ಬೆಂಗಳೂರಿನ ಇಂದಿರಾನಗರದ ಟೆಕ್ಕಿಯೊಬ್ಬಳು ತನ್ನ ಪ್ರಿಯಕರನಿಗೆ ಸ್ನ್ಯಾಪ್‌ಚಾಟ್ ಮೂಲಕ ಕಳುಹಿಸಿದ್ದ ಖಾಸಗಿ ಫೋಟೋಗಳು ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿವೆ. ಖಾತೆ ಹ್ಯಾಕ್ ಮಾಡಿ ಈ ಕೃತ್ಯವೆಸಗಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಇಂದಿರಾನಗರ ನಿವಾಸಿ ಹಾಗೂ 28 ವರ್ಷದ ಟೆಕ್ಕಿ ಚಾರುಮತಿ (ಹೆಸರು ಬದಲಾಯಿಸಲಾಗಿದೆ) ತಮ್ಮ ಪ್ರಿಯಕರ ದೇವಾನಂದ್ (ಹೆಸರು ಬದಲಾಯಿಸಲಾಗಿದೆ) ಕೋರಿಕೆಯಂತೆ ಕೆಲವೊಂದು ಖಾಸಗಿ ಫೋಟೋಗಳನ್ನು ರವಾನಿಸಿದ್ದರು. ಈ ಫೋಟೋಗಳನ್ನು ಚಾರುಮತಿ ಸ್ನ್ಯಾಪ್‌ಚಾಟ್ (Snapchat) ಖಾತೆಯ ಮೂಲಕ ದೇವಾನಂದ್‌ಗೆ ಕಳುಹಿಸಿದ್ದರು. ಆದರೆ ತಮ್ಮ ಖಾಸಗಿ ನಗ್ನ ಫೋಟೋ ಮತ್ತು ವೀಡಿಯೋಗಳು ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿರುವ ವಿಷಯ ತಿಳಿದು ಚಾರುಮತಿ ಶಾಕ್ ಆಗಿದ್ದಾರೆ.

ದೂರು ಸಲ್ಲಿಕೆ ಮಾಡಿರುವ ಟೆಕ್ಕಿ

ದುಷ್ಕರ್ಮಿಗಳು ಯುವತಿಯ ಸ್ನ್ಯಾಪ್‌ಚಾಟ್ ಖಾತೆಯನ್ನು ಹ್ಯಾಕ್ ಮಾಡಿ, ಅದರಲ್ಲಿದ್ದ ಅತ್ಯಂತ ವೈಯಕ್ತಿಕ ದೃಶ್ಯಗಳನ್ನು ಕದ್ದು ಪೋ*ರ್ನ್ ವೆಬ್‌ಸೈಟ್‌ಗೆ ಹರಿದುಬಿಟ್ಟಿದ್ದಾರೆ. ತಮ್ಮ ಖಾಸಗಿ ಫೋಟೋಗಳನ್ನು ಪೋರ್ನ್ ತಾಣದಲ್ಲಿ ನೋಡಿ ತೀವ್ರ ದಿಗ್ಭ್ರಮೆಗೊಂಡ ಟೆಕ್ಕಿ ಚಾರುಮತಿ, ತಕ್ಷಣವೇ ಪೂರ್ವ ವಿಭಾಗದ ಸೆನ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚಾರುಮತಿ ಸಲ್ಲಿಕೆ ಮಾಡಿರುವ ದೂರಿನಲ್ಲಿ ಏನಿದೆ?

ಚಾರುಮತಿ ಸಲ್ಲಿಸಿರುವ ದೂರಿನಲ್ಲಿ ಸಾಮಾಜಿಕ ಜಾಲತಾಣಗಳಿಂದ ತಮ್ಮ ಖಾಸಗಿ ಫೋಟೋ-ವೀಡಿಯೋಗಳನ್ನು ತಕ್ಷಣವೇ ತೆಗೆದುಹಾಕಲು (Take down) ಮತ್ತು ಈ ಕೃತ್ಯದ ಹಿಂದಿರುವ ಹ್ಯಾಕರ್ ಅಥವಾ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪ್ರಿಯಕರ ಅಥವಾ ಪರಿಚಿತರು ಕೇಳಿದರೆಂದು ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಯುವತಿಯರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಘಟನೆ ಕಣ್ಣುಮುಂದಿರುವ ಉದಾಹರಣೆಯಾಗಿದೆ.