ಭಾರತದ ಮೊದಲ ಸ್ವದೇಶಿ ಬುಲೆಟ್ ರೈಲು (ಬಿ-28) ಬೆಂಗಳೂರಿನ ಬಿಇಎಂಎಲ್‌ನಲ್ಲಿ ನಿರ್ಮಾಣವಾಗುತ್ತಿದೆ. ಗಂಟೆಗೆ 350 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾದ ಈ ರೈಲಿನ ಉತ್ಪಾದನಾ ಕಾರ್ಯವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲಿಸಿದರು. ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಈ ರೈಲು ಸಂಚರಿಸಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತದ ಮೊದಲ ಸ್ವದೇಶಿ ಬುಲೆಟ್ ರೈಲು ಬೆಂಗಳೂರಿನಲ್ಲಿ ರೂಪುಗೊಳ್ಳುತ್ತಿದೆ. ನಗರದಲ್ಲಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನ (ಬಿಇಎಂಎಲ್) ಕಾರ್ಯಾಗಾರದಲ್ಲಿ ಚೆನ್ನೈನ ಐಸಿಎಫ್ (ರೈಲು ಕೋಚ್ ಫ್ಯಾಕ್ಟರಿ) ಸಹಯೋಗದಡಿ ಇದರ ನಿರ್ಮಾಣ ನಡೆದಿದ್ದು, ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಬೆಂಗಳೂರಿನ ಬಿಇಎಂಎಲ್‌ನ ‘ಆದಿತ್ಯ’ ಉತ್ಪಾದನಾ ಘಟಕದಲ್ಲಿ ‘ಬಿ-28’ ಹೆಸರಿನ ಬುಲೆಟ್ ರೈಲು ಉತ್ಪಾದನಾ ಕಾರ್ಯ ಪರಿಶೀಲಿಸಿದರು. ದೇಶದ ಮೊದಲ ಬುಲೆಟ್ ರೈಲು ಜಪಾನ್‌ನಿಂದ ಸನ್ನದ್ಧ ಸ್ಥಿತಿಯಲ್ಲಿ ಆಗಮಿಸಲಿದೆ.
ಬಿ-28 ಅನ್ನು ಗಂಟೆಗೆ 350 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಓಡುವ ವೇಳೆ ಈ ರೈಲು ಗಂಟೆಗೆ 320 ಕಿ.ಮೀ ಕಾರ್ಯಾಚರಣೆಯ ವೇಗವನ್ನು ಹೊಂದಿರುತ್ತದೆ. ಇದು ಗಂಟೆಗೆ 180 ಕಿ.ಮೀ ವಿನ್ಯಾಸ ವೇಗವನ್ನು ಹೊಂದಿರುವ ವಂದೇ ಭಾರತ್ ರೈಲುಗಳಿಗಿಂತ ಹೆಚ್ಚು.
ಮುಂಬೈ-ಅಹಮದಾಬಾದ್ ನಡುವೆ ಮೊದಲ ಬುಲೆಟ್ ರೈಲು ಮಾರ್ಗ ನಿರ್ಮಾಣ ಆಗುತ್ತಿದ್ದು, ಅಲ್ಲಿ ಮೊದಲು ಜಪಾನ್ ನಿರ್ಮಿತ ಬುಲೆಟ್ ರೈಲು ಓಡಲಿದೆ. ನಂತರ ಬೆಂಗಳೂರಲ್ಲಿ ಉತ್ಪಾದನೆ ಆಗುವ ರೈಲು ಸಂಚಾರ ಮಾಡಲಿದೆ.
ಸಚಿವರಿಂದ ಪರಿಶೀಲನೆ:
ಭೇಟಿ ವೇಳೆ ವೈಷ್ಣವ್ ಅವರು ರೈಲಿನ ಬೋಗಿ ನಿರ್ಮಾಣಕ್ಕಾಗಿ ಬಳಸಲಾಗುವ ಎಂಜಿನಿಯರಿಂಗ್ ತಂತ್ರಜ್ಞಾನ ಹೊಂದಿರುವ ಜಿಗ್‌ಗಳು ಮತ್ತು ಫಿಕ್ಸ್ಚರ್‌ಗಳು ಸೇರಿದಂತೆ ವಿಶೇಷ ಉತ್ಪಾದನಾ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಅಲ್ಲದೆ, ಅಂಡರ್‌ಫ್ರೇಮ್, ಸೈಡ್‌ವಾಲ್, ಮೇಲ್ಛಾವಣಿ ಜೋಡಣೆ, ಬೋಗಿ ಜೋಡಣೆ, ಮೇಲ್ಮೈ ಸಿದ್ಧತೆ ಹಾಗೂ ಸಂಸ್ಕರಣೆಯಂತಹ ಉತ್ಪಾದನೆಯ ಹಂತಗಳನ್ನು ವೀಕ್ಷಿಸಿದರು.
ಇದಲ್ಲದೆ, ಅವರು ಇದು ಗುಣಮಟ್ಟದ ಭರವಸೆಗೆ ಸಂಬಂಧಿಸಿದ ಪ್ರಮುಖ ಪರೀಕ್ಷೆಯಾಗಿರುವ ‘ಸ್ಕ್ವೀಜ್ ಟೆಸ್ಟ್’ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಪ್ರಯಾಣಿಕರ ಆಸನಗಳನ್ನು ಪರಿಶೀಲಿಸಿ, ಅತಿ ವೇಗದ ಪ್ರಯಾಣದ ಸಂದರ್ಭದಲ್ಲಿ ಅವು ಒದಗಿಸುವ ಆರಾಮ ಮತ್ತು ಅನುಕೂಲತೆಗಳ ಬಗ್ಗೆ ಮಾಹಿತಿ ಪಡೆದರು. ಜೊತೆಗೆ, ತಾಪನ, ಗಾಳಿಯ ಸಂಚಾರ ಮತ್ತು ಹವಾನಿಯಂತ್ರಣ ವ್ಯವಸ್ಥೆ ಕಪ್ಲರ್‌ಗಳು ಹಾಗೂ ರೈಲಿನ ಇತರ ಉಪಕರಣಗಳು ಮತ್ತು ಬಿಡಿಭಾಗಗಳು ಸೇರಿದಂತೆ ಪ್ರಮುಖ ಆನ್‌ಬೋರ್ಡ್ ವ್ಯವಸ್ಥೆಗಳನ್ನು ಪರಿಶೀಲಿಸಿದರು.






