ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಶ್ರಮದಿಂದ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ನಡುವೆ 5,800 ಎಕರೆಯಲ್ಲಿ ಕ್ವಿನ್ ಸಿಟಿ ಯೋಜನೆ ಜಾರಿಯಾಗುತ್ತಿದೆ. ಸುಮಾರು 40 ಸಾವಿರ ಕೋಟಿ ರೂ. ಹೂಡಿಕೆ ಮತ್ತು 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಈ ಯೋಜನೆಯು ಜಾಗತಿಕ ಶಿಕ್ಷಣ, ಆರೋಗ್ಯ ಮತ್ತು ತಂತ್ರಜ್ಞಾನ ವಲಯಗಳಿಗೆ ಆದ್ಯತೆ ನೀಡಲಿದೆ.

ಬೆಂಗಳೂರು: ರಾಜ್ಯಕ್ಕೆ ಬೃಹತ್‌ ಕೈಗಾರಿಕೆಗಳನ್ನು ತರುವುದು, ಆ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ, ಮೂಲಸೌಕರ್ಯ ಒದಗಿಸುವುದಷ್ಟೇ ಅಲ್ಲದೆ ಕ್ವಿನ್‌ ಸಿಟಿಯಂತಹ ಪ್ರಮುಖ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಸಾಕಷ್ಟು ಶ್ರಮವಹಿಸುತ್ತಿದ್ದಾರೆ.

5800 ಎಕರೆ ಭೂಮಿಯಲ್ಲಿ ಕ್ವಿನ್‌ ಸಿಟಿ

ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ನಡುವಿನ ಸುಮಾರು 5800 ಎಕರೆ ಭೂಮಿಯಲ್ಲಿ ಕ್ವಿನ್‌ ಸಿಟಿ ಅನುಷ್ಠಾನಗೊಳಿಸಲಾಗುತ್ತಿದೆ. ಕ್ವಿನ್‌ ಸಿಟಿಯಲ್ಲಿ ಅಂದಾಜು 40 ಸಾವಿರ ಕೋಟಿ ರು.ಗೂ ಹೆಚ್ಚಿನ ಹೂಡಿಕೆ ನಿರೀಕ್ಷೆ ಹೊಂದಲಾಗಿದ್ದು, 1 ಲಕ್ಷಕ್ಕೂ ಹೆಚ್ಚಿನ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳ ನಿರೀಕ್ಷೆ ಹೊಂದಲಾಗಿದೆ. ಕ್ವಿನ್ ಸಿಟಿಯಲ್ಲಿ ವಿಶ್ವದ ಟಾಪ್‌ 500 ವಿಶ್ವವಿದ್ಯಾಲಯಗಳ, ಜಾಗತಿಕ ಮಟ್ಟದ ಪ್ರಸಿದ್ಧ ಆಸ್ಪತ್ರೆಗಳು, ಎಐ, ಸೆಮಿಕಂಡಕ್ಟರ್‌, ಫ್ಯೂಚರ್‌ ಮೊಬಿಲಿಟಿ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಸಿಂಗಾಪುರ, ಪ್ಯಾರಿಸ್‌ ಮತ್ತು ಟೋಕಿಯೋ ಮಾದರಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಕ್ವಿನ್ ಸಿಟಿಯಲ್ಲಿ ಮೊದಲ ಹಂತದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಶೀಘ್ರ ಚಾಲನೆ ನೀಡಲಾಗುತ್ತಿದೆ.

9 ವಲಯಗಳಾಗಿ ವಿಂಗಡನೆ

ಕ್ವಿನ್‌ ಸಿಟಿಯನ್ನು 9 ವಲಯಗಳಾಗಿ ವಿಂಗಡಿಸಲಾಗಿದೆ. ಅದರಂತೆ ಜ್ಞಾನಾಧಾರಿತ ಸಂಸ್ಥೆಗಳಿಗೆ 718.10 ಎಕರೆ, ಆರೋಗ್ಯ ಸೇವೆ ಉದ್ದಿಮೆಗಳಿಗೆ 605.70 ಎಕರೆ, ನವೀನತೆ ಮತ್ತು ಸಂಶೋಧನಾ ಸಂಸ್ಥೆಗಳಿಗೆ 841.20 ಎಕರೆ, ಕೈಗಾರಿಕೆಗಳಿಗೆ 547 ಎಕರೆ, ವಸತಿ ಸೌಕರ್ಯಕ್ಕೆ 518 ಎಕರೆ, ಸುಸ್ಥಿರ ಪರಿಸರಕ್ಕಾಗಿ 426 ಎಕರೆ, ಬಫರ್‌ ವಲಯವಾಗಿ 403 ಎಕರೆ, ವಾಹನ ನಿಲುಗಡೆ ಉದ್ದೇಶಕ್ಕೆ 237.20 ಎಕರೆ, ವಾಣಿಜ್ಯೋದ್ದೇಶಕ್ಕೆ 83.70 ಎಕರೆ ಮೀಸಲಿಡಲಾಗಿದೆ.

ಇನ್ನು, ಕ್ವಿನ್‌ ಸಿಟಿಯಲ್ಲಿ ಜೀವ ವಿಜ್ಞಾನ, ಭವಿಷ್ಯದ ಸಂಚಾರ ವ್ಯವಸ್ಥೆ, ಸೆಮಿಕಂಡಕ್ಟರ್‌, ಅಡ್ವಾನ್ಸ್ಡ್‌ ಮೆಟೀರಿಯಲ್ಸ್‌, ಅಡ್ವಾನ್ಸ್ಡ್‌ ಮ್ಯಾನುಫ್ಯಾಕ್ಚರಿಂಗ್‌, ವೈಮಾನಿಕ ತಂತ್ರಜ್ಞಾನ, ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಕಂಪೆನಿಗಳ ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ.

1 ಸಾವಿರ ಕೋಟಿ ರು. ವೆಚ್ಚ

ಈ ಬೃಹತ್ ಯೋಜನೆಯಲ್ಲಿ ಹೂಡಿಕೆ ಮಾಡಲು ಈಗಾಗಲೇ ಪ್ರಮುಖ ಜಾಗತಿಕ ಸಂಸ್ಥೆಗಳು ಒಡಂಬಡಿಕೆಯನ್ನೂ ಮಾಡಿಕೊಂಡಿವೆ. ಅದರಲ್ಲಿ ಪ್ರಮುಖವಾಗಿ ಜರ್ಮನಿಯ ಪ್ರಷ್ಷ್ಠಿತ ಕೆಎಫ್‌ಡಬ್ಲ್ಯು ಸಂಸ್ಥೆಯು 1 ಸಾವಿರ ಕೋಟಿ ರು. ವೆಚ್ಚದಲ್ಲಿ ಕ್ಯಾಂಪಸ್‌ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದೆ. ಲಂಡನ್‌ನ ಸೇಂಟ್‌ ಜಾನ್ಸ್‌, ಲೀವರ್‌ಪೂಲ್‌ ವಿಶ್ವವಿದ್ಯಾಲಯ ಸೇರಿದಂತೆ ಜಾಗತಿಕ ಶಿಕ್ಷಣ ಸಂಸ್ಥೆಗಳು ಹೂಡಿಕೆಗೆ ಆಸಕ್ತಿ ತೋರಿವೆ.