ಬೆಂಗಳೂರಿನಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೈಟೆನ್ಶನ್ ವಿದ್ಯುತ್ ವೈಯರ್ ತಗುಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಬೆಂಗಳೂರು (ಅ.18) ಕರೆಂಟ್ ಶಾಕ್ ಹೊಡೆದು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಬೆಂಗಳೂರಿನ ರಾಜಾನುಕುಂಟೆಯ ಅದ್ದೇವಿಶ್ವನಾಥಪುರದಲ್ಲಿ ನಡೆದಿದೆ.ಕೊಟ್ರೇಶಿ ಹಾಗೂ ಸುಧಾ ದಂಪತಿಯ ಮಕ್ಕಳಾದ ಅಯಾನ್​​ ಕೊಟ್ರೇಶಿ(5), ಸಾನ್ವಿ ಕೊಟ್ರೇಶಿ(13) ಗಂಭೀರ ಗಾಯಗೊಂಡಿದ್ದಾರೆ. ಮಕ್ಕಳನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಕ್ಕಳ ಜೊತೆ ವಾಸವಿದ್ದ ಬಾಡಿಗೆ ಮನೆ ಕೂದಲೆಳೆ ಅಂತರದಲ್ಲಿ ಹೈಟೆನ್ಶನ್ ವಯರ್ ಹಾದು ಹೋಗಿದೆ. ಮಾಲೀಕರ ನಿರ್ಲಕ್ಷ್ಯ, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದೀಗ ಇಬ್ಬರು ಮಕ್ಕಳು ಸಾವು ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ಎದುರಾಗಿದೆ ಎಂದು ಮಕ್ಕಳ ಪೋಷಕರು ಕಣ್ಣೀರಿಟ್ಟಿದ್ದಾರೆ.

ಮನೆಯ ಬಾಲ್ಕನಿ ಪಕ್ಕದಲ್ಲೇ ಹೈಟೆನ್ಶನ್ ವೈಯರ್ ಹಾದು ಹೋಗಿದೆ. ಸಾನ್ವಿ ಕೊಟ್ರೇಶಿ ಬಲಗೈ ತುಂಡಾಗಿದೆ. ಇದೀಗ ಕಾಲು ಕತ್ತರಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಇತ್ತ ಗಂಡು ಮಗು ಅಯಾನ್ ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹೇಗಾಯಿತು?

ತಾಯಿ ಸುಧಾ ಮನೆಗೆ ಸ್ಕೂಟಿ ಮೂಲಕ ಆಗಮಿಸಿದ್ದಾರೆ. ಸ್ಕೂಟಿ ಪಾರ್ಕ್ ಮಾಡುವಾಗ ಇಬ್ಬರು ಮಕ್ಕಳು ಬಾಲ್ಕನಿಯಲ್ಲಿ ನಿಂತು ನೋಡಿದ್ದಾರೆ. ಸುಧಾ ಮಹಡಿ ಮೇಲೆ ಹತ್ತಿ ಬರುವಷ್ಟರಲ್ಲಿ ಮಕ್ಕಳಿಗೆ ಹೈಟೆನ್ಶನ್ ವಿದ್ಯುತ್ ವೈಯರ್ ತುಗಲಿದೆ. ಕರೆಂಟ್ ಶಾಕ್‌ಗೆ ಬಹುತೇಕ ಸುಟ್ಟ ಗಾಯ, ಕೈ ತುಂಡಾಗಿ ಬಿದ್ದಿದ್ದಾರೆ. ತಕ್ಷಣವೇ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾಲೀಕರಿಗೆ ಮೊದಲೇ ಸೂಚಿಸಿದ್ದ ಕೊಟ್ರೇಶಿ

ಮಕ್ಕಳ ವಿದ್ಯಾಭ್ಯಾಸ ಸಲುವಾಗಿ ಇತ್ತೀಚೆಗಷ್ಟೇ ಈ ಮನಗೆ ಆಗಮಿಸಿದ್ದರು. ಮನೆಗೆ ಬಂದ ಬಳಿಕ ಮನೆ ಮುಂದೆ ಹೈಟೆನ್ಶನ್ ವೈಯರ್ ಕುರಿತು ಗೊತ್ತಾಗಿದೆ. ಹೀಗಾಗಿ ಮನೆ ಮಾಲೀಕರಿಗೆ ಸೂಚಿಸಿದ್ದಾರೆ. ಈ ಹಿಂದಿನ ಎಲ್ಲಾ ಬಾಡಿಗೆದಾರರು ಈ ಮನೆಯಲ್ಲಿ ವಾಸವಿದ್ದರು. ಅವರಿಗೆ ಯಾರಿಗೂ ತೊಂದರೆಯಾಗಿಲ್ಲ ಎಂದು ಪೋಷಕರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಕೊಟ್ರೇಶಿ ಆರೋಪಿಸಿದ್ದಾರೆ. ಮನೆ ಮಾಲೀಕನ ನಿರ್ಲಕ್ಷ್ಯ ವಹಿಸಿದ್ದಾರೆ.ಇತ್ತ ಬೆಸ್ಕಾಂ ಅಧಿಕಾರಿಗಳು ಕೇವಲ ಟೇಪ್ ಹಾಕಿ ಹೈಟೆನ್ಶನ್ ವೈಯರ್ ಸುತ್ತಿದ್ದಾರೆ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಬೆಸ್ಕಾಂ ಅದಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮನೆಯ ಪಕ್ಕದಲ್ಲೇ ಹೈಟೆನ್ಶನ್ ವೈಯರ್ ಹಾದು ಹೋಗಿದೆ. ಈ ಕುರಿತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆಮನೆ ಮಾಲೀಕ ಹಾಗೂ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಸದ್ಯ ಮಕ್ಕಳ ಚೇತರಿಕೆಗೆ ಪಾರ್ಥಿಸುತ್ತಿದ್ದಾರೆ