ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ 6ನೇ 'ಕನ್ನಡ ಪುಸ್ತಕ ಹಬ್ಬ'ವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಉದ್ಘಾಟಿಸಿದರು. ತಂತ್ರಜ್ಞಾನದ ಯುಗದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಭೌತಿಕ ಪುಸ್ತಕಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಯ ಕುರಿತು ಶತಾವಧಾನಿ ಡಾ. ಆರ್. ಗಣೇಶ್ ಮತ್ತು ಗಣ್ಯರು ಒತ್ತು ನೀಡಿದರು.
ಬೆಂಗಳೂರು: ಪುಸ್ತಕದ ಪುಟಗಳು ಸೀಮಿತವಾಗಿರಬಹುದು. ಆದರೆ ಅದು ತೆರೆದಿಡುವ ಸಾಧ್ಯತೆಗಳು ಅಪಾರ. ಒಂದು ಒಳ್ಳೆಯ ಪುಸ್ತಕದ ಮಹತ್ವ ಅದನ್ನು ಓದಿ ಮುಗಿಸಿದ ನಂತರವೂ ಅದು ನಮ್ಮೊಳಗೆ ಮುಂದುವರಿಯುವುದರಲ್ಲಿ ಇದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯವು ಅಕ್ಟೋಬರ್ 31ರಿಂದ ಡಿಸೆಂಬರ್ 6 ರವರೆಗೆ ಆಯೋಜಿಸಿರುವ 37 ದಿನಗಳ 6ನೇ 'ಕನ್ನಡ ಪುಸ್ತಕ ಹಬ್ಬ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುಸ್ತಕ ಹಬ್ಬವೆಂದರೆ ಲೇಖಕ ಮತ್ತು ಓದುಗ ಭೇಟಿಯಾಗುವ ಒಂದು ಸುಂದರ ಸಂದರ್ಭ. ಒಂದು ತಲೆಮಾರಿನ ಅನುಭವ ಮತ್ತೊಂದು ತಲೆಮಾರಿನ ಕುತೂಹಲದೊಂದಿಗೆ ಸಂವಾದ ನಡೆಸುವ ಸಮಯ. ನಾವು ಬದುಕಿರುವ ಜಗತನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು, ನಮ್ಮೊಳಗಿನ ಜಗತ್ತನ್ನು ಇನ್ನಷ್ಟು ವಿಶಾಲಗೊಳಿಸಲು ದೊರೆಯವ ಅವಕಾಶ ಎಂದರು.
ಕನ್ನಡ ರಾಜ್ಯೋತ್ಸವದ ಹೊಸ್ತಿಲಿನಲ್ಲಿ ಕನ್ನಡ ಪುಸ್ತಕ ಹಬ್ಬ ಆರಂಭಗೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ. ಕನ್ನಡದ ಮೇಲಿನ ಅಭಿಮಾನವು ಓದುವ ಅಭ್ಯಾಸವಾಗಿ, ಬರೆಯುವ ಪ್ರೇರಣೆಯಾಗಿ ಮುಂದಿನ ತಲೆಮಾರಿಗೆ ಭಾಷೆಯನ್ನು ತಲುಪಿಸುವ ಹೊಣೆಗಾರಿಕೆಯಾಗಿ ಬೆಳೆದಾಗ ರಾಜ್ಯೋತ್ಸವದ ಸಂತೋಷಕ್ಕೆ ಶಾಶ್ವತವಾದ ಅರ್ಥ ದೊರೆಯುತ್ತದೆ. ಓದಿನಿಂದ ಬಂದ ಜ್ಞಾನ ನಮ್ಮ ನಡವಳಿಕೆಯಲ್ಲಿ ಕಾಣಿಸಿಕೊಂಡಾಗ ಅದಕ್ಕೆ ಸಾರ್ಥಕತೆ ಬರುತ್ತದೆ. ಒಂದು ಉತ್ತಮ ಪುಸ್ತಕ ನಮ್ಮ ಗಮನವನ್ನು ಹಿಡಿದಿಡುತ್ತದೆ. ವಿಚಾರದ ಹಲವು ಮುಖಗಳನ್ನು ಪರಿಚಯಿಸುತ್ತದೆ. ಆತುರದ ತೀರ್ಮಾನವನ್ನು ತಡೆದು, ಸ್ವಲ್ಪ ಇನ್ನಷ್ಟು ಯೋಚಿಸುವಂತೆ ಮಾಡುತ್ತದೆ. ಒಂದು ಪುಸ್ತಕ ಓದುಗನ ಕೈ ಸೇರಿದಾಗ ಲೇಖಕನ ಶ್ರಮ ಸಾರ್ಥಕವಾಗುತ್ತದೆ. ಅದರ ವಿಚಾರವನ್ನು ಓದುಗ ವಿವೇಕದಿಂದ ಪರಿಶೀಲಿಸಿದಾಗ ಜ್ಞಾನ ಬೆಳೆಯುತ್ತದೆ. ಆ ಅರಿವು ಬದುಕಿನಲ್ಲಿ ಒಳ್ಳೆಯ ಕಾರ್ಯವಾಗಿ ರೂಪುಗೊಂಡಾಗ ಸಮಾಜಕ್ಕೆ ಪ್ರಯೋಜನವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಇಂದು ತಂತ್ರಜ್ಞಾನದಿಂದ ಮಾಹಿತಿ ಬಹಳ ವೇಗವಾಗಿ ಹರಡುತ್ತದೆ. ಆದರೆ ಯಾವುದೇ ಸಂದೇಶವನ್ನು ಮುಂದಕ್ಕೆ ಕಳುಹಿಸುವ (ಫಾರ್ವರ್ಡ್ ಮಾಡುವ) ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಇದು ಓದುವ ಸಂಸ್ಕೃತಿಯ ಭಾಗವಾಗಬೇಕು. ಉತ್ತಮ ಪುಸ್ತಕಗಳು ಆತುರದ ತೀರ್ಮಾನಗಳನ್ನು ತಡೆದು, ವಿವೇಕದಿಂದ ಯೋಚಿಸುವ ಶಕ್ತಿಯನ್ನು ನೀಡುತ್ತವೆ ಎಂದು ಕಿವಿಮಾತು ಹೇಳಿದರು.
ಕನ್ನಡದ ಮೂಲಕ ಜಗತ್ತಿನ ಜ್ಞಾನವನ್ನು ಅರಿಯುವಂತಾಗಲು ಭಾಷಾಂತರ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಸಿಗಬೇಕು. ರೈತನ, ಕಾರ್ಮಿಕನ ಅಥವಾ ಸಮಾಜದ ಅಂಚಿನಲ್ಲಿರುವವರ ಬದುಕಿನ ಕೃತಿಗಳನ್ನು ಓದಿದಾಗ ಮಾತ್ರ ಅವರ ನೋವು-ಸ್ವಾಭಿಮಾನಗಳು ನಮಗೆ ಅರ್ಥವಾಗುತ್ತವೆ. ನ್ಯಾಯದಾನದ ಕ್ಷೇತ್ರದಲ್ಲೂ ಕೇವಲ ಕಾನೂನು, ಸಾಕ್ಷ್ಯಗಳಷ್ಟೇ ಅಲ್ಲದೆ, ಮನುಷ್ಯನ ಬದುಕಿನ ವಾಸ್ತವಗಳನ್ನು ಗ್ರಹಿಸುವ ಇಂತಹ ಸೂಕ್ಷ್ಮ ಸಂವೇದನೆ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡ ಪುಸ್ತಕ ಹಬ್ಬದಿಂದ ನಾವು ಒಂದು ಸಣ್ಣ ಸಂಕಲ್ಪವನ್ನು ಮನೆಗೆ ತೆಗೆದುಕೊಂಡು ಹೋಗೋಣ. ಪ್ರತಿದಿನ ಓದಿಗೆ ಸ್ವಲ್ಪ ಸಮಯ ಮೀಸಲಿಡೋಣ. ಒಂದು ಒಳ್ಳೆಯ ಪುಸ್ತಕವನ್ನು ಮತ್ತೊಬ್ಬರಿಗೆ ಪರಿಚಯಿಸೋಣ. ಒಂದು ಮಗುವಿಗೆ ಕಥೆ ಓದಿ ಕೇಳಿಸೋಣ. ಸಾಧ್ಯವಾದಾಗ ಒಂದು ಶಾಲೆ ಅಥವಾ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕ ನೀಡೋಣ. ಈ ಸಣ್ಣ ಕಾರ್ಯಗಳೇ ಸಮಾಜದ ಓದುವ ಸಂಸ್ಕೃತಿಯನ್ನು ಬಲಪಡಿಸುತ್ತವೆ ಎಂದರು.
