ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೂಷ್ ಮಾಫಿ ಸಾಕ್ಷಿಯಾಗಿ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸುತ್ತಿದ್ದಾರೆ. ಇದನ್ನು ತಡೆಯಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ವಿಡಿಯೋ ವೈರಲ್ ಬಗ್ಗೆಯೂ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಬೆಂಗಳೂರು: ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಮತ್ತೊಂದು ಮಹತ್ವದ ಘಟ್ಟ ತಲುಪಿದ್ದು, ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೂಷ್‌ ಸೋಮವಾರ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ಗೆ ಖುದ್ದು ಹಾಜರಾಗಿ ತನ್ನ ಸಾಕ್ಷ್ಯ ದಾಖಲಿಸಿದ್ದಾರೆ. ಮಂಗಳವಾರವೂ ಹೇಳಿಕೆ ದಾಖಲಿಸುವುದು ಮುಂದುವರೆದಿದೆ.

ಇದರ ಬೆನ್ನಲ್ಲೇ ಮಾಫಿ ಸಾಕ್ಷಿ ಹೇಳಿಕೆ ವಿಚಾರವಾಗಿ ಪ್ರದೂಷ್ ಹೇಳಿಕೆಗೆ ತಡೆ ತರಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ತನ್ನ ವಕೀಲರ ಮೂಲಕದ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಇನ್ನೂ ಕೂಡ ಪೆಂಡಿಂಗ್ ಸ್ಟೇಟಸ್‌ನಲ್ಲಿದ್ದು, ಸ್ವೀಕೃತವಾಗಿಲ್ಲ. ಮತ್ತೊಂದು ಕಡೆ 59ನೇ ಸೆಷನ್ಸ್​ ಕೋರ್ಟ್​​ ನಲ್ಲಿ ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಿದೆ.

ಸೆ.29ರ ಎರಡನೇ ದಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಪ್ರದೂಷ್ ಸಾಕ್ಷ್ಯ ದಾಖಲಾತಿ ವಿಧಾನದ ಕುರಿತು ಗಂಭೀರ ಆಕ್ಷೇಪ ಎತ್ತಿದರು. ಪ್ರದೂಷ್ ಈಗಾಗಲೇ ಆರೋಪಿ ಸ್ಥಾನದಿಂದ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾನೆ. ಈ ಹಂತದಲ್ಲಿ ಅವರ ವಕೀಲರಿಗೆ ಇದರಲ್ಲಿ ಪಾತ್ರವಿರುವುದಿಲ್ಲ. ಆದರೂ ಸೋಮವಾರ ಕೋರ್ಟ್ ಆವರಣದಲ್ಲಿ ಪ್ರದೂಷ್ ಅವರೊಂದಿಗೆ ವಕೀಲರು ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಪೊಲೀಸರು ಇಂತಹ ಸಂಭಾಷಣೆಗಳಿಗೆ ಅವಕಾಶ ನೀಡಬಾರದು. ಈ ಬಗ್ಗೆ ತಮ್ಮ ವಾದವನ್ನ ಪರಿಗಣನೆಗೆ ತೆಗದುಕೊಳ್ಳುವಂತೆ ಹಷ್ಮತ್​​ ಪಾಷಾ ಮನವಿ ಮಾಡಿದರು.

ಫೋನ್ ಕರೆ ಸೌಲಭ್ಯ ಮನವಿ

​​ಜೈಲಿನಲ್ಲಿರುವ ಆರೋಪಿಗಳಿಗೆ ತಮ್ಮ ಕುಟುಂಬಸ್ಥರೊಂದಿಗೆ ಫೋನ್‌ನಲ್ಲಿ ಮಾತನಾಡಲು ಅವಕಾಶ ನೀಡಬೇಕೆಂಬ ಮನವಿಗೆ ಸ್ಪಂದಿಸಿದ ನ್ಯಾಯಾಲಯ, ಈ ಕುರಿತು ಜೈಲು ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸುವಂತೆ ಸೂಚಿಸಿತು.

ದರ್ಶನ್ ವಿಡಿಯೋ ವೈರಲ್ ಬಗ್ಗೆ ಪ್ರಸ್ತಾಪ

ಸೋಮವಾರ ನ್ಯಾಯಾಲಯದ ವಿಚಾರಣೆಯ ವೇಳೆ ನಡೆದ ಕೆಲವು ಘಟನೆಗಳ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯವನ್ನು ವಕೀಲ ರಂಗನಾಥ್ ರೆಡ್ಡಿ ಅವರು ಪೀಠದ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಪ್ರದೂಷ್ ಅವರ ಸಾಕ್ಷ್ಯ ದಾಖಲಾತಿಯು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರತುಪಡಿಸಿ, ಉಳಿದೆಲ್ಲರನ್ನು ತಕ್ಷಣವೇ ಕೋರ್ಟ್ ಹಾಲ್‌ನಿಂದ ಹೊರಹೋಗುವಂತೆ ಸೂಚಿಸಿ, ಬಾಗಿಲು ಮುಚ್ಚಿದ ಕೋಣೆಯಲ್ಲಿ ವಿಚಾರಣೆ ಮುಂದುವರಿಸಲಾಯಿತು.

ನ್ಯಾಯಾಲಯದ ಕಲಾಪಗಳನ್ನು ಯಾವುದೇ ಕಾರಣಕ್ಕೂ ವಿಡಿಯೋ ರೆಕಾರ್ಡ್ ಮಾಡುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪೀಠವು ಎಚ್ಚರಿಕೆ ನೀಡಿತು. ಜೈಲಿನಲ್ಲಿರುವ ಇತರ ಆರೋಪಿಗಳಿಗೆ ಆಡಿಯೋ ಮತ್ತು ವಿಡಿಯೋ ಸಂಪರ್ಕ ಕಲ್ಪಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನ್ಯಾಯಾಧೀಶರು, ಪ್ರದೂಷ್ ಅವರಿಂದ ಸತ್ಯವನ್ನಷ್ಟೇ ಹೇಳುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದುವರೆಸಿದರು