ಡಾಂಬರೀಕರಣ ಕಾಮಗಾರಿಯ ಕಾರಣ, ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಮೇಲ್ಸೇತುವೆಯಲ್ಲಿ  ಎಂಟು ದಿನಗಳ ಕಾಲ ರಾತ್ರಿ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳಿಗಾಗಿ ಪೊಲೀಸರು ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾರೆ.

ಬೆಂಗಳೂರು: ಡಾಂಬರೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ (ಡಾ.ಶ್ರೀ ಶಿವಕುಮಾರ ಸ್ವಾಮೀಜಿ) ಮೇಲ್ಸೇತುವೆಯಲ್ಲಿ (ಬೆಂಗಳೂರು ಕಡೆ ಬರುವ ಮಾರ್ಗ) ಎಂಟು ದಿನಗಳ ಕಾಲ ರಾತ್ರಿ ವೇಳೆ ವಾಹನಗಳ ಓಡಾಟಕ್ಕೆ ಸಂಚಾರ ವಿಭಾಗದ ಪೊಲೀಸರು ನಿರ್ಬಂಧಿಸಿದ್ದಾರೆ. ಈ ತಾತ್ಕಾಲಿಕ ಸಂಚಾರ ವ್ಯವಸ್ಥೆ ಬದಲಾವಣೆಗೆ ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.

ರಾತ್ರಿ 12 ರಿಂದ ಬೆಳಗ್ಗೆ 5 ಗಂಟೆಯವರೆಗೆ ರಸ್ತೆ ಬಂದ್

ಜು.27 ರಿಂದ ಆ.5ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗೆ 5 ಗಂಟೆಯವರೆಗೆ ಹಾಗೂ ಈ ಅವಧಿಯ ಶನಿವಾರ ಮತ್ತು ಭಾನುವಾರ ರಾತ್ರಿ 12 ರಿಂದ ಬೆಳಗ್ಗೆ 5 ಗಂಟೆಯವರೆಗೆ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಪೊಲೀಸರು ನಿಷೇಧಿಸಿದ್ದಾರೆ.

ಪರ್ಯಾಯ ಮಾರ್ಗ ಈ ರೀತಿಯಾಗಿದೆ

ನೆಲಮಂಗಲದಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕೆನ್ನಮೆಟಲ್ ಫ್ಯಾಕ್ಟರಿ ಹತ್ತಿರ ಫೈಓವರ್ ಕೆಳಭಾಗದ ಎನ್.ಹೆಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ ತಲುಪಬೇಕು. ಅಲ್ಲಿಂದ ದಾಸರಹಳ್ಳಿ ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ನಿಂದ ಗೊರಗುಂಟೆಪಾಳ್ಯ ಮೂಲಕ ಸಂಚರಿಸಬಹುದಾಗಿದೆ.