Asianet Suvarna News Asianet Suvarna News

Bengaluru: ವೆಸ್ಟ್‌ ಆಫ್‌ ಕಾರ್ಡ್ ರಸ್ತೆ ಮೇಲ್ಸೇತುವೆಯಲ್ಲಿ ದೋಷ, ವಾಹನ ಸವಾರರೇ ಎಚ್ಚರ

ಕಳೆದ ವರ್ಷ ಉದ್ಘಾಟನೆಯಾದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವೆಸ್ಟ್‌ ಆಫ್‌ ಕಾರ್ಡ್  ರಸ್ತೆಯ ಶಿವನಹಳ್ಳಿ ಬಳಿಯ ಇಂಟಿಗ್ರೇಟೆಡ್ ಮೇಲ್ಸೇತುವೆಯಲ್ಲಿ ದೋಷ ಕಂಡುಬಂದಿದೆ. ಕೂಡಲೇ ವಾಹನ ಸಂಚಾರ ಸ್ಥಗಿತಗೊಳಿಸಿ ಮೇಲ್ಸೇತುವೆಯ ಗುಣಮಟ್ಟ ಪರಿಶೀಲಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗುತ್ತಿದೆ.

West of Cord Road flyover beware of faulty motorists
Author
First Published Dec 1, 2022, 1:41 PM IST

ಬೆಂಗಳೂರು (ಡಿ.1) : ಕಳೆದ ವರ್ಷ ಅಕ್ಟೋಬರ್ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಯಾದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವೆಸ್ಟ್‌ ಆಫ್‌ ಕಾರ್ಡ್  ರಸ್ತೆಯ ಶಿವನಹಳ್ಳಿ ಬಳಿಯ ಇಂಟಿಗ್ರೇಟೆಡ್ ಮೇಲ್ಸೇತುವೆಯಲ್ಲಿ ದೋಷ ಕಂಡುಬಂದಿದೆ. ಕೂಡಲೇ ವಾಹನ ಸಂಚಾರ ಸ್ಥಗಿತಗೊಳಿಸಿ ಮೇಲ್ಸೇತುವೆಯ ಗುಣಮಟ್ಟ ಪರಿಶೀಲಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗುತ್ತಿದೆ.

ಬಿಬಿಎಂಪಿ ವತಿಯಿಂದ ವೆಸ್ಟ್ ಆಫ್‌ ಕಾರ್ಡ್ ರಸ್ತೆಯನ್ನು ಸಿಗ್ನಲ್‌ ಫ್ರೀ ಕಾರಿಡಾರ್‍‌ ಮಾಡುವ ಉದ್ದೇಶದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾಗಡಿ ರಸ್ತೆಯ ಟೋಲ್‌ಗೇಟ್‌ ಬಳಿಯಿಂದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಿವನಗರದವರೆಗೆ ಮೂರು ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಕೋವಿಡ್‌ ಹಾಗೂ ಇತರೆ ಕಾರಣಗಳಿಂದ ಮೇಲ್ಸೇತುವೆ ಕಾಮಗಾರಿ ತೀವ್ರ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಅದರಲ್ಲಿ ಮೊದಲನೆಯ ಹಂತದಲ್ಲಿ ರಾಜಾಜಿ ನಗರದ ಶಿವನಗರದಲ್ಲಿ ಸುಮಾರು 71 ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೇಟೆಡ್ 650 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಿಸಿ 2021ರ ಅಕ್ಟೋಬರ್‍‌ನಲ್ಲಿ ಮಾಜಿ ಸಚಿವ ಎಸ್. ಸುರೇಶ್‌ ಕುಮಾರ್‍‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ ಮಾಡಿಸಿದ್ದರು. ಆದರೆ, ವಾಹನ ಸಂಚಾರಕ್ಕೆ ಮುಕ್ತಗೊಂಡು ಕೇವಲ ಒಂದು ವರ್ಷದ ಅವಧಿಯಲ್ಲಿ ಮೇಲ್ಸೇತುವೆಯಲ್ಲಿ ದೋಷ ಕಂಡುಬಂದಿದೆ.

