ಬೆಂಗಳೂರು [ನ.08]:  ಬಿಬಿಎಂಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಾಣಂತಿಯರ ಪೌಷ್ಟಿಕಾಂಶ ಕೊರತೆ ನೀಗಿಸಲು ದಿನಕ್ಕೆ ಎರಡು ಹೊತ್ತು ಹಾಲು ನೀಡುವ ಕಾರ್ಯಕ್ರಮ ಜಾರಿಗೆ ಪಾಲಿಕೆ ಮುಂದಾಗಿದೆ. 

ರಾಜ್ಯ ಸರ್ಕಾರದ ‘ಜನನಿ ಸುರಕ್ಷಾ ಯೋಜನೆ’ ಮೂಲಕ ಪೌಷ್ಟಿಕ ಆಹಾರವನ್ನು ವಿತರಿಸುವ ಯೋಜನೆ ಜಾರಿ ಬಂದ ನಂತರ ಹಾಲು ವಿತರಣೆ ನಿಲ್ಲಿಸಲಾಗಿತ್ತು. ಈಗ ಪುನರಾರಂಭಿಸಲು ಉದ್ದೇಶಿಸಲಾಗಿದೆ. 

ಬಿಬಿಎಂಪಿಯ 32 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬಾಣಂತಿಯರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 250 ಮಿಲಿ ಲೀಟರ್ (ಎಂಎಲ್) ಹಾಲು ವಿತರಿಸಲು ಯೋಜನೆ ಸಿದಟಛಿಪಡಿಸಲಾಗಿದೆ. ಶೀಘ್ರದಲ್ಲಿ ಹಾಲು ವಿತರಣೆ ಕಾರ್ಯ ಆರಂಭವಾಗಲಿದೆ ಎಂದು ಬಿಬಿಎಂಪಿ ಮುಖ್ಯಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ಮಾಹಿತಿ ನೀಡಿದ್ದಾರೆ.

ಯೋಜನೆಗಾಗಿ ಸುಮಾರು 15 ಲಕ್ಷ ರು. ಮೀಸಲಿಡಲಾಗಿದೆ. ವರ್ಷಕ್ಕೆ 11 ಸಾವಿರ ಹೆರಿಗೆ ಆಗಲಿವೆ ಎಂದು  ಅಂದಾಜಿಸಲಾಗಿದ್ದು, ಸುಮಾರು ೩೦ ಸಾವಿರ ಲೀಟರ್ ಹಾಲು ಬೇಕಾಗಬಹುದು ಎಂದು ವಿವರಿಸಿದರು.

ಹಾಲು ವಿತರಣೆ ಹೇಗೆ?: ಪ್ರತಿದಿನ ಆಸ್ಪತ್ರೆಯಲ್ಲಿರುವ ಬಾಣಂತಿಯರ ಸಂಖ್ಯೆ ಪಡೆದು ಹಾಲು ವಿತರಕರಿಗೆ ಎಷ್ಟು ಲೀಟರ್ ಹಾಲ ಬೇಕು, ಯಾವ ಆಸ್ಪತ್ರೆಗೆ ಹಾಲು ಬೇಕಾಗಲಿದೆ ಎಂದು ಬೇಡಿಕೆ ಸಲ್ಲಿಸಲಾಗುತ್ತದೆ. ಅದರಂತೆ ಹಾಲು ಪೂರೈಕೆ ಗುತ್ತಿಗೆದಾರರು ಹಾಲು ಪೂರೈಕೆ ಮಾಡುತ್ತಾರೆ. ಆಸ್ಪತ್ರೆ ಸಿಬ್ಬಂದಿ ಹಾಲು ಕಾಯಿಸಿ ಬಾಣಂತಿಯರಿಗೆ ವಿತರಿಸಲಿದ್ದಾರೆ. 

ತಿಂಗಳಾಂತ್ಯಕ್ಕೆ ಒಟ್ಟು ಪೂರೈಕೆಯಾದ ಹಾಲಿನ ಪ್ರಮಾಣಕ್ಕೆ ಬಿಬಿಎಂಪಿ ಹಣ ಬಿಡುಗಡೆ ಮಾಡಲಿದೆ ಎಂದು ನಿರ್ಮಲಾ ಬುಗ್ಗಿ ತಿಳಿಸಿದರು.