Renukaswamy Murder Case Hearing Adjourned to Oct 29 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರ ಆರೋಪಿಗಳ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಅಕ್ಟೋಬರ್ 29ಕ್ಕೆ ಮುಂದೂಡಿದೆ. ದರ್ಶನ್‌ಗೆ ಕನಿಷ್ಠ ಸೌಲಭ್ಯ ನೀಡಿಲ್ಲ ಎಂಬ ದೂರಿನ ಬಗ್ಗೆ ಪ್ರಾಧಿಕಾರವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಬೆಂಗಳೂರು (ಅ.18): ದರ್ಶನ್ & ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಚಾರಣೆ ಇಂದು ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಆರೋಪಿಗಳು ಹಾಜರಾಗಿದ್ದರೆ, ಜಾಮೀನು ಪಡೆದಿರುವ ಉಳಿದ ಆರೋಪಿಗಳು ಖುದ್ದು ಹಾಜರಾಗಿದ್ದರು. 64ನೇ ಸೆಷನ್ಸ್ ಕೋರ್ಟ್‌ನಲ್ಲಿ ನ್ಯಾಯಾಧೀಶ ಐಪಿ ನಾಯ್ಕ್ ಅವರಿಂದ ವಿಚಾರಣೆ ನಡೆಯಿತು. ದೀಪಕ್, ನಿಖಿಲ್‌ನಾಯ್ಕ್ ಹೊರತುಪಡಿಸಿ ಉಳಿದ ಆರೋಪಿಗಳು ಕೋರ್ಟ್‌ಗೆ ಆಗಮಿಸಿದ್ದರು. ಬಳಿಕ ಜಡ್ಜ್ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿಕೆ ಮಾಡಿದ್ದು, ಆ ದಿನ ಎಲ್ಲಾ ಆರೋಪಿಗಳು ಹಾಜರರಿಬೇಕು ಎಂದು ಸೂಚನೆ ನೀಡಲಾಗಿದೆ.
ಅದರೊಂದಿಗೆ ಆರೋಪಿ ದರ್ಶನ್ ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ಇಲ್ಲದ ವಿಚಾರಣೆ ಕೂಡ ನಡೆಯಲಿದೆ. ದರ್ಶನ್ ಗೆ ಜೈಲಿನಲ್ಲಿ ಸೌಲಭ್ಯ ನೀಡಿರುವ ಬಗ್ಗೆ ತಪಾಸಣೆ ವರದಿ ಕೋರ್ಟ್ ಗೆ ಸಲ್ಲಿಕೆಯಾಗಿದೆ. ಬೆಂಗಳೂರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ವರದರಾಜ್ ಅವರಿಂದ ವರದಿ ಸಲ್ಲಿಕೆ ಆಗಿದೆ. ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ವರದಿ ಸಲ್ಲಿಕೆ ಮಾಡಿದ್ದಾರೆ.
ಕಳೆದ ಮಂಗಳವಾರ ಜೈಲಿಗೆ ಭೇಟಿ ನೀಡಿ ನ್ಯಾ.ವರದರಾಜ್ ತಪಾಸಣೆ ನಡೆಸಿದ್ದರು. ತಪಾಸಣೆ ನಡೆಸಿ ವರದಿ ನೀಡುವಂತೆ ಸೆಷನ್ಸ್ ಕೋರ್ಟ್ ಸೂಚಿಸಿತ್ತು. ನ್ಯಾ.ವರದರಾಜ್ ಸಲ್ಲಿಸಿರುವ ವರದಿಯನ್ನು ಕೋರ್ಟ್ ಪರಿಶೀಲನೆ ಮಾಡಲಿದೆ. ವರದಿ ಆಧರಿಸಿ ಕನಿಷ್ಠ ಸೌಲಭ್ಯ ನೀಡದ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕೋರ್ಟ್ ಇತ್ಯರ್ಥ ಮಾಡಬೇಕಿದೆ. ಈಗಾಗಲೇ ವಾದ ಪ್ರತಿವಾದವನ್ನು ಕೋರ್ಟ್ ಆಲಿಸಿದ್ದು, ಇಂದು ಸಲ್ಲಿಕೆಯಾಗಿರೋ ವರದಿ ಆಧರಿಸಿ ನ್ಯಾಯಾಂಗ ನಿಂದನೆ ಅರ್ಜಿ ಆದೇಶ ಹೊರಬೀಳಲಿದೆ. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೀಡಿದ್ದ ವರದಿಯನ್ನು ಜಡ್ಜ್ ಪರಿಶೀಲನೆ ಮಾಡಿದ್ದಾರೆ. ಇದರ ಆದೇಶ ಮಧ್ಯಾಹ್ನ 3 ಗಂಟೆಗೆ ಹೊರಬೀಳಲಿದೆ.
ಅ.24ಕ್ಕೆ ಡಿಶ್ಚಾರ್ಜ್ ಅರ್ಜಿ ವಿಚಾರಣೆ ಮುಂದೂಡಿಕೆ
ಈ ಪ್ರಕರಣದಿಂದ ತಮ್ಮನ್ನು ಹೊರಗಿಡುವಂತೆ ಕೋರಿ ಎ12 ಆರೋಪಿ ಲಕ್ಷ್ಮಣ್ ಸಲ್ಲಿಸಿದ್ದ ಡಿಶ್ಚಾರ್ಜ್ ಅರ್ಜಿಯ ವಿಚಾರಣೆಯನ್ನೂ ಕೂಡ ಕೋರ್ಟ್ ಮುಂದೂಡಿದ್ದು, ಅ.24ಕ್ಕೆ ವಿಚಾರಣೆ ನಿಗದಿ ಮಾಡಿದೆ. ಅ.24 ರಂದೇ ಪ್ರಾಧಿಕಾರದ ವರದಿ ಬಗ್ಗೆ ವಾದಮಂಡನೆ ಆಗಲಿದೆ. ವರದಿಯ ಪ್ರತಿ ಸಿಕ್ಕ ಬಳಿಕ ದರ್ಶನ್ ಪರ ವಕೀಲರು ವಾದ ಮಂಡನೆ ಮಾಡಲಿದ್ದಾರೆ.
ಹಾಸಿಗೆ, ದಿಂಬು ಸೇರಿ ಕನಿಷ್ಠ ಸೌಲಭ್ಯ ನೀಡಿಲ್ಲ ಎಂದು ದರ್ಶನ್‌ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೊನೆಗೆ ನ್ಯಾಯಾಧೀಶರೇ ಬಂದು ನೋಡಲಿ ಎಂದೂ ಕೋರ್ಟ್‌ಗೆ ಹೇಳಿದ್ದರು. ಈ ಸಂಬಂಧ ಬೆಂಗಳೂರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಳೆದ ಮಂಗಳವಾರ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಸೌಲಭ್ಯವನ್ನು ಪರಿಶೀಲನೆ ಮಾಡಿ ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ಅದರೊಂದಿಗೆ ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಶಿಫಾರಸು ಕೋರಿ ಕೂಡ ದರ್ಶನ್ ಅರ್ಜಿ ಸಲ್ಲಿಸಿದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವರದಿ ಆಧರಿಸಿ ಕೋರ್ಟ್ ತೀರ್ಪು ನೀಡಲಿದೆ. ದರ್ಶನ್ ಅರ್ಜಿಯ ವಾದ ಪ್ರತಿವಾದ ಆಲಿಸಿ ಸೆಷನ್ಸ್ ಕೋರ್ಟ್ ಆದೇಶ ಕಾಯ್ದಿರಿಸಿತ್ತು.
