ಬೆಂಗ್ಳೂರಿನ ಎಲ್ಲ ಮೇಲ್ಸೇತುವೆಗಳ ಸದೃಢತೆ ಪರೀಕ್ಷೆ
ಕೆಲವು ಫ್ಲೈಓವರ್‌ಗಳಲ್ಲಿ ಸಮಸ್ಯೆ ಉದ್ಭವ ಹಿನ್ನೆಲೆ, 42ಕ್ಕೂ ಅಧಿಕ ಮೇಲ್ಸೇತುವೆ, ಕೆಳಸೇತುವೆಗಳ ಕಾರ್ಯದಕ್ಷತೆ ಪರಿಶೀಲನೆ: ಬಿಬಿಎಂಪಿ
ಬೆಂಗಳೂರು(ನ.29): ನಗರದ ಸುಮನಹಳ್ಳಿ ಮತ್ತು ಕೆ.ಆರ್.ಮಾರುಕಟ್ಟೆಯ ಮೇಲ್ಸೇತುವೆ ರಸ್ತೆಗಳಲ್ಲಿ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ ನಗರದಲ್ಲಿರುವ ಸುಮಾರು 42ಕ್ಕೂ ಹೆಚ್ಚು ಮೇಲ್ಸೇತುವೆಗಳ ಸದೃಢತೆ, ಕಾರ್ಯದಕ್ಷತೆ ಪರಿಶೀಲನೆಗೆ ಬಿಬಿಂಪಿ ಮುಂದಾಗಿದ್ದು, ಸ್ಟ್ರಕ್ಚರಲ್ ಆಡಿಟ್ ಮಾಡಿಸಲು ಸಿದ್ಧತೆ ನಡೆಸಿದೆ.
ಗೊರಗುಂಟೆಪಾಳ್ಯ, ಕೆ.ಆರ್.ಮಾರುಕಟ್ಟೆ, ಸಿರಸಿ ಮೇಲ್ಸೇತುವೆ, ಕೆಆರ್ ಪುರ ತೂಗುಸೇತುವೆ, ಜಯದೇವ ಮೇಲ್ಸೇತುವೆ, ರಿಚ್‌ಮಂಡ್ ಮೇಲ್ಸೇತುವೆ, ಆನಂದರಾವ್ ಮೇಲ್ಸೇತುವೆ, ವೈಟ್‌ಫೀಲ್ಡ್, ಡೈರಿ ವೃತ್ತ ಗ್ರೇಡ್ ಸಪರೇಟರ್, ನಾಯಂಡಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಯಶವಂತಪುರ, ಎಲೆಕ್ಟ್ರಾನಿಕ್ ಸಿಟಿ, ವೆಸ್ಟ್ ಆಫ್ ಕಾರ್ಡ್ ರೋಡ್, ಡಾ. ರಾಜ್‌ಕುಮಾರ್ ರಸ್ತೆ ಕೆಳಸೇತುವೆ ಸೇರಿದಂತೆ 42ಕ್ಕೂ ಹೆಚ್ಚು ಸೇತುವೆಗಳ ಕಾರ್ಯದಕ್ಷತೆ ಪರಿಶೀಲಿಸಲು ಪಾಲಿಕೆ ಡಿಪಿಆರ್ ಸಿದ್ಧಪಡಿಸಿಟ್ಟು ಕೊಂಡಿದೆ.
