ಬೆಂಗಳೂರಿನ ಹೆಬ್ಬಾಳದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಸಿಗ್ನಲ್ ಮುಕ್ತ ಸಂಚಾರಕ್ಕಾಗಿ ಸಾದಹಳ್ಳಿ ಜಂಕ್ಷನ್‌ನಲ್ಲಿ ಬೃಹತ್ ಓವರ್‌ಪಾಸ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
ಬೆಂಗಳೂರು (ಅ.13): ರಾಜಧಾನಿ ಬೆಂಗಳೂರಿನ ಹೆಬ್ಬಾಳದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಸಂಚರಿಸುವ ಪ್ರಯಾಣಿಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಭಾರಿ ಸಿಹಿ ಸುದ್ದಿ ನೀಡಿದೆ. ಹೆಬ್ಬಾಳದಿಂದ ಏರ್‌ಪೋರ್ಟ್‌ವರೆಗಿನ ರಾಷ್ಟ್ರೀಯ ಹೆದ್ದಾರಿ-44 ರ (NH-44) ಮಾರ್ಗದಲ್ಲಿದ್ದ ಏಕೈಕ ಸಿಗ್ನಲ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ, 'ಸಾದಹಳ್ಳಿ ಜಂಕ್ಷನ್'ನಲ್ಲಿ (Sadahalli Junction) ಬೃಹತ್ 'ವೆಹಿಕುಲಾರ್ ಓವರ್‌ಪಾಸ್' (Vehicular Overpass) ನಿರ್ಮಾಣ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಈ ಕುರಿತು ಸೋಮವಾರ ಪ್ರಕಟಣೆ ಹೊರಡಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಕಾಮಗಾರಿಗೆ ಅಗತ್ಯವಿರುವ ಸಂಚಾರ ಬದಲಿ ಮಾರ್ಗಗಳ (Traffic Diversions) ಯೋಜನೆಗೆ ಬೆಂಗಳೂರು ಸಂಚಾರ ಪೊಲೀಸರು (BTP) ಸಂಪೂರ್ಣ ಅನುಮತಿ ನೀಡಿದ್ದು, ಸ್ಥಳದಲ್ಲಿ ಪ್ರಕ್ರಿಯೆಗಳು ಆರಂಭಗೊಂಡಿವೆ ಎಂದು ತಿಳಿಸಿದೆ.
ಪ್ರಯಾಣಿಕರ ಸಮಯ ಉಳಿಸಲಿರುವ 700 ಮೀಟರ್ ಓವರ್‌ಪಾಸ್
ಒಟ್ಟು 700 ಮೀಟರ್ ಉದ್ದದ ಹಾಗೂ 6 ಪಥಗಳನ್ನು (6-Lane) ಹೊಂದಲಿರುವ ಈ ಅತ್ಯಾಧುನಿಕ ಓವರ್‌ಪಾಸ್ ನಿರ್ಮಾಣದಿಂದ ಹೆಬ್ಬಾಳದಿಂದ ಕೆಂಪೇಗೌಡ ಏರ್‌ಪೋರ್ಟ್ ಹಾಗೂ ಆಂಧ್ರಪ್ರದೇಶದ ಕಡೆಗೆ ಸಂಚರಿಸುವ ಸಾವಿರಾರು ವಾಹನಗಳಿಗೆ ಯಾವುದೇ ತಡೆಯಿಲ್ಲದೆ ಸಾಗಲು ಅನುಕೂಲವಾಗಲಿದೆ.
ಈ ಯೋಜನೆಯನ್ನು ₹35 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, 'ವಿದ್ಯಾ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್' (Vidya Infratech Pvt Ltd) ಸಂಸ್ಥೆಗೆ 2026 ರ ಜನವರಿಯಲ್ಲೇ 15 ತಿಂಗಳ ಕಾಲಮಿತಿಯೊಂದಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಹವಾಮಾನ ಹಾಗೂ ಭೌಗೋಳಿಕ ಪರಿಸ್ಥಿತಿಗಳು ಪೂರಕವಾಗಿದ್ದರೆ 2027 ರ ಮಧ್ಯಭಾಗದ ವೇಳೆಗೆ ಈ ಯೋಜನೆ ಸಂಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಎನ್‌ಎಚ್‌ಎಐ ಸ್ಪಷ್ಟಪಡಿಸಿದೆ.
