ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ಪ್ರತಿ ಕೆಜಿಗೆ ₹50 ರಿಂದ ₹10 ರವರೆಗೆ ಭಾರಿ ಕುಸಿತ ಕಂಡಿದೆ. ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗಿರುವುದು ಮತ್ತು ಬೇಡಿಕೆ ಕಡಿಮೆಯಾಗಿರುವುದು ಈ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಆದಾಗ್ಯೂ, ನಗರದ ವಿವಿಧ ಪ್ರದೇಶಗಳು ಮತ್ತು ಆನ್‌ಲೈನ್ ಆಪ್‌ಗಳಲ್ಲಿ ಚಿಲ್ಲರೆ ದರಗಳು ಭಿನ್ನವಾಗಿವೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟೊಮೆಟೊ ದರದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ ₹50 ರಿಂದ ₹10 ರವರೆಗೂ ಕುಸಿದಿದ್ದು, ಗ್ರಾಹಕರಿಗೆ ದೊಡ್ಡ ನಿರಾಳತೆ ತಂದಿದೆ. ಆದರೆ ಟೊಮೆಟೋ ಬೆಳೆಗಾರರಿಗೆ ನಿರಾಸೆ ತಂದಿದೆ, ಈ ಬೆಲೆ ಇಳಿಕೆಯು ನಗರದ ಎಲ್ಲಾ ಪ್ರದೇಶಗಳು ಮತ್ತು ಎಲ್ಲಾ ತಳಿಯ ಟೊಮೆಟೊಗಳಿಗೆ ಏಕರೂಪವಾಗಿ ಅನ್ವಯಿಸುತ್ತಿಲ್ಲ ಎಂಬುದು ಮಾರುಕಟ್ಟೆ ಸಮೀಕ್ಷೆಯಿಂದ ತಿಳಿದುಬಂದಿದೆ.
ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳೇನು?
ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಹೆಚ್ಚಾಗಿರುವುದು, ಗ್ರಾಹಕರ ಖರೀದಿ ಪ್ರಮಾಣ ನಿಧಾನವಾಗಿರುವುದು ಹಾಗೂ ನಿರೀಕ್ಷಿತ ಮಟ್ಟದಲ್ಲಿ ಬೇಡಿಕೆ ಬಾರದಿರುವುದು ಈ ಬೆಲೆ ಕುಸಿತಕ್ಕೆ ಮೂಲ ಕಾರಣವಾಗಿದೆ.
ಬೆಂಗಳೂರು ನಗರಕ್ಕೆ ಪ್ರಮುಖವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯವಾದ ತಮಿಳುನಾಡಿನಿಂದ ಟೊಮೆಟೊ ಸರಬರಾಜಾಗುತ್ತದೆ. ಕರ್ನಾಟಕದಲ್ಲಿ ಕೋಲಾರ ಜಿಲ್ಲೆಯು ಅತಿ ದೊಡ್ಡ ಟೊಮೆಟೊ ಉತ್ಪಾದನಾ ಕೇಂದ್ರವಾಗಿದ್ದು, ಸುಮಾರು 15,000 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತದೆ. ಇಲ್ಲಿಂದ ಉತ್ತರ ಭಾರತದ ರಾಜ್ಯಗಳಿಗೆ ಹಾಗೂ ಬಾಂಗ್ಲಾದೇಶದಂತಹ ನೆರೆಯ ದೇಶಗಳಿಗೂ ಟೊಮೆಟೊ ರಫ್ತಾಗುತ್ತದೆ. ಪ್ರಸ್ತುತ ಸ್ಥಳೀಯ ಮಾರುಕಟ್ಟೆಯಲ್ಲಿ ಸಂಗ್ರಹ ಹೆಚ್ಚಿರುವುದರಿಂದ ದರದಲ್ಲಿ ಇಳಿತ ಕಂಡುಬಂದಿದೆ.
ವಿವಿಧ ಪ್ರದೇಶಗಳಲ್ಲಿ ಚಿಲ್ಲರೆ ದರ ವ್ಯತ್ಯಾಸ
ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ಟೊಮೆಟೊ ತಳಿ, ಗಾತ್ರ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಮಾರಾಟಗಾರರು ವಿಭಿನ್ನ ದರಗಳನ್ನು ನಿಗದಿಪಡಿಸಿದ್ದಾರೆ:
ಸೌತ್ ಎಂಡ್ ಸರ್ಕಲ್: ಇಲ್ಲಿನ ವ್ಯಾಪಾರಿಗಳ ಪ್ರಕಾರ, ಕೇವಲ ನಾಲ್ಕು ದಿನಗಳ ಅಂತರದಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ ₹50 ರಿಂದ ₹30 ಕ್ಕೆ ಇಳಿಕೆಯಾಗಿದೆ. ಹಬ್ಬದ ಸೀಸನ್‌ನಲ್ಲೂ ಗ್ರಾಹಕರಿಂದ ನಿರೀಕ್ಷಿತ ಬೇಡಿಕೆ ಬಂದಿಲ್ಲ.
ಬಸವನಗುಡಿ: ಗುಣಮಟ್ಟಕ್ಕೆ ಅನುಗುಣವಾಗಿ ಪ್ರಸ್ತುತ ₹20, ₹30 ಮತ್ತು ₹40೦ ರಂತೆ ಮಾರಾಟವಾಗುತ್ತಿದೆ. ಇತ್ತೀಚೆಗೆ ಬಿದ್ದ ಮಳೆಯ ನಡುವೆಯೂ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದ ಸ್ಟಾಕ್ ಉಳಿದುಕೊಂಡಿರುವುದು ದರ ಕುಸಿತಕ್ಕೆ ಕಾರಣವಾಗಿದೆ.
ಕೋರಮಂಗಲ: ಇಲ್ಲಿನ ಚಿಲ್ಲರೆ ವ್ಯಾಪಾರಿಗಳ ಪ್ರಕಾರ ಬೆಲೆಯಲ್ಲಿ ತಕ್ಷಣದ ಭಾರಿ ಕುಸಿತವೇನೂ ಕಂಡಿಲ್ಲ. ದರಗಳು ಕಳೆದ ಕೆಲವು ದಿನಗಳಿಂದ ₹25 ರಿಂದ ₹35 ರ ಗಡಿಯಲ್ಲೇ ಸ್ಥಿರವಾಗಿವೆ.
ಆನ್‌ಲೈನ್ ಡೆಲಿವರಿ ಆಪ್‌ಗಳು: ಬ್ಲಿಂಕಿಟ್, ಝೆಪ್ಟೋ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ ಬೆಲೆ ಪ್ರತಿ ಕೆಜಿಗೆ ₹30 ರಿಂದ ₹40 ರ ವ್ಯಾಪ್ತಿಯಲ್ಲಿದೆ.
ಒಟ್ಟಾರೆಯಾಗಿ, ಹೋಲ್‌ಸೇಲ್ ಮಾರುಕಟ್ಟೆಗಳಲ್ಲಿ ದರ ಶೇಕಡಾ 80ರಷ್ಟು ಕುಸಿದಿದ್ದರೂ, ಸ್ಥಳೀಯ ಚಿಲ್ಲರೆ ಅಂಗಡಿಗಳು ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಗ್ರಾಹಕರು ಇಂದಿಗೂ ಸಣ್ಣಮಟ್ಟದ ವ್ಯತ್ಯಾಸದೊಂದಿಗೆ ಹಣ ಪಾವತಿಸಬೇಕಾಗಿದೆ.


