ನಟಿ ಶಾನ್ವಿ ಶ್ರೀವಾತ್ಸವ, ಬೆಂಗಳೂರನ್ನು ತನ್ನ ಕರ್ಮಭೂಮಿ ಎಂದು ಕರೆದರೂ, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮುಂಬೈ ಹೆಚ್ಚು ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂದರ್ಶನವೊಂದರಲ್ಲಿ, ಅವರು ಬೆಂಗಳೂರಿನಲ್ಲಿ ಮಧ್ಯರಾತ್ರಿ ಓಡಾಡಲು ಮುಂಬೈನಷ್ಟು ಧೈರ್ಯ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಬೆಂಗಳೂರು (ಆ.4): ಕನ್ನಡದಲ್ಲಿ ಚಿರು ಜೊತೆ ಚಂದ್ರಲೇಖ, ರಕ್ಷಿತ್‌ ಶೆಟ್ಟಿ ಜೊತೆ ಅವನೇ ಶ್ರೀಮನ್ನಾರಾಯಣ, ದರ್ಶನ್‌ ಜೊತೆ ತಾರಕ್‌ ಹಾಗೂ ಯಶ್‌ ಜೊತೆ ಮಾಸ್ಟರ್‌ಪೀಸ್‌ ಸಿನಿಮಾಗಳಲ್ಲಿ ನಟಿಸಿದ್ದ ಶಾನ್ವಿ ಶ್ರೀವಾತ್ಸವಗೆ ಈಗ ಬೆಂಗಳೂರೇ ಮನೆಯಾಗಿದೆ. ಅಂದಾಜು 12 ವರ್ಷಗಳಿಂದ ಸಿನಿಮಾ ರಂಗದಲ್ಲಿರುವ ಶಾನ್ವಿ ಈಗ ಅಮೆರಿಕಾ ಅಮೆರಿಕಾ 2 ಸಿನಿಮಾದ ಮೂಲಕ ತೆರೆ ಮೇಲೆ ಬರುವ ಕನಸು ಕಾಣುತ್ತಿದ್ದಾರೆ. ಬಾಲಿವುಡ್‌ಗಾಗಿ ನಾನೆಂದೂ ದಕ್ಷಿಣ ಭಾರತ ಸಿನಿಮಾ ರಂಗವನ್ನು ಬಿಡೋದಿಲ್ಲ ಎಂದಿರುವ ಶಾನ್ವಿ ಶ್ರೀವಾತ್ಸವ ಅವರ ಮೂಲ ಉತ್ತರ ಪ್ರದೇಶದ ವಾರಣಾಸಿ. ಆದರೆ, ಕುಟುಂಬದ ಜೊತೆ ನೆಲೆಸಿರೋದು ಮಾತ್ರ ಮುಂಬೈನಲ್ಲಿ. ಇತ್ತೀಚೆಗೆ ಬೆಂಗಳೂರು ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಬೆಂಗಳೂರಿಗಿಂತ ನನಗೆ ಮುಂಬೈ ಬಹಳ ಸೇಫ್‌ ಅನಿಸುತ್ತದೆ ಎಂದಿದ್ದಲ್ಲದೆ ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಮುಂಬೈ ಬಹಳ ಫ್ರೀಡಮ್‌ ಇರುವ ನಗರ