ಬೆಂಗಳೂರು: ಕ್ರಿಸ್‌ಮಸ್ ವೇಳೆಗೆ ಕಾರ್ಡ್ ರಸ್ತೆ ಸಿಗ್ನಲ್ ಮುಕ್ತ
ನಗರದಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಅದರ ನಿವಾರಣೆಗೆಂದು ಹಲವು ಸೇತುವೆಗಳನ್ನು ನಿರ್ಮಿಸಲಾಗಿದೆ. ಇನ್ನು ಕೆಲವೆಡೆ ಮೇಲ್ಸೇತುವೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಆದರೆ ಅವುಗಳ ಸುರಕ್ಷತೆ ಬಗ್ಗೆ ಈಗಲೂ ಅನುಮಾನವಿದೆ. ಪದೇ ಪದೇ ಮೇಲ್ಸೇತುವೆಗಳು ಹಾನಿಗೊಂಡು ಆತಂಕ ಸೃಷ್ಟಿಸಿವೆ. ದೇಶದ ಇತರೆ ಕೆಲವು ಮಹಾನಗರಗಳಲ್ಲಿ ಮೇಲ್ಸೇತುವೆ ಕುಸಿದು ದುರಂತ ಸಂಭವಿಸಿದ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಂತಹ ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಸೇತುವೆಗಳ ಕಾರ್ಯದಕ್ಷತೆ ಬಗ್ಗೆ ಸ್ಟ್ರಕ್ಚರಲ್ ಆಡಿಟ್ ಮಾಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮಸ್ಯೆ ಕಂಡರೆ ದುರಸ್ತಿಗೆ ಶಿಫಾರಸು
ಆಡಿಟ್‌ನಲ್ಲಿ ಮೇಲ್ಸೇತುವೆಗಳ ಸದೃಢತೆ, ಬೇರಿಂಗ್‌್ಸ, ಎಕ್ಸ್‌ಪೆನ್ಷನ್ ಜಾಯಿಂಟ್, ಕಾಂಕ್ರಿಟ್, ಚರಂಡಿ, ವಿದ್ಯುತ್ ದೀಪ, ಡಾಂಬರೀಕರಣ, ಯಾವ ಮಾದರಿಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬಿತ್ಯಾದಿ ವಿಷಯಗಳ ಕಡೆಗೆ ಪಾಲಿಕೆಯ ಎಲ್ಲ ಮುಖ್ಯ ಎಂಜಿನಿಯರ್‌ಗಳು ಪರಿಶೀಲನೆ ನಡೆಸಲಿದ್ದಾರೆ. ನಂತರ ಆಡಿಟ್ ಮಾಡಲಾದ ಮೇಲ್ಸೇತುವೆಗಳಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಅಂತಹವುಗಳನ್ನು ದುರಸ್ತಿಗೆ ಶಿಫಾರಸು ಮಾಡುವುದು ಮತ್ತು ನಿರ್ವಹಣೆ ಮಾಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳುವುದಾಗಿ ಬಿಬಿಎಂಪಿ ತಿಳಿಸಿದೆ.
ಸೇತುವೆ ನಿರ್ಮಾಣ ಮಾಡುವ ಗುತ್ತಿಗೆದಾರರು ಅಪಘಾತ ಶ್ರೇಣಿ ವರದಿಯನ್ನು ಪ್ರತಿ ವರ್ಷ ಪಾಲಿಕೆಗೆ ನೀಡಬೇಕು. ಆದರೆ, ಯಾರೂ ಈವರೆಗೆ ಇಂತಹ ವರದಿಗಳನ್ನು ಸರಿಯಾಗಿ ಕಳುಹಿಸಿಲ್ಲ. ಸೇತುವೆಗಳ ಗುಣಮಟ್ಟದ ವರದಿ ಕಳುಹಿಸಿದರೆ ಯಾವ್ಯಾವ ಮೇಲ್ಸೇತುವೆ ಅಥವಾ ಕೆಳಸೇತುವೆ ಶಿಥಿಲಗೊಳ್ಳುವ ಹಂತದಲ್ಲಿವೆ? ಅಪಘಾತ ವಲಯಗಳು ಹೆಚ್ಚಿವೆ? ಅದಕ್ಕೆ ಏನೇನು ಪರಿಹಾರ ಕಂಡುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸೇತುವೆಗಳ ಗುಣಮಟ್ಟ ಪರಿಶೀಲನೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.