತಮ್ಯ ಇದ್ದೇ ಇದೆ. ಆದರೂ, ನಿಮಗೆ ಮನೆ ನೀಡುವಂತಹ ಮಾಲೀಕರನ್ನು ಹುಡುಕಿಕೊಳ್ಳಿ. ಮುಸ್ಲಿಂ ಎಂಬ ಕಾರಣಕ್ಕಾಗಿಯೇ ನಿರಾಕರಿಸಿದ್ದೆ ಆದಲ್ಲಿ ಮುಸ್ಲಿಂ ಮಾಲೀಕತ್ವದ ಫ್ಲ್ಯಾಟ್ ಹುಡುಕಿಕೊಳ್ಳಿ. ಬೆಂಗಳೂರಿನಲ್ಲಿ ಸಾಕಷ್ಟು ಲಭ್ಯವಿದ್ದು, ಸಿಗುವುದು ಕಷ್ಟವೇನಲ್ಲ. ಬೇಸರವೇಕೆ? ಎಂದು ಸಲಹೆ ನೀಡಿದ್ದಾರೆ.
ರೀಚ್ಗಾಗಿ ಪೋಸ್ಟ್?
ಜಾಲತಾಣದಲ್ಲಿ ಲೈಕ್ಸ್, ಕಮೆಂಟ್ ಮತ್ತು ಹೆಚ್ಚಿನ ಜನರಿಗೆ ಅಕೌಂಟ್ ಮತ್ತು ಪೋಸ್ಟ್ ತಲುಪುವ ರೀಚ್ಗಾಗಿ ಮಾಡಿರುವ ಪೋಸ್ಟ್ ಆಗಿರಬೇಕೆಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮೆಜಾನ್ನಲ್ಲಿ ಹೆಚ್ಚು ದಿನಸಿ ಆರ್ಡರ್ ಮಾಡಿದ್ದೇ ತಪ್ಪಾಯ್ತಾ? ಗ್ರಾಹಕನ ಮೇಲೆ ಕೂಗಾಡಿದ ಡೆಲಿವರಿ ಬಾಯ್!








