ಬೆಂಗಳೂರು(ಜು.12):  ಕೊರೋನಾ ವೈರಸ್ ಅತಿಯಾಗುತ್ತಿರುವ ಕಾರಣ ಬೆಂಗಳೂರು ಮತ್ತೆ ಲಾಕ್‌ಡೌನ್ ಆಗುತ್ತಿದೆ. ಮಂಗಳವಾರದಿಂದ(ಜು.14) ರಾತ್ರಿ 8 ಗಂಟೆಯಿಂದ ಮತ್ತೆ ಲಾಕ್‌ಡೌನ್ ಮಾಡಲಾಗುತ್ತಿದೆ. ಇತ್ತ ನಗರದ ಹಲವು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರಿಸಿದೆ. ಹೀಗಾಗಿ ಐಟಿ ಉದ್ಯೋಗಿಗಳು ಸೇರಿದಂತೆ ಹಲವರು ತಮ್ಮ ತಮ್ಮ ಊರಿಗೆ ತೆರಳುತ್ತಿದ್ದಾರೆ. ಈ ವೇಳೆ ತಮ್ಮ ಬೆಂಗಳೂರು ಮನೆಯ ದುಬಾರಿ ಬಾಡಿಗೆ ಕಟ್ಟುವುದೇ ಚಿಂತೆಯಾಗಿದೆ. 

ವರ್ಕ್ ಫ್ರಂ ಹೋಂ ಹೋಯ್ತು, ಮಲೆನಾಡಲ್ಲೀಗ ವರ್ಕ್ ಫ್ರಂ ತೋಟ, ಗುಡ್ಡ !.

ಊರಿನತ್ತ ಮುಖಮಾಡುತ್ತಿರುವ ಹಲವರು ಇದೀಗ ಸ್ಟೋರೇಜ್ ಹೌಸ್‌ ಮೂಲಕ ತಮ್ಮ ಚಿಂತೆ ದೂರ ಮಾಡುತ್ತಿದ್ದಾರೆ. ಹೌದು, ಬೆಂಗಳೂರಿನಲ್ಲಿ ಮನೆಯ ವಸ್ತುಗಳು, ಕಾರು, ಬೈಕ್, ಸೇರಿದಂತೆ ಎಲ್ಲಾ ಸಾಮಾಗ್ರಿಗಳನ್ನು ಸ್ಟೋರೇಜ್ ಹೌಸ್‌ನಲ್ಲಿಟ್ಟು ತೆರಳುತ್ತಿದ್ದಾರೆ. ಇದರಿಂದ ದುಬಾರಿ ಮನೆ ಬಾಡಿಗೆಯೂ ಇಲ್ಲ, ಇತ್ತ ತಮ್ಮ ಎಲ್ಲಾ ವಸ್ತುಗಳು ಸುರಕ್ಷಿತವಾಗಿರಲಿದೆ.

ಸ್ಟೋರೇಜ್ ಹೌಸ್ ಸೇವೆ ನೀಡುತ್ತಿರುವ ಹಲವು ಕಂಪನಿಗಳು ಬೆಂಗಳೂರಿನಲ್ಲಿದೆ. ಸೇಫ್‌ಸ್ಟೋರೇಜ್, ಸ್ಟೋರಾಗೈನ್ಸ್, ಸ್ಟೋನೆಸ್ಟ್ ಸ್ಟೋರೇಜ್ ಹಾಗೂ ಮೈ ರಕ್ಷಾ ಸೇರಿದಂತೆ ಕೆಲ ಸುರಕ್ಷಿತ ಹಾಗೂ ಕಡಿಮೆ ಬೆಲೆ ಸ್ಟೋರೇಜ್ ಹೌಸ್ ಸೇವೆಗಳು ಲಭ್ಯವಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುವುದು ಸಾಮಾನ್ಯ. ಹಲವರು ಸುದೀರ್ಘ ಅವದಿಗೆ ವಿದೇಶದಲ್ಲಿ ಕೆಲಸ ಮಾಡಿ ಮರಳುತ್ತಿದ್ದಾರೆ. ಇಂತವರು ವಿದೇಶಕ್ಕೆ ತೆರಳುವಾಗ, ಅಥವಾ ಬೇರೆ ರಾಜ್ಯಗಳಿಗೆ ತೆರಳುವಾಗ, ಬೆಂಗಳೂರಿನ ಮನೆ ಖಾಲಿ ಮಾಡಿ ಸ್ಟೋರೇಜ್ ಹೌಸ್‌ನಲ್ಲಿ ಸಾಮಾಗ್ರಿಗಳನ್ನುಟ್ಟು ತೆರಳುತ್ತಾರೆ. ಇದೀಗ ಕೊರೋನಾ ವೈರಸ್ ಕಾರಣ ಸ್ಟೋರೇಜ್ ಹೌಸ್‌ಗೆ ಬೇಡಿಕೆ ಹೆಚ್ಚಾಗಿದೆ. 

