ರಸ್ತೆ ಡಾಂಬರೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.

 ಬೆಂಗಳೂರು : ರಸ್ತೆ ಡಾಂಬರೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.

ಹೆಬ್ಬಾಳ ಮೇಲ್ಸೇತುವೆಯಲ್ಲಿ ಬಿಬಿಎಂಪಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯಿಂದ ನಗರದ ಸಾಗುವ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 11.30 ರಿಂದ ಶನಿವಾರ ನಸುಕಿನ 5 ಗಂಟೆವರೆಗೆ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ

ಹೆಬ್ಬಾಳ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ತುಮಕೂರು ಕಡೆ ಹೊರವರ್ತುಲ ರಸ್ತೆ ಮುಖಾಂತರ ಸಾಗಬೇಕು. ಕುವೆಂಪು ಸರ್ಕಲ್‌ನಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಸೇರಬಹುದು. ಅಲ್ಲಿಂದ ಮುಂದೆ ಸಾಗಿ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮೇಖ್ರಿ ಸರ್ಕಲ್ ಹಾದು ನಗರಕ್ಕೆ ತೆರಳಬಹುದು.

 ಯಲಹಂಕ : ಫ್ಲೈ ಓವರ್‌ ಕಾಮಗಾರಿ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಿ

 ಬೆಂಗಳೂರು : ಯಲಹಂಕದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಫ್ಲೈಓವರ್‌ ನಿರ್ಮಾಣದ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ.

ಯಲಹಂಕದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಲ್ಲಿ ಎರಡು ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯು ಶೇ.60 ರಷ್ಟು ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಯನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ನಿರ್ದೇಶಿಸಲಾಗಿದೆ ಎಂದರು.

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕೆಲವೆಡೆ ಕುಸಿತವಾಗಿದ್ದು, ತ್ವರಿತವಾಗಿ ದುರಸ್ತಿ ಮಾಡಬೇಕು. ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂನ ಟ್ರಾನ್ಸಫಾರ್ಮರ್‌ನಿಂದ ಪಾದಚಾರಿಗಳು ಓಡಾಡಲು ತೊಂದರೆಯಾಗಲಿದ್ದು ಸರಿಪಡಿಸುವಂತೆ ಸೂಚಿಸಿದರು.

ಯಲಹಂಕ ಉಪನಗರದಲ್ಲಿ ನೂತನವಾಗಿ ನಿರ್ಮಿಸಿರುವ ವಾಚ್ ಟವರ್, ಸೈಕಲ್ ಟ್ರ್ಯಾಕ್, ಕಾರ್ ಟವರ್, ಕನ್ನಡ ಅಕ್ಷರ ಮಾಲೆ ಹಾಗೂ ಇತರೆ ಅಲಂಕಾರಿಕ ದೀಪಗಳ ವಾರ್ಷಿಕ ನಿರ್ವಹಣೆಗೆ ಅಗತ್ಯವಿರುವ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಯಲಹಂಕ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರ ರಂಗನಾಥ್‌ ಉಪಸ್ಥಿತರಿದ್ದರು.