2003ರ ರಿಂಗ್ ರೋಡ್ ಶುಭಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶುಭಾ ಶಂಕರನಾರಾಯಣ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಬಳಿಕ ಬಂದಿದ್ದ ಈ ಅರ್ಜಿಯನ್ನು ಕಾನೂನು ಚೌಕಟ್ಟಿಗೆ ಬರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬೆಂಗಳೂರು (ಅ.15): ರಾಜಧಾನಿ ಬೆಂಗಳೂರಿನ ಅಪರಾಧ ಇತಿಹಾಸದಲ್ಲೇ ಅತ್ಯಂತ ಸಂಚಲನ ಮೂಡಿಸಿದ್ದ 2003 ರ ರಿಂಗ್ ರೋಡ್ ಶುಭಾ (Ring Road Shubha Case) ಪ್ರಕರಣದ ಪ್ರಮುಖ ಆರೋಪಿ ಶುಭಾ ಶಂಕರನಾರಾಯಣ ಸಲ್ಲಿಸಿದ್ದ 'ಕ್ಷಮಾದಾನ' (Mercy Petition) ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ಸಭೆ ತಿರಸ್ಕರಿಸಿದೆ. ಪ್ರಕರಣದ ಪ್ರಮುಖ ಆರೋಪಿ ಶುಭಾ ಸೇರಿದಂತೆ ನಾಲ್ವರ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ, ಆರೋಪಿಗಳ ಪರವಾಗಿ ರಾಜ್ಯಪಾಲರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲಾಗಿತ್ತು. ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಈ ಅರ್ಜಿಯನ್ನು ರಾಜ್ಯ ಸರ್ಕಾರದ ಪರಿಶೀಲನೆಗಾಗಿ ಸಚಿವ ಸಂಪುಟದ ಅಂಗಳಕ್ಕೆ ರವಾನಿಸಿದ್ದರು.
ಗುರುವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಕ್ಷಮಾದಾನ ಅರ್ಜಿಯ ಕುರಿತು ಸುದೀರ್ಘ ಚರ್ಚೆ ನಡೆಸಿದ ಸರ್ಕಾರ, ಈ ಪ್ರಸ್ತಾವನೆಯು ರಾಜ್ಯದ ಕಾನೂನಿನ ಚೌಕಟ್ಟಿನ ಒಳಗಡೆ ಬರುವುದಿಲ್ಲ ಹಾಗೂ ನಮ್ಮ ಆಡಳಿತಾತ್ಮಕ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸ್ಪಷ್ಟ ಕಾರಣ ನೀಡಿ ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಈ ಪ್ರಕರಣದಲ್ಲಿ ಮಾತನಾಡಿದ ಗಿರೀಶ್ ಸಹೋದರಿ ಸುನೀತಾ, ಪ್ರಕರಣ ಸಂಬಂಧ ನಡೆದ ಸುದೀರ್ಘ ಕಾನೂನು ಹೋರಾಟವನ್ನು ನೆನಪಿಸಿಕೊಂಡರು. ಇದರ ಹೋರಾಟ ನಡೆಸಿಯೇ ನಮ್ಮ ತಂದೆ ಸಾವು ಕಂಡರು. ಇಷ್ಟು ವರ್ಷದ ಹೋರಾಟಕ್ಕೆ ನ್ಯಾಯ ಬೇಕು. ಸರ್ಕಾರ ಕೂಡ ನ್ಯಾಯದ ಪರವಾಗಿ ನಿಲ್ಲಬೇಕು. ನ್ಯಾಯ ಇಲ್ಲಿವರೆಗೂ ಗೆದ್ದಿದೆ ಇನ್ನೂ ಮುಂದೆ ಕೂಡ ಗೆಲ್ಲಲಿದೆ ಎಂದು ಹೇಳಿದ್ದಾರೆ.
ರೋಚಕ ತಿರುವು ಪಡೆದಿದ್ದ 2003 ರ ಕೊಲೆ ಪ್ರಕರಣ
2003 ರಲ್ಲಿ ನಡೆದ ಈ ಘಟನೆ ಆ ದಿನಗಳಲ್ಲಿ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೊಲೆಯಾದ ಗಿರೀಶ್ ಹಾಗೂ ಪ್ರಮುಖ ಆರೋಪಿ ಶುಭಾ ಶಂಕರನಾರಾಯಣ ಇಬ್ಬರ ಕುಟುಂಬಗಳು ಹಳೆಯ ಪರಿಚಿತರಾಗಿದ್ದವು. ಗಿರೀಶ್ ಖಾಸಗಿ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರೆ, ಶುಭಾ ಐದನೇ ಸೆಮಿಸ್ಟರ್ ಕಾನೂನು (Law) ಪದವಿ ವ್ಯಾಸಂಗ ಮಾಡುತ್ತಿದ್ದಳು.
ಎರಡೂ ಕುಟುಂಬಗಳ ಸಮ್ಮತಿಯಂತೆ 2003 ರ ನವೆಂಬರ್ 30 ರಂದು ಗಿರೀಶ್ ಹಾಗೂ ಶುಭಾ ನಡುವೆ ಅದ್ದೂರಿಯಾಗಿ ನಿಶ್ಚಿತಾರ್ಥ (Engagement) ನೆರವೇರಿತ್ತು. ಆದರೆ, ಶುಭಾ ತಾನು ಓದುತ್ತಿದ್ದ ಲಾ ಕಾಲೇಜಿನ ಜೂನಿಯರ್ ವಿದ್ಯಾರ್ಥಿಯಾಗಿದ್ದ ಅರುಣ್ ವರ್ಮಾ ಎಂಬುವವನನ್ನು ಪ್ರೀತಿಸುತ್ತಿದ್ದಳು. ಪ್ರಿಯಕರ ಅರುಣ್ನನ್ನು ಮದುವೆಯಾಗುವ ಕಾರಣಕ್ಕೆ, ತನಗೆ ನಿಶ್ಚಿತಾರ್ಥವಾಗಿದ್ದ ಭಾವಿ ಪತಿ ಗಿರೀಶ್ನನ್ನು ಕೊಲೆ ಮಾಡಲು ಶುಭಾ ಸಂಚು ರೂಪಿಸಿದ್ದಳು.
