ಬೆಂಗಳೂರಿನ ಬ್ರಂಟನ್ ರಸ್ತೆಯನ್ನು ಪ್ರೆಸ್ಟೀಜ್ ಗ್ರೂಪ್ 3 ಕೋಟಿ ರೂ. ವೆಚ್ಚದಲ್ಲಿ ಪುನರಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಲಾಗುತ್ತಿದ್ದು, ಪಾದಚಾರಿ ಮಾರ್ಗ ಮತ್ತು ಬೀದಿ ದೀಪಗಳನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ.

ಬೆಂಗಳೂರು (ಜು.23): ದೇಶದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ 'ಪ್ರೆಸ್ಟೀಜ್ ಗ್ರೂಪ್' (Prestige Group), ಬೆಂಗಳೂರಿನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (CBD) ವ್ಯಾಪ್ತಿಯ ಎಂ.ಜಿ. ರಸ್ತೆ ಸಮೀಪವಿರುವ 800 ಮೀಟರ್ ಉದ್ದದ ಬ್ರಂಟನ್ ರಸ್ತೆಯ (Brunton Road) ಪುನರಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದೆ. ಮುಂಬರುವ ಮೂರರಿಂದ ನಾಲ್ಕು ವಾರಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವಿಶೇಷವೆಂದರೆ, ಈ ಬ್ರಂಟನ್ ರಸ್ತೆಯಲ್ಲೇ ಪ್ರೆಸ್ಟೀಜ್ ಗ್ರೂಪ್‌ನ ಕಾರ್ಪೊರೇಟ್ ಪ್ರಧಾನ ಕಚೇರಿಯಿದ್ದು, ಇದು ಗ್ರಾಹಕರು, ಹೂಡಿಕೆದಾರರು ಮತ್ತು ವಾಣಿಜ್ಯ ಪಾಲುದಾರರಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ಮರುನಿರ್ಮಾಣ

ಕಂಪನಿಯ ಪ್ರಕಾರ, ಈ ಅಭಿವೃದ್ಧಿ ಯೋಜನೆಯು ರಸ್ತೆಯ ಗುಣಮಟ್ಟ, ಪಾದಚಾರಿ ಮೂಲಸೌಕರ್ಯ, ಮಳೆನೀರು ಚರಂಡಿ ಮತ್ತು ಬೀದಿ ದೀಪ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಿದೆ. ಇದರೊಂದಿಗೆ ಸುಸ್ಥಿರ ನಿರ್ಮಾಣ ಪದ್ಧತಿಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ರಸ್ತೆಯ ಬಾಳಿಕೆಯನ್ನು ಹೆಚ್ಚಿಸಲು ಮತ್ತು ಮರುಬಳಕೆ ತತ್ವವನ್ನು ಉತ್ತೇಜಿಸಲು, ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ 'ಪ್ಲಾಸ್ಟಿಕ್-ಮಾಡಿಫೈಡ್ ಬಿಟುಮೆನ್' (Plastic-modified Bitumen) ಬಳಸಿ ರಸ್ತೆಯನ್ನು ಮರುನಿರ್ಮಾಣ ಮಾಡಲಾಗುತ್ತಿದೆ.

ಇದರ ಜೊತೆಗೆ, ರಸ್ತೆಯ ಎರಡೂ ಬದಿಗಳಲ್ಲಿ ತಡೆಯಿಲ್ಲದ ಪಾದಚಾರಿ ಮಾರ್ಗಗಳು (Footpaths), ಹೊಸ ಕರ್ಬ್‌ಗಳು, ಮೇಲ್ದರ್ಜೆಗೇರಿಸಿದ ಅಪ್ರಾನ್ ಕರ್ಬ್‌ಗಳು, ಸುಧಾರಿತ ಮಳೆನೀರು ಚರಂಡಿಗಳು ಮತ್ತು ಹೆಚ್ಚುವರಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ.

