ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಸಾಮಾನ್ಯ ದಿನಕ್ಕಿಂತ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದ್ದು, ಪೊಲೀಸರು ಈ ವಲಯದ ಐಟಿ ಕಂಪನಿಗಳಿಗೆ ರಾತ್ರಿ 8 ಗಂಟೆಯ ಬಳಿಕ ಕಚೇರಿ ತೊರೆಯುವಂತೆ ಮನವಿ ಮಾಡಿದೆ.
ಬೆಂಗಳೂರು (ಸೆ.27): ಟೆಕ್ ಕಂಪನಿಗಳ ಫೇವರಿಟ್ ರಸ್ತೆಯಾಗಿರುವ ಹೊರವರ್ತುಲ ರಸ್ತೆ ಅಂದರೆ ಔಟರ್ ರಿಂಗ್ ರೋಡ್‌ನಲ್ಲಿ ಬುಧವಾರ ಸಂಜೆ ಭಾರೀ ಪ್ರಮಾಣದ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೂರ್ವ ವಿಭಾಗದ ಸಂಚಾರ ಉಪ ಪೊಲೀಸ್ ಆಯುಕ್ತ, ಕುಲದೀಪ್ ಕುಮಾರ್ ಜೈನ್, 'ಮಾರತಹಳ್ಳಿಯಿಂದ ಸರ್ಜಾಪುರದವರೆಗೆ ಒಆರ್‌ಆರ್‌ನಲ್ಲಿ ಭಾರಿ ಸಂಚಾರ ದಟ್ಟಣೆ. ಓಆರ್‌ಆರ್‌ನ್ಲಿ ನಲ್ಲಿ ITBT ಕಂಪನಿಗಳ ಉದ್ಯೋಗಿಗಳು ತಕ್ಷಣವೇ ಮನೆಗೆ ಹೊರಡಿ ಎಂದು ಸೂಚಿಸಬೇಡಿ, ಭಾರಿ ಪ್ರಮಾಣದ ವಾಹನಗಳು ರಸ್ತೆಯಲ್ಲಿರುವ ಕಾರಣ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಉಂಟಾಗಿದೆ' ಎಂದು ಬರೆದಿದ್ದಾರೆ. ಮುಂಬರುವ ರಜಾದಿನಗಳಿಂದಾಗಿ ಟ್ರಾಫಿಕ್ ಪ್ರಮಾಣದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ ಎಂದು ಎಚ್‌ಎಎಲ್ ವಿಮಾನ ನಿಲ್ದಾಣದ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಏತನ್ಮಧ್ಯೆ, ಔಟರ್ ರಿಂಗ್ ರೋಡ್ ಕಂಪನಿಗಳ ಸಂಘವು ಓಆರ್‌ಆರ್‌ನಲ್ಲಿನ ದೊಡ್ಡ ಟ್ರಾಫಿಕ್ ಜಾಮ್‌ನ ಕಾರಣದಿಂದಾಗಿ ಕಂಪನಿಗಳಿಗೆ ಕೆಲಸ ಮುಕ್ತಾಯದ ಸಮಯವನ್ನು ವಿಸ್ತರಿಸುವಂತೆ ಮನವಿ ಮಾಡಿದೆ. ಅದಲ್ಲದೆ, ಸಾಕಷ್ಟು ಮಂದಿ ಟ್ರಾಫಿಕ್ ಜಾಮ್‌ನ ಬಗ್ಗೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಚಿಕೊಂಡಿದ್ದಾರೆ.
ಜನರು ಕೂಡ ಟ್ರಾಫಿಕ್ ಜಾಮ್‌ನ ಕಷ್ಟಗಳನ್ನು ವಿವರಿಸಿ ಪೋಸ್ಟ್ ಮಾಡುತ್ತಿದ್ದಾರೆ. 'ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಬಹಳ ಕೆಟ್ಟದಾಗುತ್ತಿದೆ. ವಾರದಲ್ಲಿ ಇಂದು 3ನೇ ದಿನವಾದರೂ ಬರೀ 12 ಕಿಲೋಮೀಟರ್ ಪ್ರಯಾಣಕ್ಕೆ ಈಗಾಗಲೇ 2 ಗಂಟೆಯಾಗಿದೆ. ಪ್ರತಿದಿನದ ಈ ಸಂಕಷ್ಟದಿಂದ ನಮ್ಮನ್ನು ಯಾರಾದರೂ ಕಾಪಾಡಿ' ಎಂದು ಬ್ರಿಜೇಶ್ ರಮಣಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಸಂಪೂರ್ಣ ರಿಂಗ್‌ರೋಡ್‌ನಲ್ಲಿ ಇಂದು ಸಂಜೆ ಕೂಡ ಭಾರೀ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಗಿದೆ. ಬುಧವಾರ ಬೆಳಗ್ಗೆ ಕೂಡ ಜನರು ತಮ್ಮ ಕಚೇರಿಗೆ ತಲುಪಲು 2-3 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಪ್ರಯಾಣಿಸಿದ್ದಾರೆ. ನೀವೇನಾದರೂ ಔಟರ್ ರಿಂಗ್ ರೋಡ್‌ನ ಕಡೆಯಿಂದ ಪ್ರಯಾಣ ಮಾಡುವವರಾಗಿದ್ದಲ್ಲಿ, ರಾತ್ರಿ 8 ಗಂಟೆಯ ಬಳಿಕ ಕಚೇರಿಯಿಂದ ಹೊರಡಿ ಎಂದು ಮಹದೇವಪುರ ಟಾಸ್ಕ್ ಫೋರ್ಸ್‌ನಲ್ಲಿ ಟ್ರಾಫಿಕ್ ಚಿತ್ರದೊಂದಿಗೆ ಪೋಸ್ಟ್ ಮಾಡಲಾಗಿದೆ.
Bengaluru Traffic ಅವ್ಯವಸ್ಥೆಗೆ ವರ್ಷಕ್ಕೆ 20,000 ಕೋಟಿ ನಷ್ಟ: ಬಯಲಾಯ್ತು ಶಾಕಿಂಗ್ ಅಧ್ಯಯನ
ಇನ್ನು ಔಟರ್ ರಿಂಗ್ ರೋಡ್ ಕಂಪನಿಗಳ ಅಸೋಸಿಯೇಷನ್ ತನ್ನ ಟ್ವಿಟರ್ ಪುಟದಲ್ಲಿ ಮಾಹಿತಿ ನೀಡಿದ್ದು, ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿ ಕೆಲಸ ಸಮಯವನ್ನು ಇನ್ನಷ್ಟು ವಿಸ್ತರಣೆ ಮಾಡುವಂತೆ ಕೇಳಿಕೊಳ್ಳಿ. ಇಡೀ ಔಟರ್ ರಿಂಗ್‌ರೋಡ್‌ನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇವೆ ಎಂದು ಪೋಸ್ಟ್ ಮಾಡಿದೆ.