ಸ್ಟೋರೇಜ್ ಹೌಸ್‌ನಲ್ಲಿ ನಿಮ್ಮ ಮನೆಯ ಎಲ್ಲಾ ಸಾಮಾಗ್ರಿಗಳನ್ನು, ಕಚೇರಿಯ ಸಾಮಾಗ್ರಿ, ದಾಖಲೆಗಳನ್ನು ಸುರಕ್ಷಿತವಾಗಿಡಬಹುದು. ಸಿಸಿಟಿವಿ ಕಣ್ಗಾವಲು,  ವೈಯುಕ್ತಿ ಲಾಕರ್ ಸೌಲಭ್ಯಗಳನ್ನು ನೀಡಲಾಗುತ್ತದೆ. ಇನ್ನು ಪ್ರಕೃತಿ ವಿಕೋಪ, ಬೆಂಕಿ, ಕಳ್ಳತನದಿಂದ ಸಾಮಾಗ್ರಿಗಳು ನಷ್ಟವಾದಲ್ಲಿ ಇದಕ್ಕಾಗಿ ವಿಮೆ ಕೂಡ ಮಾಡಿಕೊಡಲಾಗುತ್ತದೆ. 

ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ವರ್ಕ್ ಫ್ರಮ್ ಹೋಮ್ ಕಾರಣ ಮನೆ ಖಾಲಿ ಮಾಡಿ ಊರಿಗೆ ತೆರಳಿದ್ದಾರೆ. ಮನೆ ಖಾಲಿ ಮಾಡುವಾಗ ಸ್ಟೋರೇಜ್ ಹೌಸ್‌ ಸಂಪರ್ಕಿಸಿದ್ದಾರೆ. ಸ್ಟೋರೇಜ್ ಹೌಸ್‌ ಸಿಬ್ಬಂದಿಗಳು ಆಗಮಿಸಿ ಮನೆಯ ಎಲ್ಲಾ ವಸ್ತುಗಳನ್ನು ಸ್ಥಳಾಂತರ ಮಾಡಿ ಸ್ಟೋರೇಜ್ ಹೌಸ್‌ನಲ್ಲಿಟ್ಟಿದ್ದಾರೆ. ಇದಕ್ಕಾಗಿ 5,500 ರೂಪಾಯಿ ಪಡೆದುಕೊಂಡಿದ್ದಾರೆ. ಇನ್ನು ಐಟಿ ವ್ಯಕ್ತಿ ಪ್ರತಿ ತಿಂಗಳು 28,000 ರೂಪಾಯಿ ಮನೆ ಬಾಡಿಗೆ ನೀಡುತ್ತಿದ್ದಾರೆ. ಇದೀಗ ಸ್ಟೋರೇಜ್ ಹೌಸ್‌ನಲ್ಲಿ 2,891 ರೂಪಾಯಿ ಪ್ರತಿ ತಿಂಗಳು ನೀಡಬೇಕು.

ಸ್ಟೋರೇಜ್ ಹೌಸ್‌ನಿಂದ ದುಬಾರಿ ಮನೆ ಬಾಡಿಗೆ ಹಣ ಉಳಿಯಲಿದೆ. ಇಷ್ಟೇ ಅಲ್ಲ ವರ್ಕ್ ಫ್ರಮ್ ಹೋಮ್ ಅವದಿ ಮುಗಿದ ಬಳಿಕ ಮತ್ತೆ ಬೆಂಗಳೂರಿನಲ್ಲಿ ಮನೆ ಮಾಡಿದಾಗ ಸ್ಟೋರೇಜ್ ಹೌಸ್ ಸಿಬ್ಬಂದಿಗಳು ಎಲ್ಲಾ ಸಾಮಾಗ್ರಿಗಳನ್ನು ನೂತನ ಮನೆಗೆ ಸ್ಥಳಾಂತರ ಮಾಡಿಕೊಡಲಿದ್ದಾರೆ. 

ಬೆಂಗಳೂರಿನಲ್ಲಿ ಸ್ಟೋರೇಜ್ ಹೌಸ್‌ಗೆ ಬೇಡಿಕೆ ಹೆಚ್ಚಾದ ಕಾರಣ, ಇದೀಗ ಉದ್ಯಮ ವಿಸ್ತರಿಸುತಿದ್ದೇವೆ. 1.16 ಲಕ್ಷ ಚದರ ಅಡಿಯುಳ್ಳ ಸ್ಟೋರೇಜ್ ಇದೀಗ ಸಾಕಾಗುತ್ತಿಲ್ಲ. ಹೀಗಾಗಿ ನಾವು 17,000 ಚದರ ಅಡಿ ಸ್ಥಳವನ್ನು ಪಡೆದು ಇಲ್ಲೂ ಕೂಡ ವ್ಯವಸ್ಥೆ ಮಾಡಿದ್ದೇವೆ ಎಂದು ಸೇಫ್ ಸ್ಟೋರೇಜ್ ಸಹ ಸಂಸ್ಥಾಪಕ ರಮೇಶ್ ಹೇಳಿದ್ದಾರೆ.