ರಿಂಗ್ ರೋಡ್ನಲ್ಲಿ ಅಂದು ನಡೆದಿದ್ದ ಭೀಕರ ಕೃತ್ಯ
ನಿಶ್ಚಿತಾರ್ಥವಾದ ಕೆಲವೇ ದಿನಗಳಲ್ಲಿ, ಅಂದರೆ 2003 ರ ಡಿಸೆಂಬರ್ 3 ರ ರಾತ್ರಿ ಗಿರೀಶ್ ಭಾವಿ ಪತ್ನಿ ಶುಭಾಳನ್ನು ಪ್ರೀತಿಯಿಂದ ರಾತ್ರಿಯ ಡಿನ್ನರ್ಗೆ ಕರೆದೊಯ್ದಿದ್ದ. ಊಟ ಮುಗಿದ ಬಳಿಕ, ಶುಭಾ ಎಚ್ಎಎಲ್ (HAL) ವಿಮಾನ ನಿಲ್ದಾಣದ ಬಳಿ ವಿಮಾನಗಳ ಹಾರಾಟ ಹಾಗೂ ಲ್ಯಾಂಡಿಂಗ್ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ್ದಳು.
ಭಾವಿ ಪತ್ನಿಯ ಆಸೆಯಂತೆ ಗಿರೀಶ್ ಆಕೆಯನ್ನು ಕೋರಮಂಗಲ-ಇಂದಿರಾನಗರ ಒಳಗೊಂಡ ಹೆಚ್ಎಎಲ್ ರಿಂಗ್ ರೋಡ್ನ ವಿಮಾನ ವೀಕ್ಷಣಾ ಸ್ಥಳಕ್ಕೆ ಕರೆದೊಯ್ದಿದ್ದ. ಇಬ್ಬರೂ ರಿಂಗ್ ರೋಡ್ನಲ್ಲಿ ನಿಂತು ವಿಮಾನಗಳ ಹಾರಾಟ ವೀಕ್ಷಿಸುತ್ತಿದ್ದಂತೆಯೇ, ಮುಂಚಿತವಾಗಿಯೇ ಯೋಜಿಸಿದಂತೆ ಸ್ಥಳಕ್ಕೆ ಬಂದ ಆರೋಪಿಗಳು ಗಿರೀಶ್ ಮೇಲೆ ಮಾರಣಾಂತಿಕ ದಾಳಿ ನಡೆಸಿದರು. ಬೈಕ್ನ ಶೋಕ್ ಅಬ್ಸಾರ್ಬರ್ನಿಂದ (Shock Absorber) ಗಿರೀಶ್ ತಲೆಗೆ ಭೀಕರವಾಗಿ ಹೊಡೆದು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡ ಗಿರೀಶ್ನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮರುದಿನವೇ ಗಿರೀಶ್ ಕೊನೆಯುಸಿರೆಳೆದಿದ್ದರು.
ತನಿಖೆ, ಜೀವಾವಧಿ ಶಿಕ್ಷೆ ಮತ್ತು ಅಂತಿಮ ಹಿನ್ನಡೆ
ಘಟನೆ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಕೆ.ಎ. ನಾಣಯ್ಯ ಅವರು ಚುರುಕಿನ ತನಿಖೆ ನಡೆಸಿ ಶುಭಾಳ ರಹಸ್ಯ ಪ್ರೇಮ ಹಾಗೂ ಕೊಲೆಯ ಸಂಚನ್ನು ಬಯಲಿಗೆಳೆದಿದ್ದರು. ತನಿಖೆಯ ಬಳಿಕ ಪೊಲೀಸರು ಪ್ರಮುಖ ರೂವಾರಿ ಶುಭಾ, ಆಕೆಯ ಪ್ರಿಯಕರ ಅರುಣ್ ವರ್ಮಾ ಹಾಗೂ ಕೊಲೆಗೆ ಸಹಕರಿಸಿದ್ದ ವೆಂಕಟೇಶ್ ಮತ್ತು ದಿನೇಶ್ ಎಂಬುವವರನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು ನಾಲ್ವರೂ ತಪ್ಪಿತಸ್ಥರು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ನ್ಯಾಯಾಲಯದ ಶಿಕ್ಷೆಯನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಜುಲೈ 2025 ರಲ್ಲಿ ಭಾರತೀಯ ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿ, ನಾಲ್ವರ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದು ಅಂತಿಮ ಆದೇಶ ನೀಡಿತ್ತು. ಇದೀಗ ನ್ಯಾಯಾಲಯದ ಬಾಗಿಲುಗಳು ಮುಚ್ಚಲ್ಪಟ್ಟ ನಂತರ ರಾಜ್ಯಪಾಲರ ಮೂಲಕ ಸಚಿವ ಸಂಪುಟದ ಅಂಗಳಕ್ಕೆ ತಲುಪಿದ್ದ 'ಕ್ಷಮಾದಾನ' ಅರ್ಜಿಯನ್ನೂ ಸಹ ಸರ್ಕಾರ ತಿರಸ್ಕರಿಸಿರುವುದರಿಂದ ಆರೋಪಿಗಳಿಗೆ ಕಾನೂನಿನ ಎಲ್ಲಾ ದಾರಿಗಳೂ ಬಂದ್ ಆದಂತಾಗಿದೆ.