ತಮ್ಮ ಹುಟ್ಟೂರಿನ ಬಗ್ಗೆ ಮಾತನಾಡಿದ ಶಾನ್ವಿ, ನನ್ನ ಬಾಲ್ಯದ ನೆನಪುಗಳೆಲ್ಲವೂ ವಾರಣಾಸಿಯ ಗಲ್ಲಿಗಳು, ದೇವಸ್ಥಾನಗಳು ಹಾಗೂ ಅಲ್ಲಿನ ಮಾತುಕತೆಗಳಲ್ಲೇ ಇವೆ. ಕಳೆದ ತಿಂಗಳಷ್ಟೇ ಅಲ್ಲಿಗೆ ಹೋಗಿ ಒಂದು ವಾರಕ್ಕೂ ಹೆಚ್ಚು ಕಾಲ ಇದ್ದು ಬಂದೆ. ವಾರಣಾಸಿ ನನ್ನ ನಿಜವಾದ ಮನೆ. ಆದರೆ ಕುಟುಂಬ ಇರುವ ಕಾರಣಕ್ಕೆ ಮುಂಬೈನಲ್ಲಿ ನೆಲೆಸಿದ್ದೇನೆ. ಮುಂಬೈ ನನಗೆ ನೀಡುವ ಫ್ರೀಡಮ್‌ ನನಗಿಷ್ಟ. ಅಲ್ಲಿ ಯಾರೂ ನಿಮ್ಮನ್ನು ಜಡ್ಜ್ ಮಾಡಲು ಹೋಗುವುದಿಲ್ಲ, ಏಕೆಂದರೆ ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಮಧ್ಯರಾತ್ರಿಯಲ್ಲೂ ಧೈರ್ಯವಾಗಿ ಹೊರಗೆ ತಿರುಗಾಡಬಹುದು. ಆದರೆ ಬೆಂಗಳೂರಿನಲ್ಲಿ ಆ ಮಟ್ಟದ ಸುರಕ್ಷತೆಯ ಭಾವನೆ ನನಗನ್ನಿಸುವುದಿಲ್ಲ ಎಂದಿದ್ದಾರೆ.

ಇದಕ್ಕೆ ಕಾರಣವನ್ನೂ ತಿಳಿಸಿರುವ ಆಕೆ "ನಾನು ನಟಿಯಾಗಿ ಗುರುತಿಸಲ್ಪಡುತ್ತೇನೆ ಎನ್ನುವುದಕ್ಕಿಂತ ಹೆಚ್ಚಾಗಿ ನಾನು 'ಮಹಿಳೆ' ಎನ್ನುವುದೂ ಇದಕ್ಕೆ ಮುಖ್ಯ ಕಾರಣ. ಮಾಸ್ಕ್ ಧರಿಸಿಕೊಂಡು ಹೊರಬಂದರೂ ಬೆಂಗಳೂರಿನಲ್ಲಿ ಮುಂಬೈನಷ್ಟು ಸೇಫ್ ಅನಿಸುವುದಿಲ್ಲ," ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಬೆಂಗಳೂರು ನನ್ನ ಕರ್ಮಭೂಮಿ, ಬಟ್ ಟ್ರಾಫಿಕ್ ಹೊರತುಪಡಿಸಿ!

ಮುಂಬೈಗೆ ಹೋಲಿಸಿದರೆ ಸುರಕ್ಷತೆಯ ವಿಚಾರದಲ್ಲಿ ಬೆಂಗಳೂರು ಕೊಂಚ ಹಿನ್ನಡೆ ಅನಿಸಿದರೂ, ಗಾರ್ಡನ್ ಸಿಟಿಯ ಮೇಲಿರುವ ಪ್ರೀತಿಯನ್ನು ಅವರು ಮರೆತಿಲ್ಲ. "ತಿಂಗಳಿಗೆ ಕನಿಷ್ಠ 15 ದಿನಗಳನ್ನು ನಾನು ಬೆಂಗಳೂರಿನಲ್ಲೇ ಕಳೆಯುತ್ತೇನೆ. ಇಲ್ಲಿನ ಟ್ರಾಫಿಕ್ ಹೊರತುಪಡಿಸಿದರೆ ಉಳಿದೆಲ್ಲವೂ ನನಗಿಷ್ಟ—ಇಲ್ಲಿನ ಆಹಾರ, ವಾತಾವರಣ ಮತ್ತು ಜನ. ನಾನು ನನ್ನ ವೃತ್ತಿಜೀವನದ 12 ವರ್ಷಗಳನ್ನು ಇಲ್ಲೇ ಕಳೆದಿದ್ದೇನೆ ಮತ್ತು ಅತ್ಯಂತ ಹೆಚ್ಚು ಸಿನಿಮಾಗಳನ್ನು ಮಾಡಿದ್ದು ಇಲ್ಲೇ. ಹಾಗಾಗಿ ಬೆಂಗಳೂರು ನನ್ನ ಪಾಲಿನ ಕರ್ಮಭೂಮಿ," ಎಂದು ನಟಿ ಶಾನ್ವಿ ಶ್ರೀವಾಸ್ತವ್ ಹೇಳಿದ್ದಾರೆ.