ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗಾಗಿ ರಾಮ್ಕಿ ಗ್ರೂಪ್ಗೆ ನೀಡಲಾಗಿದ್ದ 36,000 ಕೋಟಿ ರೂ.ಗಳ ಬೃಹತ್ ಟೆಂಡರ್ ರದ್ದಾಗುವ ಸಾಧ್ಯತೆಯಿದೆ. ಟೆಂಡರ್ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ತನಿಖಾ ಸಮಿತಿ ವರದಿ ನೀಡಿದ್ದರೂ, ಭವಿಷ್ಯದ ಮುಜುಗರ ತಪ್ಪಿಸಲು ಸರ್ಕಾರ ಮರು ಟೆಂಡರ್ ಕರೆಯಲು ಚಿಂತಿಸುತ್ತಿದೆ.
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗಾಗಿ ಹೈದರಾಬಾದ್ ಮೂಲದ ರಾಮ್ಕಿ (Ramky) ಗ್ರೂಪ್ಗೆ ಹಂಚಿಕೆಯಾಗಿದ್ದ ಬೃಹತ್ ಟೆಂಡರ್ ರದ್ದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ . ಬಿಎಸ್ಡಬ್ಲ್ಯೂಎಂಎಲ್ (BSWML) ಕರೆದಿದ್ದ ಈ ಟೆಂಡರ್, ನಗರದ ಮನೆ ಮನೆಗಳಿಂದ ಕಸ ಸಂಗ್ರಹಣೆ, ನಿರ್ವಹಣೆ ಹಾಗೂ ವಿದ್ಯುತ್ ಉತ್ಪಾದನೆ ಸೇರಿದಂತೆ ಮುಂದಿನ 30 ವರ್ಷಗಳ ಅವಧಿಗೆ ಸುಮಾರು 36,000 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿತವಾಗಿತ್ತು.
10,000 ಕೋಟಿ ರೂಪಾಯಿ ಅವ್ಯವಹಾರದ ಆರೋಪ
ಈ ಪ್ರಕ್ರಿಯೆಯಲ್ಲಿ ಸುಮಾರು 10,000 ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದರು.
ತನಿಖಾ ಸಮಿತಿಯಿಂದ ವರದಿ
ಈ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರವು ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿತ್ತು. ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಈ ಸಮಿತಿಯು ಟೆಂಡರ್ನಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಅವ್ಯವಹಾರ ನಡೆದಿಲ್ಲವೆಂದು ವರದಿ ನೀಡಿದೆ.
ಶೀಘ್ರದಲ್ಲೇ ಮರು ಟೆಂಡರ್ ಸಾಧ್ಯತೆ
ಆದಾಗ್ಯೂ, ಭವಿಷ್ಯದಲ್ಲಿ ಸರ್ಕಾರಕ್ಕೆ ಯಾವುದೇ ಮುಜುಗರ, ಕೆಟ್ಟ ಹೆಸರು ಅಥವಾ ಡ್ಯಾಮೇಜ್ ಉಂಟಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ, ಈ ಬೃಹತ್ ಟೆಂಡರ್ ಅನ್ನು ರದ್ದುಗೊಳಿಸಿ ಶೀಘ್ರದಲ್ಲೇ ಮರು ಟೆಂಡರ್ (Re-tender) ಕರೆಯಲು ಜಿಬಿಎ ಚಿಂತನೆ ನಡೆಸುತ್ತಿದೆ.


