ಆರ್‌ಸಿಬಿ ಟ್ರೋಫಿ ಸಂಭ್ರಮಾಚರಣೆಯಲ್ಲಿ ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪಾಲ್ಗೊಂಡಿದ್ದರು. ಕಾಲ್ತುಳಿತ ದುರ್ಘಟನೆಗೆ ಹಲವು ಅವ್ಯವಸ್ಥೆ, ನಿರ್ಲಕ್ಷಗಳೇ ಕಾರಣ ಅನ್ನೋ ಆರೋಪ ಬಲವಾಗುತ್ತಿದೆ. ಪ್ರಮುಖವಾಗಿ 32 ಸಾವಿರ ಸಾಮರ್ಥ್ಯದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಲಕ್ಷ ಮಂದಿ ಸೇರಿದ್ದರು.
ಬೆಂಗಳೂರು(ಜೂ.05) ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರೆ 56 ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಕಾಲ್ತುಳಿತ ಪ್ರಕರಣ ಇದಾಗಿದೆ. ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ, ಅಭಿಮಾನಿಗಳ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಮಾಡದೇ ಇದ್ದ ಕಾರಣ ಈ ಅವಘಡ ಸಂಭವಿಸಿದೆ ಅನ್ನೋ ಆರೋಪಗಳು ಬಲವಾಗುತ್ತಿದೆ. ಆರ್‌ಸಿಬಿ ಟ್ರೋಫಿ ಗೆಲುವನ್ನು ಸಂಭ್ರಮಿಸಲು ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಸುತ್ತ ಮುತ್ತು ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಜಮಾಯಿಸಿದ್ದರು. ಕೇವಲ 32,000 ಸಾಮರ್ಥ್ಯದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಲಕ್ಷ ಮಂದಿ ಸೇರಿದ್ದರು. ಇನ್ನು ಕ್ರೀಡಾಂಗಣದ ಹೊರಡೆ 3 ಲಕ್ಷಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ಇದು ಕಾಲ್ತುಳಿತಕ್ಕೆ ಕಾರಣಾಗಿದೆ ಅನ್ನೋ ವರದಿಗಳು ಬಯಲಾಗಿದೆ.
ರಾತ್ರಿ 8 ರಿಂದ 9 ಗಂಟೆ ವರೆಗೆ ಮೆಟ್ರೋದಲ್ಲಿ 8 ಲಕ್ಷ ಮಂದಿ ಪ್ರಯಾಣ
ಮೆಟ್ರೋ ಮಾಹಿತಿ ಪ್ರಕಾರ ಆರ್‌ಸಿಬಿ ಸಂಭ್ರಮಾಚರಣೆಯ ರಾತ್ರಿ 8 ರಿಂದ 9 ಗಂಟ ಅವಧಿಯಲ್ಲಿ ಬರೋಬ್ಬರಿ 8 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಕೇವಲ 1 ಗಂಟೆಯಲ್ಲಿ ಈ ಸಂಖ್ಯೆಯಲ್ಲಿ ಅಭಿಮಾನಿಗಳು ಪ್ರಯಾಣ ಮಾಡಿದ್ದು ಇದೇ ಮೊದಲು. ಈ ಪೈಕಿ ಸರಿಸುಮಾರು 5 ಲಕ್ಷ ಆರ್‌ಸಿಬಿ ಅಭಿಮಾನಿಗಳೇ ಇರುತ್ತಾರೆ ಎಂದು ಅಂದಾಜಿಸಲಾಗಿದೆ. ಇನ್ನು ಕಾರು, ಬೈಕ್ ಟ್ಯಾಕ್ಸಿ ಸೇರಿದಂತೆ ಇತರ ವಾಹನಗಳ ಮೂಲಕ, ಸಾರಿಗೆ ಬಸ್ ಮೂಲಕ ಆಗಮಿಸಿದವರ ಸಂಖ್ಯೆ 3 ಲಕ್ಷಕ್ಕೂ ಅಧಿಕ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಸಂಭ್ರಮಾಚರಣೆಯಲ್ಲಿ ಸರಿಸುಮಾರು 6 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿರುವ ಸಾಧ್ಯತೆ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಲಕ್ಷ ಮಂದಿ
ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಕೇವಲ 32,000. ಭಾರತದ ಚಿಕ್ಕ ಕ್ರೀಡಾಂಗಣ ಪೈಕಿ ಚಿನ್ನಸ್ವಾಮಿ ಕ್ರೀಡಾಂಗಣ ಕೂಡ ಒಂದು. ಆದರೆ ಉಚಿತ ಎಂಟ್ರಿ, ಆರ್‌ಸಿಬಿ ಟ್ರೋಫಿ ಗೆಲುವು, 18 ವರ್ಷಗಳ ಬಳಿಕ ಪಡೆದ ಟ್ರೋಫಿ ಕಾರಣಗಳಿಂದ ಅಭಿಮಮಾನಿಗಳ ಸಂಖ್ಯೆ ಡಬಲ್ ಆಗಿತ್ತು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ 5 ಲಕ್ಷಕ್ಕೂ ಅಧಿಕ ಮಂದಿ ಜಮಾವಣೆಗೊಂಡಿದ್ದರು. ಈ ಪೈಕಿ 3 ಲಕ್ಷ ಮಂದಿ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಸೇರಿದ್ದರು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. 32 ಸಾವಿರ ಸಾಮರ್ಥ್ಯದ ಕ್ರೀಡಾಂಗಣದಲ್ಲಿ 3 ಲಕ್ಷ ಅಭಿಮಾನಿಗಳು ಸೇರಿ ಅವಘಡ ಸಂಭವಿಸಿದೆ.
ಈ ಅವಘಡಕ್ಕೆ ಯಾರು ಹೊಣೆ?
ಆರ್‌ಸಿಬಿ ಸಂಭ್ರಮಾಚರಣೆ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಮಕ್ಕಳು, ಆಪ್ತರನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ. ಇದೇ ವೇಳೆ ಈ ಘಟನೆಗೆ ಯಾರು ಹೊಣೆ? ಈ ಪ್ರಶ್ನೆ ಭಾರಿ ಚರ್ಚೆಯಾಗುತ್ತಿದೆ. ತರಾತುರಿಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ? ಕಾರ್ಯಕ್ರಮ ಆಯೋಜಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೇ? ಆಪ್ತರನ್ನು ಕಳೆದುಕೊಂಡ ಕುಟುಂಬಗಳು ಸರ್ಕಾರವನ್ನೇ ಹೊಣೆಯಾಗಿಸಿದೆ. ಸರ್ಕಾರ ಪ್ರತಿನಿಧಿಗಳು ಆರ್‌ಸಿಬಿ ಆಟಗಾರರನ್ನು ಬರಮಾಡಿಕೊಂಡು ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ. ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ತಯಾರಿ ಮಾಡಿಕೊಂಡಿಲ್ಲ. ಸರಿಯಾ ಬಂದೋಬಸ್ತ್ ಮಾಡಿದ್ದರೆ ಪರಿಸ್ಥಿತಿ ಸುಧಾರಿಸುತ್ತಿತ್ತು ಎಂದು ಹಲವರು ಆರೋಪಿಸಿದ್ದಾರೆ.
ಘಟನೆ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪ ಶುರುಮಾಡಿದ್ದಾರೆ.ಈ ಘಟನೆಗೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಬಿಜೆಪಿ ಆರೋಪಿಸಿದೆ. ಇತ್ತ ಕಾಂಗ್ರೆಸ್ ನಾಯಕರು, ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.