ಬೆಂಗ್ಳೂರಿನ ಎಲ್ಲ ಮೇಲ್ಸೇತುವೆಗಳ ಸದೃಢತೆ ಪರೀಕ್ಷೆ

ಮೇಲ್ಸೇತುವೆಯಲ್ಲಿನ ದೋಷಗಳೇನು? ವೆಸ್ಟ್ ಆಫ್‌ ಕಾರ್ಡ್ ರಸ್ತೆಯಲ್ಲಿ ಕಳೆದ ವರ್ಷ ಉದ್ಘಾಟನೆಗೊಂಡ ಮೇಲ್ಸೇತುವೆಯ ಒಂದು ಸ್ಲ್ಯಾಬ್, ಪಿಲ್ಲರ್ ಕುಸಿತವಾಗಿದೆ. ಇದೀಗ ಪಿಲ್ಲರ್ (Piller), ಸ್ಲ್ಯಾಬ್ (Slab) ಕುಸಿದು ಬಿರುಕು ಬಿಟ್ಟಿದ್ದು, ಸಂಚಾರ ಬಂದ್ ಮಾಡುವಂತೆ ದೂರು ದಾಖಲಿಸಿದ್ದಾರೆ. ಮೇಲ್ಸೇತುವೆಯ ಕಳಪೆ ಕಾಮಗಾರಿ ಬಗ್ಗೆ ಗುಣಮಟ್ಟ ಪರೀಕ್ಷೆ (Quality check) ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಭಾಸ್ಕರನ್ ಪಾಲಿಕೆ ಮುಖ್ಯ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್‍‌ಗೆ ದೂರು ನೀಡಿದ್ದಾರೆ. ಜೊತೆಗೆ, ಸ್ಥಳೀಯ ಸಾರ್ವಜನಿಕರಿಂದಲೂ ಸಂಚಾರ ಬಂದ್‌ ಮಾಡಿ ಕ್ವಾಲಿಟಿ ಚೆಕ್ ಮಾಡಿಸಬೇಕು ಎಂದು ಆಗ್ರಹ ವ್ಯಕ್ತವಾಗಿದೆ. ಕೂಡಲೇ ಕಳಪೆ‌ ಕಾಮಗಾರಿ ಸರಿಪಡಿಸದಿದ್ದರೆ, ಬಿಬಿಎಂಪಿ ಮುತ್ತಿಗೆ ಹಾಕಲು ಸ್ಥಳೀಯರು ನಿರ್ಧರಿಸಿದ್ದಾರೆ.

ಶೀಘ್ರ ಬಸವೇಶ್ವರ ನಗರ ಮೇಲ್ಸೇತುವೆ ಮುಕ್ತ: 
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲುಸೇತುವೆ ಕಾಮಗಾರಿಯ ಸ್ಥಳವನ್ನು ಕಳೆದ ತಿಂಗಳು ವಸತಿ ಸಚಿವರಾದ ಶ್ರೀ ವಿ.ಸೋಮಣ್ಣ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಗತಿಯಲ್ಲಿರುವ ಬಸವೇಶ್ವರ ನಗರ ಜಂಕ್ಷನ್ ಮತ್ತು 72ನೇ ಅಡ್ಡ ರಸ್ತೆಯ ಜಂಕ್ಷನ್ ಬಳಿ ಮೇಲುಸೇತುವೆ ಕಾಮಗಾರಿ ಪರಿಶೀಲಿಸಿ ನವೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಬಸವೇಶ್ವರ ಜಂಕ್ಷನ್ ಬಳಿ ಹೆಚ್ಚುವರಿ ಏಕಮುಖ ಸಂಚಾರದ ಮೇಲುಸೇತುವೆಯನ್ನು 54.63 ಕೋಟಿ ರೂ. ವೆಚ್ಚದಲ್ಲಿ ಒಟ್ಟು 735 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿ ಮುಗಿಯಲಿದ್ದು, ಡಿಸೆಂಬರ್‍‌ನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ತಿಳಿಸಿದ್ದರು.

ದ್ವಿಚಕ್ರ ವಾಹನ‌ ಸವಾರರಿಗೆ ಯಮ ಸ್ವರೂಪಿಯಾದ ಫ್ಲೈಓವರ್ ಮೇಲೆ ಬೈಕ್ ಬ್ಯಾನ್ ಮಾಡಲು ಪೊಲೀಸರ ಮನವಿ

ಸಿಗ್ನಲ್‌ ಫ್ರೀ ಕಾರಿಡಾರ್ ವಿವರ: ವೆಸ್ಟ್‌ ಆಫ್‌ ಕಾರ್ಡ ರಸ್ತೆಯ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುವ ಸಲುವಾಗಿ ಮಂಜುನಾಥನಗರದ ಬಳಿ ಮೇಲುಸೇತುವೆ, ಶಿವನಗರ 1 ಮತ್ತು 8ನೇ ಮುಖ್ಯ ರಸ್ತೆಯ ಕೂಡು ಸ್ಥಳದಲ್ಲಿ ಕೆಳಸೇತುವೆ ಹಾಗು ಬಸವೇಶ್ವರ ನಗರ ವೃತ್ತದ ಏಕಮುಖ ಸಂಚಾರದ ಬಳಿ ಮೇಲುಸೇತುವೆಯ ಗ್ರೇಡ್ ಸೆಪರೇಟರ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಂತೆ, ಮಂಜುನಾಥನಗರ ಬಳಿ 18.18 ಕೋಟಿ ರೂ. ವೆಚ್ಚದಲ್ಲಿ 270.62 ಮೀ ಉದ್ದದ ಮೇಲುಸೇತುವೆಯನ್ನು 2018ರ ಆಗಸ್ಟ್‌ನಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಶಿವನಗರ 1 ಮತ್ತು 8ನೇ ಮುಖ್ಯ ರಸ್ತೆಯ ಕೂಡು ಸ್ಥಳದಲ್ಲಿ ಕೆಳಸೇತುವೆಯ ಬದಲಾಗಿ 71.98 ಕೋಟಿ ರೂ. ವೆಚ್ಚದಲ್ಲಿ 655 ಮೀಟರ್ ಉದ್ದದ ಮೇಲುಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಂಡು 2021ರ ಅಕ್ಟೋಬರ್‍‌ನಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಇನ್ನು ಬಸವೇಶ್ವರ ಜಂಕ್ಷನ್ ಬಳಿ 54.63 ಕೋಟಿ ರೂ. ವೆಚ್ಚದಲ್ಲಿ 735 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

Follow Us:
Download App:
  • android
  • ios