ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಹ-ಸಂಸ್ಥಾಪಕರೊಬ್ಬರು, ತಮ್ಮ ಕಟ್ಟಡಕ್ಕೆ BWSSB ನೀರಿನ ಸಂಪರ್ಕ ಮತ್ತು ರೋಡ್ ಕಟಿಂಗ್ ಅನುಮತಿಗಾಗಿ ಅಧಿಕಾರಿಗಳು ಭಾರಿ ಲಂಚ ಕೇಳಿದ್ದಾರೆಂದು ಆರೋಪಿಸಿದ್ದಾರೆ. ಅಧಿಕೃತ ಮತ್ತು ಅನಧಿಕೃತ ಮಾರ್ಗಗಳಿಗೆ ಬೇರೆ ಬೇರೆ ಲಂಚದ ದರಗಳನ್ನು ಮುಂದಿಟ್ಟಿದ್ದಾರೆ.
ಬೆಂಗಳೂರು (ಜ.20): BWSSB ನೀರಿನ ಸಂಪರ್ಕ ಮತ್ತು ರೋಡ್ ಕಟಿಂಗ್ ಅನುಮತಿಗಾಗಿ ಅರ್ಜಿ ಸಲ್ಲಿಸುವಾಗ ಸರ್ಕಾರಿ ಅಧಿಕಾರಿಗಳು ಭಾರೀ ಪ್ರಮಾಣದ ಲಂಚ ಕೇಳಿದ್ದರು ಎಂದು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಫೌಂಡರ್ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದಾರೆ. ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೊಬಿಕಿ ಮತ್ತು ಲೋಕರಾಮ್ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕ ರವಿಚಂದ್ರ ರೆಡ್ಡಿ, ತಮ್ಮ ಬಹುಮನೆ ಕಟ್ಟಡಕ್ಕಾಗಿ BWSSB ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ಇದರ ಪ್ರಕ್ರಿಯೆಗಳು ಮುಂದುವರಿಯುತ್ತಿದ್ದಂತೆ ಲಂಚದ ದರ ನಿರೀಕ್ಷೆಗೂ ಮೀರಿ ದುಪಟ್ಟಾಗಿದೆ. ಇದರಿಂದಾಗಿ ಯಾವು ಸಾಲದ ಮೂಲಕ ಹಣವನ್ನು ವ್ಯವಸ್ಥೆ ಮಾಡಬೇಕಾಯಿತು ಎಂದು ಬೇಸರ ತೋಡಿಕೊಂಡಿದ್ದಾರೆ.
ರೆಡ್ಡಿಯವರ ಪ್ರಕಾರ, ನೀರಿನ ಪೈಪ್‌ಲೈನ್ ರಸ್ತೆಯ ಮತ್ತೊಂದು ಭಾಗದಲ್ಲಿ ಇದ್ದುದರಿಂದ, ಸಂಪರ್ಕವನ್ನು ಸಂಯೋಜಿಸುವ ಗುತ್ತಿಗೆದಾರರು ರೋಡ್ ಕಟಿಂಗ್ ಅನುಮತಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸಿದರು. ರೋಡ್ ಕಟಿಂಗ್‌ಗೆ ಅಧಿಕೃತ ಬೇಡಿಕೆ ಕರಡು ಸುಮಾರು 80,000 ರೂ.ಗಳಾಗಬಹುದು ಮತ್ತು ಹೆಚ್ಚುವರಿಯಾಗಿ 20,000 ರೂ.ಗಳ ಲಂಚವನ್ನು ನೀಡಬೇಕು ಎಂದು ಅಧಿಕಾರಿ ಹೇಳಿದ್ದರು ಎಂದು ಅವರು ಆರೋಪಿಸಿದರು. ಇದು ಬೇಡ ಎಂದರೆ ಅನಧಿಕೃತವಾಗಿ ಈ ಪರ್ಮಿಷನ್ ಸಿಗುತ್ತದೆ. ಅದಕ್ಕೆ 40 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ, ನಂತರ ನನ್ನ ಸ್ವಂತ ಖರ್ಚಿನಲ್ಲಿ ಈ ರಸ್ತೆಯನ್ನು ಪುನಃ ಮೊದಲಿದ್ದ ರೀತಿಯಲ್ಲೇ ಮಾಡಬೇಕಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು ಎಂದಿದ್ದಾರೆ. "ಇದು ಈಗಾಗಲೇ ಅನುಮೋದನೆ ಪಡೆದಿರುವ ನೀರಿನ ಸಂಪರ್ಕಕ್ಕಾಗಿ ರೋಡ್ ಕಟಿಂಗ್ ಅನುಮತಿಗಾಗಿ ಮಾತ್ರ" ಎಂದು ರೆಡ್ಡಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಲಂಚ ಕೇಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತ ಎಂ. ಮಹೇಶ್ವರ ರಾವ್ ಹೇಳಿದ್ದಾರೆ. ಸಕಾಲ ಸೇವೆಗಳ ಕಾಯ್ದೆಯಡಿ ಬಾಕಿ ಇರುವ ರಸ್ತೆ ಕಡಿತ ಅರ್ಜಿಗಳಿಗಾಗಿ ನಾಗರಿಕರು 1533 ಗೆ ಕರೆ ಮಾಡಬಹುದು. ಲಂಚದ ದೂರುಗಳನ್ನು ಉಪ ಲೋಕಾಯುಕ್ತದಲ್ಲಿ ಸಲ್ಲಿಸಬೇಕು. ರಸ್ತೆ ಅಗೆಯುವಿಕೆಯನ್ನು ಆನ್‌ಲೈನ್, ಏಕಗವಾಕ್ಷಿ ವ್ಯವಸ್ಥೆಯಾದ MARCS (ಮಲ್ಟಿ-ಏಜೆನ್ಸಿ ರೋಡ್ ಕಟಿಂಗ್ ಸಿಸ್ಟಮ್) ಮೂಲಕ ನಿಯಂತ್ರಿಸಲಾಗುತ್ತದೆ.
