ಸರ್ಜಾಪುರದಿಂದ ಹೆಬ್ಬಾಳವರೆಗಿನ ಮೆಟ್ರೋ 'ರೆಡ್ ಲೈನ್' ಯೋಜನೆಯ ₹28,405 ಕೋಟಿ ವೆಚ್ಚದ ಕುರಿತು ಕೇಂದ್ರ ಸರ್ಕಾರ ಮರುಪರಿಶೀಲನೆ ನಡೆಸುತ್ತಿದೆ. ಪ್ರತಿ ಕಿ.ಮೀ.ಗೆ ₹776 ಕೋಟಿ ವೆಚ್ಚವಾಗುವ ಈ ಯೋಜನೆ ತಜ್ಞರ ಸಮಿತಿಯಿಂದ ಮರುಮೌಲ್ಯಮಾಪನಕ್ಕೆ ಒಳಪಡಲಿದೆ.

ಬೆಂಗಳೂರು (ಜೂ. 5): ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ 3A ಅಡಿಯಲ್ಲಿ ಸರ್ಜಾಪುರದಿಂದ ಹೆಬ್ಬಾಳವರೆಗೆ ಸಾಗುವ 'ರೆಡ್ ಲೈನ್' ಮಾರ್ಗದ ಪ್ರಸ್ತಾವಿತ ಯೋಜನೆ ಇದೀಗ ಕೇಂದ್ರ ಸರ್ಕಾರದ ತೀವ್ರ ಗಮನಕ್ಕೆ ಬಂದಿದೆ. ₹28,405 ಕೋಟಿಯ ವೆಚ್ಚದ ಈ ಯೋಜನೆ ಪ್ರತಿ ಕಿಲೋಮೀಟರ್‌ಗೆ ಅಂದಾಜು ₹776.3 ಕೋಟಿ ವೆಚ್ಚವಾಗಲಿದೆ ಎಂಬ ಅಂಶದಿಂದಾಗಿ ಮರುಪರಿಶೀಲನೆಗೆ ಒಳಗಾಗುತ್ತಿದೆ.

ಅತ್ಯಂತ ದುಬಾರಿ ಮೆಟ್ರೋ ಮಾರ್ಗ?

ಬೆಂಗಳೂರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಮೆಟ್ರೋ ಮಾರ್ಗವು ಇಷ್ಟು ದುಬಾರಿ ಮೊತ್ತದಲ್ಲಿ ರೂಪುಗೊಳ್ಳುತ್ತಿದೆ. ಸರ್ಜಾಪುರ, ಕೊರಮಂಗಲ, ಇಬ್ಬಲೂರು, ಹೆಬ್ಬಾಳ ಮುಂತಾದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಈ ಮಾರ್ಗವು ವ್ಯಾಪಕ ಪ್ರಭಾವ ಬೀರುವ ನಿರೀಕ್ಷೆಯಲ್ಲಿದ್ದರೂ ಅದರ ಭಾರೀ ವೆಚ್ಚವು ಚರ್ಚೆಗೆ ಕಾರಣವಾಗಿದೆ. ಕೇಂದ್ರದ ನಗರಾಭಿವೃದ್ಧಿ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಪ್ರಸ್ತುತ ಪ್ರತಿ ಕಿಲೋಮೀಟರ್ ₹776 ಕೋಟಿ ವೆಚ್ಚದ ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ರಾಷ್ಟ್ರದ ಬೇರೆ ಮೆಟ್ರೋ ಯೋಜನೆಗಳಿಗಿಂತ ಅತ್ಯಂತ ದುಬಾರಿಯಾಗಿದೆ ಎಂದು ಹೇಳಿದೆ. ಈ ಹಿನ್ನೆಲೆ ಯೋಜನೆಯು ತಜ್ಞರ ಸಮಿತಿಯಿಂದ ಮರುಮೌಲ್ಯಮಾಪನವಾಗಲಿದೆ ಎಂದು ತಿಳಿಸಿದೆ.

ಮೂಲ ವ್ಯವಸ್ಥೆಗಳ ಮರುಪರಿಶೀಲನೆ

ಈ ಮರುಪರಿಶೀಲನೆಯು ಯೋಜನೆಯ ವಿವಿಧ ತಾಂತ್ರಿಕ ಅಂಶಗಳ ಕುರಿತಾಗಿರಲಿದೆ. ಅಂದರೆ ಮಾರ್ಗದ ನೀಲಿ ನಕ್ಷೆ, ಅಂಡರ್‌ಗ್ರೌಂಡ್ ಮತ್ತು ಮೇಲ್ಭಾಗದ ಮಾರ್ಗ, ಭೂಗತ ಸರಂಗ ನಿರ್ಮಾಣ, ವಿದ್ಯುತ್ ವ್ಯವಸ್ಥೆ, ಟ್ರಾಕ್ಷನ್, ಡಿಪೋ ನಿರ್ಮಾಣ, ನವೀನ ರೈಲು ರೆಕ್‌ಗಳ ಖರೀದಿ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಭೂಗತ ಮಾರ್ಗದ ಸಮಸ್ಯೆಗಳು, ಯಂತ್ರೋಪಕರಣಗಳ ಲಭ್ಯತೆ ವ್ಯತ್ಯಾಸ ಹಾಗೂ ಸ್ಟೇಷನ್ ನಿರ್ಮಾಣ ವೆಚ್ಚವು ಯೋಜನೆಯ ಒಟ್ಟು ಬಜೆಟ್‌ನ್ನು ಹೆಚ್ಚಿಸುತ್ತಿವೆ.

3 ತಿಂಗಳಲ್ಲಿ ತಜ್ಞರ ವರದಿ ನಿರೀಕ್ಷೆ

ಸ್ವತಂತ್ರ ಸಂಸ್ಥೆಯ ತಜ್ಞರಿಂದ ತಯಾರಾಗುವ ಸಂಪೂರ್ಣ ವರದಿ 3 ತಿಂಗಳಲ್ಲಿ ಲಭ್ಯವಾಗಲಿದೆ. ಈ ವರದಿಯ ಆಧಾರದ ಮೇಲೆ ಯೋಜನೆಯ ಮುಂದಿನ ದೃಷ್ಟಿಕೋಣ ನಿರ್ಧರಿಸಲಾಗುವುದು. ನಂತರ ಇತರೆ ಮಾರ್ಗಗಳನ್ನು ಪರಿಗಣಿಸುವುದೆ ಅಥವಾ ತಿದ್ದುಪಡಿ ಮಾಡಬುದೇ ಎಂಬ ನಿರ್ಣಯ ಕೈಗೊಳ್ಳಲಾಗುತ್ತದೆ.

ಸುರಂಗ ಮಾರ್ಗದಿಂದ ದುಬಾರಿ ವೆಚ್ಚ!

ಒಟ್ಟು 14.44 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಬಹುತೇಕ ಭಾಗ ಭೂಗತ ಸುರಂಗ ಮಾರ್ಗವಾಗಿದ್ದು, ಇದೇ ವೆಚ್ಚ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗಿದೆ. ಸುರಂಗ ನಿರ್ಮಾಣ, ಭೂಗತ ಸ್ಟೇಷನ್‌ಗಳು, ಪ್ಲಾಟ್‌ಫಾರ್ಮ್ ಉದ್ದ, ವಿದ್ಯುತ್ ಪೂರೈಕೆ ಹಾಗೂ ನಿರ್ವಹಣಾ ತಾಂತ್ರಿಕತೆ ಎಲ್ಲವೂ ವೆಚ್ಚ ಹೆಚ್ಚಾಗಲು ಕಾರಣವಾಗಿವೆ. ಇನ್ನು 240 ಮೀಟರ್ ಉದ್ದದ ಭೂಗತ ಪ್ಲಾಟ್‌ಫಾರ್ಮ್‌ಗಳ ಬದಲು 190-200 ಮೀಟರ್‌ಗಷ್ಟೇ ನಿಗದಿಪಡಿಸುವ ಮೂಲಕ ನಾಗರಿಕ ವಿನ್ಯಾಸ ವೆಚ್ಚದಲ್ಲಿ ಶೇ.20–25ರಷ್ಟು ಕಡಿತ ಸಾಧ್ಯವಾಗಬಹುದು ಎಂಬ ಪ್ರಸ್ತಾಪವೂ ಈಗ ಚರ್ಚೆಯಲ್ಲಿದೆ.

ಮಾರ್ಗ ಬದಲಾವಣೆ ವಿಷಯಕ್ಕೆ ಸ್ಪಷ್ಟನೆ:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೆಲ ಹೇಳಿಕೆಗಳು ಮಾರ್ಗ ಬದಲಾವಣೆಯ ಊಹಾಪೋಹಗಳಿಗೆ ಕಾರಣವಾದರೂ, ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಅವರ ಪ್ರಕಾರ, ನಿಗದಿತ ಮಾರ್ಗ: ಸರ್ಜಾಪುರ-ಇಬ್ಬಲೂರು (14 ಕಿಮೀ) ಮತ್ತು ಅಗರ–ಕೊರಮಂಗಲ (2.45 ಕಿಮೀ) ಹಾಗೆಯೇ ಇರುತ್ತದೆ. ಉಪಮುಖ್ಯಮಂತ್ರಿಯ ಸೂಚನೆಗಳಿಗೆ ಸಂಬಂಧಿಸಿದ ಬದಲಾವಣೆಗಳು ಕೇವಲ ಡಬಲ್ ಡೆಕ್ ಫ್ಲೈಓವರ್‌ಗಳಿಗೆ ಮಾತ್ರ ಅನ್ವಯ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಅನುಮೋದನೆ ವಿಳಂಬದಿಂದ ಯೋಜನೆಯೂ ವಿಳಂಬ ಸಾಧ್ಯತೆ:

ಈ ಪ್ರಸ್ತಾವಿತ ಮಾರ್ಗಕ್ಕೆ ರಾಜ್ಯ ಸಚಿವ ಸಂಪುಟ ಡಿಸೆಂಬರ್ 2024ರಲ್ಲಿ ಅನುಮೋದನೆ ನೀಡಿದರೂ, ಕೇಂದ್ರದ ಮರುಪರಿಶೀಲನೆ ಹಿನ್ನೆಲೆಯಲ್ಲಿ ಯೋಜನೆಯ ಅಂತಿಮ ಅನುಮೋದನೆ ಡಿಸೆಂಬರ್ 2025ಕ್ಕೆ ನಿರೀಕ್ಷಿಸಲಾಗಿತ್ತು. ಆದರೆ ಈ ತಜ್ಞ ಸಮೀಕ್ಷೆಯ ತಕ್ಷಣದ ಪರಿಣಾಮವಾಗಿ ವಿಳಂಬ ಸಾಧ್ಯತೆ ಇದೆ. ಇನ್ನು ಯೋಜನೆಯ ನಿಗದಿತ ಪೂರ್ಣಗೊಳ್ಳುವ ಗುರಿ ವರ್ಷ 2031 ಆಗಿದೆ. ಹೊಸ ತಂತ್ರಜ್ಞಾನ, ಭದ್ರತಾ ಮಾನದಂಡ ಮತ್ತು ನಗರ ಅಭಿವೃದ್ಧಿಯ ಅಗತ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಯೋಜನೆಯಾಗಿ ಇದು ಪರಿಗಣಿಸಲಾಗುತ್ತಿದೆ.