ಸುಸ್ಥಿರ ಅಭಿವೃದ್ಧಿಗೆ ಸಂಸ್ಥೆಯ ಆದ್ಯತೆ

ಈ ಯೋಜನೆಯ ಕುರಿತು ಮಾತನಾಡಿದ ಪ್ರೆಸ್ಟೀಜ್ ಗ್ರೂಪ್‌ನ ಹೆಡ್ (ESG ಮತ್ತು ಸುಸ್ಥಿರತೆ) ನಿರ್ಭಯ್ ಲುಮ್ಡೆ, ಸುರಕ್ಷಿತ ಮತ್ತು ಸುಲಭವಾಗಿ ಸಂಚರಿಸಬಹುದಾದ ಸಾರ್ವಜನಿಕ ಸ್ಥಳವನ್ನು ನಿರ್ಮಿಸಲು ಈ ಯೋಜನೆಯಲ್ಲಿ ಸುಸ್ಥಿರ ಸಾಮಗ್ರಿಗಳು, ದೃಢವಾದ ಮೂಲಸೌಕರ್ಯ ಮತ್ತು ಪಾದಚಾರಿ ಸ್ನೇಹಿ ವಿನ್ಯಾಸವನ್ನು ಒಗ್ಗೂಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರೆಸ್ಟೀಜ್ ಗ್ರೂಪ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ (ಪ್ರಾಜೆಕ್ಟ್ಸ್ ಮತ್ತು ಪ್ಲಾನಿಂಗ್) ವಿ. ಗೋಪಾಲ್ ಮಾತನಾಡಿ, ಕೇವಲ ವಸತಿ ಮತ್ತು ವಾಣಿಜ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು ಮಾತ್ರವಲ್ಲದೆ, ನಗರದ ಸಾರ್ವಜನಿಕ ಮೂಲಸೌಕರ್ಯಕ್ಕೂ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ ಎಂದು ಸಂಸ್ಥೆ ನಂಬಿದೆ ಎಂದಿದ್ದಾರೆ.

ನಗರದ ಮೂಲಸೌಕರ್ಯಕ್ಕೆ ಪ್ರೆಸ್ಟೀಜ್ ಸಮೂಹದ ಕೊಡುಗೆ

ಪ್ರೆಸ್ಟೀಜ್ ಸಮೂಹವು ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಹಲವು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬೆಳ್ಳಂದೂರು ಕೆರೆ ಬಳಿ ಇರುವ ತನ್ನ ತಂತ್ರಜ್ಞಾನ ಉದ್ಯಾನವನಗಳಿಗೆ (Tech Parks) ಸಂಚಾರ ಸುಗಮಗೊಳಿಸಲು ಇತ್ತೀಚೆಗಷ್ಟೇ 1.5 ಕಿ.ಮೀ ಉದ್ದದ ಫ್ಲೈಓವರ್ ನಿರ್ಮಾಣವನ್ನು ಪೂರ್ಣಗೊಳಿಸಿತ್ತು. ಅಲ್ಲದೆ, ಇದರ ಅಂಗಸಂಸ್ಥೆಯಾದ ಪ್ರೆಸ್ಟೀಜ್ ಬೀಟಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ 90 ಕೋಟಿ ರೂಪಾಯಿ ಕೊಡುಗೆ ನೀಡಿತ್ತು.

ಇದರ ಜೊತೆಗೆ, ವಿಮಾನ ನಿಲ್ದಾಣ ಮೆಟ್ರೋ ಕಾರಿಡಾರ್‌ನಲ್ಲಿ (Airport Metro Corridor) ಮೆಟ್ರೋ ನಿಲ್ದಾಣವೊಂದರ ಅಭಿವೃದ್ಧಿಗಾಗಿ ಸುಮಾರು 65 ಕೋಟಿ ರೂಪಾಯಿ ಕೊಡುಗೆ ನೀಡುವ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರೆಸ್ಟೀಜ್ ಗ್ರೂಪ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.