ನಂತರದ ಪೋಸ್ಟ್‌ನಲ್ಲಿ, ರೆಡ್ಡಿ ಅವರು ಆ ಮೊತ್ತವನ್ನು ಪಾವತಿಸಿಲ್ಲ ಎಂದು ಸ್ಪಷ್ಟಪಡಿಸಿದರು. "ಅದು ರೋಡ್ ಕಟಿಂಗ್‌ಗೆ ಮಾತ್ರ ಕೇಳಿರುವ ಹಣ. ನೀರಿನ ಸಂಪರ್ಕವು ಸರ್ಕಾರಿ ಸೇವೆಯಾಗಿದ್ದು, ಅದರ ಮೂಲಕ ರಾಜ್ಯವು ಆದಾಯವನ್ನು ಗಳಿಸುತ್ತದೆ. ಆದರೆ ಈ ಬಿಬಿಎಂಪಿ ಡಿಮಾಂಡ್ ನನಗೆ ಆಘಾತವನ್ನುಂಟು ಮಾಡಿದೆ" ಎಂದು ಅವರು ಬರೆದಿದ್ದಾರೆ.

ಸರ್ಕಾರವನ್ನು ಟೀಕಿಸಿದ ನೆಟ್ಟಿಗರು
ಇನ್ನು ಈ ಪೋಸ್ಟ್ ವೈರಲ್ ಆದ ಬೆನ್ನಲ್ಲಿಯೇ ಹೆಚ್ಚಿನವರು ಸರ್ಕಾರವನ್ನು ಟೀಕಿಸಿದ್ದಾರೆ. ನ್ಯಾಯಯುತವಾಗಿ ಕಟ್ಟಿರುವ ಕಟ್ಟಡಕ್ಕೆ ನೀರಿನ ಸಂಪರ್ಕ ನೀಡುವುದು ಸರ್ಕಾರದ ಜವಾಬ್ದಾರಿ. "BWSSB ಇದರಲ್ಲಿ ಅತ್ಯಂತ ಕಳಪೆ ದಾಖಲೆಯನ್ನು ಹೊಂದಿದೆ ಮತ್ತು ಅದನ್ನು ಸ್ವಚ್ಛಗೊಳಿಸಬೇಕಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ರೋಡ್ ಕಟಿಂಗ್ ಅನುಮತಿಯನ್ನು ಕಿರುಕುಳ ನೀಡಲು ಹಾಗೂ ಲಂಚ ಪಡೆದುಕೊಳ್ಳಲು ಮಾತ್ರವೇ ಬಳಕೆ ಮಾಡುತ್ತಿದ್ದಾರೆ. ಪೈಪ್‌ಲೈನ್ ಆಪರೇಟ್ ಮಾಡುವ BWSSB ಮನೆಗೆ ನೀರಿನ ಸಂಪರ್ಕ ನೀಡುವ ಜವಾಬ್ದಾರಿಯನ್ನೂ ಹೊರಬೇಕು ಎಂದು ಬರೆದಿದ್ದಾರೆ.
ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್ ಸಹ-ಸಂಸ್ಥಾಪಕ ರಾಜೇಶ್ ಯಬಾಜಿ ಸೆಪ್ಟೆಂಬರ್ 2025 ರಲ್ಲಿ ಬೆಂಗಳೂರಿನ ಹೊರ ವರ್ತುಲ ರಸ್ತೆಯಿಂದ ಹೊರಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದು ದೊಡ್ಡ ಪ್ರಮಾಣದಲ್ಲಿ ವಿವಾದ ಎಬ್ಬಿಸಿದ ನಂತರ ಈ ಘಟನೆ ನಡೆದಿದೆ.