ಸುಗಮ ಸಂಚಾರಕ್ಕೆ ಸಿದ್ಧತೆ - ವಾಹನ ಸವಾರರಿಗೆ ಎಚ್ಚರಿಕೆ ಸೂಚನೆ
ಈಗಾಗಲೇ ಗುತ್ತಿಗೆದಾರ ಸಂಸ್ಥೆಯು ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವುದು ಹಾಗೂ ಬದಲಿ ಮಾರ್ಗಕ್ಕಾಗಿ ಸರ್ವೀಸ್ ರಸ್ತೆಯನ್ನು ಅಗಲಗೊಳಿಸುವಂತಹ ಪ್ರಾಥಮಿಕ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಇದರ ಜೊತೆಗೆ ಅತ್ಯಾಧುನಿಕ ಚರಂಡಿ ವ್ಯವಸ್ಥೆ (Drainage System), ರಸ್ತೆ ವಿಭಜಕ (Median) ಹಾಗೂ ರಸ್ತೆಯನ್ನು ಅಂದಗೊಳಿಸಲು ಲ್ಯಾಂಡ್‌ಸ್ಕೇಪಿಂಗ್ ಕಾಮಗಾರಿಗಳು ಯೋಜನೆಯ ಭಾಗವಾಗಿವೆ.
"ಬೆಂಗಳೂರಿನ ಹೆಬ್ಬಾಗಿಲಂತಿರುವ ಸಾದಹಳ್ಳಿ ಗೇಟ್ ಭಾಗವನ್ನು ಅತ್ಯಂತ ಸುಗಮ ಹಾಗೂ ಸೌಂದರ್ಯಾತ್ಮಕವಾಗಿ ವಿನ್ಯಾಸಗೊಳಿಸುವುದು ನಮ್ಮ ಉದ್ದೇಶವಾಗಿದೆ" ಎಂದು ಎನ್‌ಎಚ್‌ಎಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಮಗಾರಿ ನಡೆಯುವ ಅವಧಿಯಲ್ಲಿ ಸಾದಹಳ್ಳಿ ಜಂಕ್ಷನ್ ಹಾದುಹೋಗುವ ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ಟ್ರಾಫಿಕ್ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ವಾಹನ ಸವಾರರು ಕಾಮಗಾರಿ ಪ್ರದೇಶದ ಬಳಿ ಸಾಗುವಾಗ ಎಚ್ಚರಿಕೆ ವಹಿಸಬೇಕು, ಸೂಚನಾ ಫಲಕಗಳನ್ನು ತಪ್ಪದೇ ಗಮನಿಸಬೇಕು ಹಾಗೂ ಸಂಚಾರ ಪೊಲೀಸರ ಮಾರ್ಗದರ್ಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರ ಮನವಿ ಮಾಡಿದೆ.
ಕರ್ನಾಟಕದ ಅತ್ಯಂತ ಬ್ಯುಸಿ ಟೋಲ್ ಪ್ಲಾಜಾ ಜಂಕ್ಷನ್
ಈ ನೂತನ ಫ್ಲೈಓವರ್ ಅನ್ನು ಸಾದಹಳ್ಳಿ ಟೋಲ್ ಪ್ಲಾಜಾದಿಂದ ನಗರದ ಕಡೆಗೆ ಸುಮಾರು 500 ಮೀಟರ್ ದೂರದಲ್ಲಿ ನಿರ್ಮಿಸಲಾಗುತ್ತಿದೆ. ಕೇವಲ 22.12 ಕಿಲೋಮೀಟರ್ ಟೋಲ್ ವ್ಯಾಪ್ತಿಯನ್ನು ಹೊಂದಿದ್ದರೂ ಸಹ, ಸಾದಹಳ್ಳಿ ಟೋಲ್ ಪ್ಲಾಜಾವು ದಿನಂಪ್ರತಿ ಬರೋಬ್ಬರಿ ₹95 ಲಕ್ಷದಿಂದ ₹1 ಕೋಟಿವರೆಗೂ ಆದಾಯ ಗಳಿಸುವ ಮೂಲಕ ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ವಾಹನ ಸಂಚಾರವಿರುವ ಹಾಗೂ ಆದಾಯ ತರುವ ಟೋಲ್ ಪ್ಲಾಜಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿತ್ಯವೂ 1 ಲಕ್ಷಕ್ಕೂ ಅಧಿಕ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಫ್ಲೈಓವರ್ ನಿರ್ಮಾಣದಿಂದ ಪ್ರಯಾಣಿಕರ ನಿತ್ಯದ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ.