ಶತಾವಧಾನಿ ಡಾ. ಆರ್ ಗಣೇಶ್ ಮಾತು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪದ್ಮಭೂಷಣ ಪುರಸ್ಕೃತ ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ.ಆರ್.ಗಣೇಶ್ ಮಾತನಾಡಿದರು. ಈಗಿನ ಕಾಲದಲ್ಲಿ ಜನರನ್ನು ಸಭೆಗೆ ಬರುವಂತೆ ಮಾಡುವುದು, ಪುಸ್ತಕ ಓದುವಂತೆ ಮಾಡುವುದು ದೊಡ್ಡ ಸಾಹಸ. ನಮಗೆ ಬೇಕಾಗಿರುವುದನ್ನು ಮಾತ್ರ ಆರಿಸಿ ಆ ಹೊತ್ತಿಗೆ ತೆಗೆದುಕೊಳ್ಳುತ್ತೇವೆ ಎಂದುಕೊಂಡರೆ ಜ್ಞಾನ ಹೇಗೆ ಬೆಳೆದು ಬಂದಿದೆ ಎಂಬುದು ಗೊತ್ತಾಗುವುದಿಲ್ಲ. ಅಲ್ಲದೇ ಜ್ಞಾನದ ಬೇರು ಹೇಗೆ ಬೆಳೆದು ಬಂತು ಎನ್ನುವುದೂ ಅರಿವಿಗೆ ಬರುವುದಿಲ್ಲ. ನಾವು ಕೆಲವೊಂದಿಷ್ಟು ವಿಚಾರಗಳಲ್ಲಾದರೂ ಸಂಪೂರ್ಣಗ್ರಾಹಿಗಳಾಗಿರಬೇಕು. ಅಂತಹ ಸಂದರ್ಭದಲ್ಲಿ ಮಿಕ್ಕ ಕೆಲವು ವಿಚಾರಗಳಲ್ಲಿ ಸಾರಗ್ರಾಹಿಗಳಾದರೆ ತೊಂದರೆಯಿಲ್ಲ. ಆ ದೃಷ್ಟಿಯಿಂದ ನಾವು ನಮ್ಮೊಳಗೆ ಒಂದಿಷ್ಟು ಸಂಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಕೆಲವು ಪುಸ್ತಕಗಳನ್ನಾದರೂ ಓದಿರಬೇಕಾಗುತ್ತದೆ. ಸೆಲೆಕ್ಟಿವ್ ಅಮ್ನಿಷಿಯಾ ಅನ್ನೋದು ಮನುಷ್ಯನಲ್ಲಿ ಬಂದರೆ ಅದು ಬಹಳ ಅಪಾಯಕಾರಿ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಕುರಿತು ಅತ್ಯಂತ ಉಪೇಕ್ಷೆ ಬಂದಿರುವುದು ಅಪಾಯಕಾರಿ. ಮಾತೃಭಾಷೆ ಕನ್ನಡವಾಗಿರುವ ಪೋಷಕರ ಮನೆಯಲ್ಲೂ ಕನ್ನಡ ಮಾತನಾಡುತ್ತಿಲ್ಲ. ಮಾತಿನಲ್ಲಿ ಇಂತಹ ಭಾವ ಇದ್ದಾಗ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನೆ ಏಳುತ್ತದೆ. ಕೆಲವು ದಿನಗಳ ಹಿಂದೆ ಗೂಗಲ್ ಸಂಸ್ಥೆಯು ಲಕ್ಷಾಂತರ ಪುಸ್ತಕಗಳನ್ನು ಡಿಜಿಟಲೈಸ್ ಮಾಡಿ ಅದರ ಮೂಲ ಪ್ರತಿಯನ್ನು ಪುಡಿ ಮಾಡಿ ಹರಿದು ಹಾಕುತ್ತದೆ ಎಂಬ ಸುದ್ದಿ ಬಂದಿತ್ತು. ಆದರೆ, ಒಂದು ದಿನ ಡಿಜಿಟಲ್ ಕಾಪಿ ಕೊಡುವುದಿಲ್ಲ ಎಂದರೆ ಮೂಲ ಪ್ರತಿಗಳಾಗಿ ಏನು ಮಾಡಬೇಕು. ನಾವು ನಮ್ಮ ದೇಶದ ಪುಸ್ತಕಗಳನ್ನು, ನಮ್ಮ ಲೇಖಕರ ಪುಸ್ತಕಗಳನ್ನು, ಜ್ಞಾನ ಪರಂಪರೆಯ ಗ್ರಂಥಗಳನ್ನು ನಾವು ಕಾಪಾಡಿಕೊಳ್ಳದೇ ಇದ್ದರೆ ಯಾರೋ ಯಾವುದೋ ದೇಶದಲ್ಲಿ ಇದ್ದವರು ಇಲ್ಲ ನಿಮಗೆ ಸಿಗೊಲ್ಲ ಅಂದು ಬಿಡುತ್ತಾರೆ ಅಂತಹ ದುಸ್ಥಿತಿ ಎದುರಾದರೆ ನಿಜಕ್ಕೂ ಕಷ್ಟ. ಇಂಥದ್ದೆನ್ನಲ್ಲಾ ನೋಡಿದಾಗ ನಾವು ಪಾರಂಪರಿಕವಾಗಿ ಉಳಿಸಿಕೊಂಡು ಬಂದ ಜ್ಞಾನ ಏನಿದೆ ಅದನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ತಂತ್ರಜ್ಞಾನ ಬಂದರೂ ನಾವು ಹಾರ್ಡ್ಕಾಪಿಯನ್ನು ಬಿಡಲು ಸಾಧ್ಯವಿಲ್ಲ ಎಂದು ನನಗೆ ಅನ್ನಿಸುತ್ತದೆ. ಇಡೀ ಪುಸ್ತಕ ಪ್ರಕಟಣೆಯ ಪ್ರಕ್ರಿಯೆಯ ಅನುಭವ ನಮ್ಮದಾಗಬೇಕು. ಪುಸ್ತಕ ಸಂಸ್ಕೃತಿ ಬಹಳ ಮಹತ್ವದ್ದು ಹಾಗೂ ಅನಿವಾರ್ಯವಾದದ್ದು. ಪಾಶ್ಚಾತ್ಯ ಜಗತ್ತಿನಲ್ಲಿ ಕಂಡಾಗ ನಮಗಿಂತ ಎಷ್ಟೋ ವಿಷಯಗಳಲ್ಲಿ ಆಧುನಿಕವಾಗಿದ್ದರೂ ಪುಸ್ತಕ ಸಂಸ್ಕೃತಿ ಎನ್ನುವುದು ಅಲ್ಲಿನ ದೇಶಗಳಲ್ಲಿ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಹಾಗಾಗಿ ಪುಸ್ತಕ ಸಂಸ್ಕೃತಿಯನ್ನು ನಾವೇ ಉಳಿಸಿ, ಬೆಳೆಸಬೇಕು ಎಂದು ಹೇಳುವ ಜೊತೆಗೆ ಕನ್ನಡ ಪುಸ್ತಕ ಹಬ್ಬಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಕಾರ್ಯದರ್ಶಿಗಳಾದ ವಿ. ನಾಗರಾಜ್, ರಾಷ್ಟ್ರೋತ್ಥಾನ ಪರಿಷತ್ನ ಅಧ್ಯಕ್ಷರಾದ ಎಂ. ಪಿ. ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.






