ಬೆಂಗಳೂರಿನಲ್ಲಿ ತಡರಾತ್ರಿ ಪಟಾಕಿ ಸಿಡಿಸುವವರ ವಿರುದ್ಧ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಫನ್ ವರ್ಲ್ಡ್ ಆಡಳಿತ ಮಂಡಳಿಯು ಈ ಆರೋಪವನ್ನು ತಳ್ಳಿಹಾಕಿದ್ದು, ತಮ್ಮಲ್ಲಿ ಪಟಾಕಿ ಸಿಡಿಸಲು ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ತಪ್ಪು ಮಾಹಿತಿಯಿಂದ ಮಾಡಿದ ಟ್ವೀಟ್ ಅನ್ನು ಡಿಲೀಟ್ ಮಾಡುವಂತೆ ರಮ್ಯಾಗೆ ಮನವಿ ಮಾಡಿದೆ.
ಬೆಂಗಳೂರು: ಇತ್ತೀಚಿಗಿನ ದಿನಗಳಲ್ಲಿ ನಗರದಲ್ಲಿ ತಡರಾತ್ರಿ ಮೋಜಿಗಾಗಿ ಪಟಾಕಿ ಸಿಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂತಹವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಮೋಹಕತಾರೆ ರಮ್ಯಾ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರಾತ್ರಿ ಸುಮಾರು ಮೂರು ಗಂಟೆಯಾದ್ರೂ 'ಫನ್ ವರ್ಲ್ಡ್'ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವವರ ವಿರುದ್ದ ರಮ್ಯಾ ಕಿಡಿ ಕಾಡಿದ್ದರು. ಇದಕ್ಕೀಗ ಫನ್ ವರ್ಲ್ಡ್ ಮ್ಯಾನೇಜ್‌ಮೆಂಟ್ ಸ್ಪಷ್ಟನೆ ನೀಡಿದೆ.
ಕಿಡಿ ಹಚ್ಚಿದ ರಮ್ಯಾ ಟ್ವೀಟ್
ರಾತ್ರಿ 10 ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ವಿಶೇಷ ಅನುಮತಿಯಿದ್ದರೂ ಸಹ ಮಧ್ಯರಾತ್ರಿಯ ನಂತರ ಲೌಡ್ ಸ್ಪೀಕರ್ ಬಳಸುವಂತಿಲ್ಲ. ವಿಶೇಷ ಸಂದರ್ಭಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಎನ್ನುವುದು ನನಗೂ ಅರ್ಥವಾಗುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಅಡ್ಜೆಸ್ಟ್ ಮಾಡಿಕೊಳ್ಳಲು ಖಂಡಿತವಾಗಿಯೂ ಆಗುವುದಿಲ್ಲ. ಇಲ್ಲೇ ಹತ್ತಿರದಲ್ಲೇ ಆಸ್ಪತ್ರೆಗಳಿವೆ, ಸುತ್ತಮುತ್ತ ಹಿರಿಯ ನಾಗರಿಕರು ಮತ್ತು ಮಕ್ಕಳು ವಾಸಿಸುತ್ತಿದ್ದಾರೆ. ಹೀಗೆ ಮಧ್ಯರಾತ್ರಿ ಪಟಾಕಿ ಸಿಡಿಸೋದು, ಜೋರಾಗಿ ಸಾಂಗ್ಸ್ ಹಾಕೋದು ಎಷ್ಟು ಸರಿ? ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ರಮ್ಯಾ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದರು.
ಫನ್ ವರ್ಲ್ಡ್ ಕಡೆಯಿಂದ ಸ್ಪಷ್ಟನೆ:
ಇದೀಗ ರಮ್ಯಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಫನ್ ವರ್ಲ್ಡ್ ಮ್ಯಾನೇಜ್‌ಮೆಂಟ್ ಪ್ರತಿಕ್ರಿಯಿಸಿದ್ದು, ರಮ್ಯಾ ಅವರು ಹೇಳಿದ ಸಮಯದಲ್ಲಿ ಫನ್ ವರ್ಲ್ಡ್ ಓಪನ್ ಇರುವುದಿಲ್ಲ ಎಂದಿದ್ದಾರೆ. ಫನ್ ವರ್ಲ್ಡ್‌ನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7ರಷ್ಟರಲ್ಲಿ ಎಲ್ಲಾ ಆ್ಯಕ್ಟಿವಿಟೀಸ್ ಮುಗಿಯುತ್ತೆ. ನಮ್ಮಲ್ಲಿ ಯಾವುದೇ ಪಟಾಕಿಗಳನ್ನು ಫನ್ ವರ್ಲ್ಡ್ ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಒಳಗೆ ಬರುವವರ ಬ್ಯಾಗ್ ಸಂಪೂರ್ಣವಾಗಿ ಚೆಕ್ ಮಾಡಿ ಕಳಿಸಲಾಗುತ್ತೆ. ಪಕ್ಕದಲ್ಲೇ ಪೊಲೀಸ್ ಠಾಣೆಯಿದ್ದು, ಅವರು ನಮ್ಮನ್ನು ಗಮನಿಸುತ್ತಾರೆ. ಬೇಕಾದ್ರೆ ಬಂದು ನಮ್ಮ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಬಹುದು ಎಂದಿದ್ದಾರೆ.
ರಮ್ಯಾ ಅವರು ತಪ್ಪು ಮಾಹಿತಿಯಿಂದ ಹೀಗೆ ಹಾಕಿರಬಹುದು. ನಮ್ಮ ಎದುರು ಭಾಗದಲ್ಲಿ ಪ್ರತಿ ವರ್ಷ ದಸರಾ ಹಬ್ಬ ಆಚರಣೆ ಮಾಡುತ್ತಾರೆ. ಬಹುಶಃ ಅವರು ಏನಾದ್ರೂ ಪಟಾಕಿ ಹೊಡೆದಿರಬಹುದು. ಅದನ್ನು ಇವರು ತಪ್ಪಾಗಿ ತಿಳಿದುಕೊಂಡು ನಮ್ಮ ಮೇಲೆ ಹೇಳಿರಬಹುದು. ನಾವು ಒಳ್ಳೆಯ ರೀತಿಯಿಂದ ರಿಕ್ವೆಸ್ಟ್ ಮಾಡುತ್ತಿದ್ದೇವೆ. ನಿಮಗೆ ತಪ್ಪು ಮಾಹಿತಿ ಬಂದಿದೆ. ಒಳೆಯ ರೀತಿಯಿಂದ ಟ್ವೀಟ್ ರಿಮೂವ್ ಮಾಡಿ, ತಪ್ಪು ಮಾಹಿತಿ ಬಂದಿದೆ ಎಂದು ತಿಳಿಸಿ. ಪ್ಲೀಜ್ ನಿಮ್ಮ ಪೋಸ್ಟ್ ಅನ್ನು ರಿಮೂವ್ ಮಾಡಿ ನನ್ನ ಕಡೆಯಿಂದ ತಪ್ಪಾಗಿದೆ ಎಂದು ಟ್ವೀಟ್ ಮಾಡಬಹುದು ಎಂದು ಫನ್ ವರ್ಲ್ಡ್ ಮ್ಯಾನೇಜರ್ ಹಾಗೂ ಇನ್‌ಚಾರ್ಜ್ ಸೂರ್ಯ ಹೇಳಿದ್ದಾರೆ.


