ಒಲಿಂಪಿಯನ್ ಎಂ.ಎಂ. ಸೋಮಯ್ಯ ಅವರ ನಿವಾಸದಲ್ಲಿ ನಡೆದ ಭಾರಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕದ್ದೊಯ್ದಿದ್ದ 8 ಅಂತಾರಾಷ್ಟ್ರೀಯ ಪದಕಗಳು ಮತ್ತು ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು: ಭಾರತೀಯ ಹಾಕಿ ಕ್ಷೇತ್ರದ ದಂತಕಥೆ ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ನಿವಾಸದಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣವನ್ನು ಇಂದಿರಾನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕಳುವಾಗಿದ್ದ 8 ಬೆಲೆಬಾಳುವ ಅಂತಾರಾಷ್ಟ್ರೀಯ ಪದಕಗಳು ಸೇರಿದಂತೆ ಹಲವು ಅಪರೂಪದ ವಸ್ತುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಈ ಮೂಲಕ ಭಾರತದ ಮಾಜಿ ಹಾಕಿ ನಾಯಕ ಎಂ.ಎಂ. ಸೋಮಯ ಅವರು ತಮ್ಮ 1980 ರ ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕವನ್ನು ಮರಳಿ ಪಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೂರು ಬಾರಿ ಒಲಿಂಪಿಯನ್ ಆಗಿರುವ ಸೋಮಯ ಕಳೆದ ಕೆಲವು ದಿನಗಳಿಂದ ನಿಜವಾಗಿಯೂ ಶ್ರಮಿಸಿದ ಶ್ರೀ ಸೀಮಂತ್ ಕುಮಾರ್ ಸಿಂಗ್ ನೇತೃತ್ವದ ಬೆಂಗಳೂರು ಪೊಲೀಸರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಮತ್ತೊಮ್ಮೆ ಒಲಿಂಪಿಕ್ ಪದಕವನ್ನು ಗೆದ್ದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕದ್ದೊಯ್ದಿದ್ದ ಪದಕಗಳು ಹಾಗೂ ಅಪರೂಪದ ವಸ್ತುಗಳ ಜಪ್ತಿ

ಕಾರ್ಯಾಚರಣೆ ವೇಳೆ ಪೊಲೀಸರು ಸೋಮಯ ಅವರು ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶಕ್ಕಾಗಿ ಗೆದ್ದುಕೊಂಡಿದ್ದ ಚಿನ್ನ, ಬೆಳ್ಳಿ ಮತ್ತು ಕಂಚಿನ 8 ಪದಕಗಳನ್ನು ಪತ್ತೆಹಚ್ಚಿದ್ದಾರೆ. ಇದರೊಂದಿಗೆ ಕಳ್ಳರು ದೋಚಿದ್ದ ಕೊಡವ ಶೈಲಿಯ ಸಾಂಪ್ರದಾಯಿಕ ಕತ್ತಿ, ದುಬಾರಿ ಕ್ಯಾಮೆರಾ, ಅಪರೂಪದ 'ಒಲಿಂಪಿಕ್ಸ್' ಬ್ಯಾಗ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.

ಪ್ರಕರಣದಲ್ಲಿ ಬಂಧಿತರನ್ನು ಮಣಿಕಂಠ ಅಲಿಯಾಸ್ ಮಾಣಿಕ್ಯ (31) ಹಾಗೂ ಭರತ್ (25) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮೂರನೇ ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಊರಿಗೆ ತೆರಳಿದ್ದಾಗ ನಡೆದಿದ್ದ ಕಳ್ಳತನ

ನ್ಯೂ ತಿಪ್ಪಸಂದ್ರದಲ್ಲಿ ವಾಸವಾಗಿರುವ ಒಲಿಂಪಿಯನ್ ಎಂ.ಎಂ. ಸೋಮಯ್ಯ ಅವರು ಅಕ್ಟೋಬರ್ 25, 2026 ರಂದು ತಮ್ಮ ಕುಟುಂಬದೊಂದಿಗೆ ಕೊಡಗು ಜಿಲ್ಲೆಯ ಸ್ವಂತ ಊರಿಗೆ ತೆರಳಿದ್ದರು. ಅಕ್ಟೋಬರ್ 28 ರಂದು ಬೆಂಗಳೂರಿಗೆ ಹಿಂತಿರುಗಿದಾಗ, ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು ಬೆಲೆಬಾಳುವ ಆಭರಣಗಳು, ನಗದು ಹಾಗೂ ಅಂತಾರಾಷ್ಟ್ರೀಯ ಪದಕಗಳನ್ನು ದೋಚಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಅವರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

8 ವಿಶೇಷ ತಂಡಗಳ ರಚನೆ

ರಾಷ್ಟ್ರಮಟ್ಟದ ಕ್ರೀಡಾಪಟುವಿನ ಮನೆಯಲ್ಲೇ ನಡೆದ ಈ ಕಳ್ಳತನವನ್ನು ಗಂಭೀರವಾಗಿ ಪರಿಗಣಿಸಿದ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ವಿಕ್ರಮ್ ಅಮಾಥೆ ಅವರ ಮಾರ್ಗದರ್ಶನದಲ್ಲಿ, ತನಿಖೆಗೆ 8 ವಿಶೇಷ ಪಡೆಗಳನ್ನು ರಚಿಸಲಾಯಿತು.

ಖಚಿತ ಮಾಹಿತಿ ಮತ್ತು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕ್ರಿಯಾಶೀಲರಾದ ಪೊಲೀಸರು, ನವೆಂಬರ್ 9 ರಂದು ರಾಮನಗರದ ಹಾಗಲಹಳ್ಳಿ ಕ್ರಾಸ್ ಬಳಿ ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ನವೆಂಬರ್ 10 ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಚಿನ್ನದ ಕಂಪನಿಗೆ ಮಾರಾಟವಾಗಿದ್ದ ಪದಕಗಳು ವಶಕ್ಕೆ

ವಿಚಾರಣೆ ವೇಳೆ ಆರೋಪಿಗಳು ಕದ್ದ ಪದಕಗಳಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿಯ ಪದಕವನ್ನು ರಾಜಾಜಿನಗರದ ಪ್ರಸಿದ್ಧ ಚಿನ್ನದ ಕಂಪನಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಉಳಿದ ಪದಕಗಳು ಹಾಗೂ ವಸ್ತುಗಳನ್ನು ಹೊಸಕೋಟೆಯ ಹೆಚ್-ಕ್ರಾಸ್ ಬಳಿ ಇರುವ ಆರೋಪಿಯೊಬ್ಬನ ಮನೆಯಲ್ಲಿ ಅಡಗಿಸಿಟ್ಟಿರುವುದಾಗಿ ಬಹಿರಂಗಪಡಿಸಿದ್ದಾರೆ.

ಈ ಮಾಹಿತಿಯನ್ನಾಧರಿಸಿ ಶೋಧ ನಡೆಸಿದ ಪೊಲೀಸರು ರಾಜಾಜಿನಗರದ ಕಂಪನಿಯಿಂದ 2 ಪದಕಗಳನ್ನು ಹಾಗೂ ಹೊಸಕೋಟೆಯ ಮನೆಯಿಂದ 6 ಪದಕಗಳು ಸೇರಿದಂತೆ ಕತ್ತಿ, ಕ್ಯಾಮೆರಾ ಮತ್ತು ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯ ವಿವರಗಳನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ಬಂಧಿತರು ಖ್ಯಾತ ಹಿನ್ನೆಲೆಯ ಅಪರಾಧಿಗಳು

ಬಂಧಿತ ಇಬ್ಬರೂ ಆರೋಪಿಗಳು ಹಳೆಯ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಮಾಣಿಕ್ಯ (31) ಈತನ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಒಟ್ಟು 25 ಕ್ಕೂ ಹೆಚ್ಚು ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲಿ 8 ಪ್ರಕರಣಗಳಿವೆ. ಭರತ್ (25) ಈತ ಕೊ7ಲೆ ಹಾಗೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಸಹಚರನಿಗಾಗಿ ತನಿಖಾ ತಂಡ ಕಾರ್ಯಾಚರಣೆ ಮುಂದುವರಿಸಿದೆ.