ಕೆ.ಆರ್‌.ಪೇಟೆ(ಅ.29): ಕಬ್ಬಿನ ಗದ್ದೆಯೊಂದರಲ್ಲಿ ಅನುಮಾನಾಸ್ಪದವಾಗಿ, ರಹಸ್ಯವಾಗಿ ಸಭೆ, ಪರೇಡ್‌ಗಳನ್ನು ನಡೆಸುತ್ತಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಸಂಘಟನೆಯ 16 ಸದಸ್ಯರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನಿಂದ ವರದಿಯಾಗಿದೆ.

ತಾಲೂಕಿನ ಆಲಂಬಾಡಿಕಾವಲು ಗ್ರಾಮದ ಬಳಿ ಭಾನುವಾರದಂದು ಪಿಎಫ್‌ಐ ಸಂಘಟನೆ ಕಾರ್ಯಕರ್ತರೆನ್ನಲಾದ ಹುಣಸೂರಿನ ರೌಡಿಶೀಟರ್‌ ಮುಬಾರಕ್‌ ಷರೀಫ್‌ ಎಂಬಾತ ಗ್ರಾಮದ ಮಹಿಳೆಯೊಬ್ಬರಿಗೆ ಸೇರಿದ ಕಬ್ಬಿನ ಗದ್ದೆಯೊಳಗೆ ಅನುಮಾನಾಸ್ಪದವಾಗಿ ಗೌಪ್ಯವಾಗಿ ಸಭೆ, ಪರೇಡ್‌ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಪರೇಡ್‌ ನಡೆಸಲು ಪೊಲೀಸರಿಂದ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದಾಳಿ ವೇಳೆ ರೌಡಿ ಶೀಟರ್‌ ಮುಬಾರಕ್‌ ಷರೀಷ್‌ ಸೇರಿದಂತೆ ಕೆ.ಆರ್‌.ಪೇಟೆ ಪಟ್ಟಣದ ನಿವಾಸಿಗಳಾದ 30 ವರ್ಷದೊಳಗಿನ 15 ಯುವಕರನ್ನು ಬಂಧಿಸಲಾಗಿದೆ. ನಂತರ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ, ಪೂರ್ವಾನುಮತಿ ಪಡೆಯದೆ ಗುಪ್ತ ಸಭೆ ನಡೆಸಿರುವುದು ಕ್ರಿಮಿನಲ್ ಅಪರಾಧವಾಗಿರುವ ಕಾರಣ ಐಪಿಸಿ ಸೆಕ್ಷನ್‌ 117(10ಕ್ಕಿಂತ ಹೆಚ್ಚು ಮಂದಿ ಗುಂಪು ಸೇರಿ ಅಕ್ರಮ ಚಟುವಟಿಕೆ)ಮತ್ತು 153(ಗಲಭೆಗೆ ಉತ್ತೇಜನ) ರ ಅಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಈ ಘಟನೆಯನ್ನು ಹಿಂದೂಪರ ಸಂಘಟನೆಗಳು ತೀವ್ರ ಖಂಡಿಸಿದ್ದು 31ರಂದು ಕೆ.ಆರ್‌.ಪೇಟೆ ಬಂದ್‌ ಆಚರಿಸಲು ತೀರ್ಮಾನಿಸಿವೆ. ಇದೇ ವೇಳೆ ಪಿಎಫ್‌ಐ ಸ್ಥಾಪಕ ದಿನ​ದಂದು ನಡೆ​ಯುವ ಪಾಪ್ಯು​ರಲ್‌ ಫ್ರಂಟ್‌ ಯುನಿಟ್‌ ಪೆರೇಡ್‌ ಅಂಗ​ವಾಗಿ ಅಭ್ಯಾಸದಲ್ಲಿ ತೊಡ​ಗಿದ್ದ ಕಾರ‍್ಯ​ಕರ್ತರನ್ನು ಕೆ.ಆರ್‌.ಪೇಟೆಯಲ್ಲಿ ಪೊಲೀ​ಸರು ಬಂಧಿ​ಸಿದ್ದಾರೆ ಎಂದು ಆರೋಪಿಸಿ ಪಿಎಫ್‌ಐ ಕಾರ‍್ಯ​ಕರ್ತರು ಮಂಡ್ಯದಲ್ಲಿ ಸೋಮವಾರ ಪ್ರತಿ​ಭ​ಟನೆ ನಡೆ​ಸಿ​ದ್ದಾರೆ.