ಬೆಂಗಳೂರು [ನ.02]: ಆಡಳಿತದಲ್ಲಿರುವ ಪರ್ಷಿಯನ್ ಪದಗಳನ್ನು ನಿರ್ಬಂಧಿಸಬೇಕು ಹಾಗೂ ರಾಜಧಾನಿ ಬೆಂಗಳೂರಿನಲ್ಲಿರುವ ವಿವಿಧ ರಸ್ತೆಗಳ ಬ್ರಿಟಿಷರ ಹೆಸರನ್ನು ಬದಲಾಯಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು. ಶುಕ್ರವಾರ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವಿಂದು 64 ನೇ ಕನ್ನಡ ರಾಜ್ಯೋತ್ಸವನ್ನು ಆಚರಿಸುತ್ತಿದ್ದೇವೆ. ಆದರೆ ಇಂದಿಗೂ ಪೊಲೀಸ್ ಹಾಗೂ ಕಂದಾಯ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳ ಆಡಳಿತದಲ್ಲಿಪರ್ಷಿಯನ್ ಪದಗಳು ಚಲಾವಣೆ ಯಲ್ಲಿವೆ. ತಹಸೀಲ್ದಾರ್, ದಫೇದಾರ್, ಶಿರಸ್ತೇದಾರ್ ಇವುಗಳು ಕನ್ನಡ ಪದಗಳಲ್ಲ ಪರ್ಷಿಯನ್‌ಗಳಾಗಿವೆ. ಈ ಪರ್ಷಿಯನ್ ಪದಗಳ ಚಲಾವಣೆಯಿಂದಾಗಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿದ್ದರೂ ಕೂಡ ಅದೇ ದಾಸ್ಯದಲ್ಲಿದ್ದೇವೆ ಅನಿಸುತ್ತದೆ. ಹೀಗಾಗಿ ರಾಜ್ಯ ಸರ್ಕಾರ, ಮುಂದಿನ ರಾಜ್ಯೋತ್ಸವ ಆಚರಣೆ ಹೊತ್ತಿಗೆ ಆಡಳಿತದಲ್ಲಿ ಪರ್ಷಿಯನ್ ಪದಗಳಿಗೆ ಪರ್ಯಾಯವಾಗಿ ಕನ್ನಡ ಬಳಕೆಗೆ ತಜ್ಞರ ಸಮಿತಿ ರಚಿಸಿ ವರದಿ ಪಡೆಯಬೇಕು ಎಂದು ಆಗ್ರಹಿಸಿದರು. 

ಬೆಂಗಳೂರಿನಲ್ಲಿ ಹಲವು ವೃತ್ತ ಹಾಗೂ ರಸ್ತೆಗಳಿಗೆ ಬ್ರಿಟಿಷ್ ಆಡಳಿತಾಧಿಕಾರಿಗಳ ಹೆಸರುಗಳಿವೆ. ಕನ್ನಡಕ್ಕಾಗಿ ಹೋರಾಟ ನಡೆಸಿದ ಹಲವು ಮಹನೀಯರು ಇದ್ದಾರೆ. ಹೀಗಾಗಿ ಬ್ರಿಟಿಷರ ಹೆಸರುಗಳನ್ನು ತೆಗೆದು ಕನ್ನಡದ ಹೋರಾಟಗಾರರ ಹೆಸರು ನಾಮಕರಣ ಮಾಡಬೇಕು ಎಂದು ಪ್ರತಿಪಾದಿಸಿದರು. 

ಕಂಠೀರವದಲ್ಲಿ ಕನ್ನಡದ ಕಲರವ : ಅದ್ಧೂರಿಯಾಗಿ ನಡೆದ ಕನ್ನಡಮ್ಮನ ಹಬ್ಬ...

ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಮಾಧ್ಯಮಗಳ ಶಾಲೆಗಳಲ್ಲಿ ಸಹ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯಗೊಳಿಸಬೇಕು. ಅಲ್ಲದೆ, ಗಡಿನಾಡ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಾಲ್ಕು ಪ್ರಮುಖ ಒತ್ತಾಯಗಳ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಮುಂದಿನ ವರ್ಷದ ರಾಜ್ಯೋತ್ಸವ ವೇಳೆಗೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಹೇಳಿದರು.