ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದ ಆರ್‌ವಿ ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ 'ಹನಿಕಾಂಬ್' ಎಂಬ ಗಂಭೀರ ರಚನಾತ್ಮಕ ದೋಷ ಪತ್ತೆಯಾಗಿದೆ. ಈ ಕಾರಣದಿಂದ ರೈಲುಗಳ ವೇಗವನ್ನು ಕಡಿಮೆ ಮಾಡಲಾಗಿದೆ.

ಬೆಂಗಳೂರು (ಜೂ.3): ರಾಜಧಾನಿಯ ನಮ್ಮ ಮೆಟ್ರೋ ಹಸಿರು ಮಾರ್ಗದ (Green Line) ಆರ್‌ವಿ ರಸ್ತೆ ಮತ್ತು ಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಕಾಂಕ್ರೀಟ್ ರಚನೆಯಲ್ಲಿ ‘ಹನಿಕಾಂಬ್’ (Honeycombing - ಜೇನುಗೂಡಿನಂತಹ ರಂಧ್ರಗಳು) ಎಂಬ ಗಂಭೀರ ರಚನಾತ್ಮಕ ದೋಷ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. 2017ರ ಜೂನ್‌ನಿಂದಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಮಾರ್ಗದಲ್ಲಿ ಹಠಾತ್ ಆಗಿ ರೈಲುಗಳ ವೇಗ ಕಡಿಮೆ ಮಾಡಿರುವುದು ನಿತ್ಯ ಪ್ರಯಾಣಿಕರಲ್ಲಿ ಭಾರಿ ಗೊಂದಲ ಮೂಡಿಸಿತ್ತು. ಆಂತರಿಕ ಮೂಲಗಳ ಮಾಹಿತಿಯಿಂದ ಮೆಟ್ರೋ ನಿಧಾನಗತಿಯಲ್ಲಿ ಚಲಿಸುತ್ತಿರುವುದರ ಹಿಂದಿನ ಅಸಲಿ ತಾಂತ್ರಿಕ ಕಾರಣ ಬಹಿರಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2026ರ ಫೆಬ್ರವರಿ 10ರಿಂದಲೇ ಆರ್‌ವಿ ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ ಎರಡು ದಿಕ್ಕಿನಲ್ಲೂ ಮೆಟ್ರೋ ರೈಲುಗಳು ಅತ್ಯಂತ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದು, ಇದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಸುಮಾರು ಒಂದು ತಿಂಗಳ ಬಳಿಕ, ಅಂದರೆ 2026 ಮಾರ್ಚ್ 6ರಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿತ್ತು. "ಹಸಿರು ಮಾರ್ಗದ ಆರ್‌ವಿ ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವಿನ ಸಣ್ಣ ವಿಸ್ತಾರದಲ್ಲಿ ರೈಲು ಕಾರ್ಯಾಚರಣೆಯ ಮೇಲೆ ತಾತ್ಕಾಲಿಕ ವೇಗ ನಿರ್ಬಂಧವನ್ನು ಹೇರಲಾಗಿದೆ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಬಯಸುತ್ತೇವೆ" ಎಂದು ಬಿಎಂಆರ್‌ಸಿಎಲ್ ಹೇಳಿಕೆ ನೀಡಿತ್ತು.

"ಮೆಟ್ರೋ ಕಾರಿಡಾರ್‌ನ ದೀರ್ಘಕಾಲೀನ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಈ ಭಾಗದಲ್ಲಿರುವ ಸಪೋರ್ಟ್ ಬೇರಿಂಗ್‌ಗಳನ್ನು (Support Bearings) ಬದಲಾಯಿಸಲಾಗುತ್ತಿದೆ. ನಿಯಮಿತ ಮುನ್ನೆಚ್ಚರಿಕೆ ನಿರ್ವಹಣಾ ಕಾರ್ಯದ ಭಾಗವಾಗಿ ಈ ವೇಗ ನಿರ್ಬಂಧವನ್ನು ವಿಧಿಸಲಾಗಿದೆ" ಎಂದು ಬಿಎಂಆರ್‌ಸಿಎಲ್ ಸಮರ್ಥಿಸಿಕೊಂಡಿತ್ತು. ಆದರೆ, ಸಮಸ್ಯೆ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ಎನ್ನಲಾಗಿದೆ.

ಏನಿದು 'ಹನಿಕಾಂಬ್' ದೋಷ?

ಮೂಲಗಳ ಪ್ರಕಾರ, ಕಾಂಕ್ರೀಟ್ ಪಿಲ್ಲರ್ ಅಥವಾ ಬೀಮ್‌ಗಳ ನಿರ್ಮಾಣದ ಸಮಯದಲ್ಲಿ ಕಾಂಕ್ರೀಟ್ ಅನ್ನು ಸರಿಯಾಗಿ ಸಂಕುಚಿತಗೊಳಿಸದಿದ್ದಾಗ (Incomplete Compaction) ಅಥವಾ ಸಮರ್ಪಕವಾಗಿ ತುಂಬದಿದ್ದಾಗ ಒಳಭಾಗದಲ್ಲಿ ಸಣ್ಣ ರಂಧ್ರಗಳು ಅಥವಾ ಟೊಳ್ಳಾದ ಜಾಗಗಳು (Cavities/Hollow Pockets) ಸೃಷ್ಟಿಯಾಗುತ್ತವೆ. ಇದನ್ನು ತಾಂತ್ರಿಕ ಭಾಷೆಯಲ್ಲಿ 'ಹನಿಕಾಂಬ್' (ಜೇನುಗೂಡು ರಚನೆ) ಎನ್ನಲಾಗುತ್ತದೆ. 'ಇಂತಹ ಸೂಕ್ಷ್ಮ ಹಾಗೂ ತಾಂತ್ರಿಕ ಕೆಲಸಗಳನ್ನು ನಿರ್ವಹಿಸಲು ಕೆಲವು ವಿಶೇಷ ಗುತ್ತಿಗೆದಾರರ ಅಗತ್ಯವಿರುತ್ತದೆ ಮತ್ತು ಈ ಭಾಗದಲ್ಲಿ ಬೇರಿಂಗ್‌ಗಳನ್ನು ಬದಲಾಯಿಸಬೇಕಾಗಿದೆ' ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಮೆಟ್ರೋಗೆ ಈ ದೋಷ ಹೊಸದೇನಲ್ಲ: 2018ರ ಘಟನೆ ನೆನಪು

ಬೆಂಗಳೂರು ಮೆಟ್ರೋ ವ್ಯವಸ್ಥೆಗೆ ಈ ಹನಿಕಾಂಬ್ ದೋಷ ಹೊಸದೇನಲ್ಲ. ಈ ಹಿಂದೆ 2018 ರಲ್ಲಿ ಪರ್ಪಲ್ ಲೈನ್‌ನ (ನೇರಳೆ ಮಾರ್ಗ) ಟ್ರಿನಿಟಿ ಸರ್ಕಲ್ ಬಳಿಯ ಕಾಂಕ್ರೀಟ್ ಬೀಮ್‌ನಲ್ಲಿ ಇಂತಹುದೇ ದೋಷ ಪತ್ತೆಯಾಗಿತ್ತು. ಆಗ ಮುನ್ನೆಚ್ಚರಿಕಾ ಕ್ರಮವಾಗಿ ಎಂಜಿ ರಸ್ತೆ ಮತ್ತು ಟ್ರಿನಿಟಿ ನಿಲ್ದಾಣಗಳ ನಡುವಿನ 260 ಮೀಟರ್ ವ್ಯಾಪ್ತಿಯಲ್ಲಿ ರೈಲುಗಳ ವೇಗವನ್ನು ಕೇವಲ 10 ಕಿಲೋಮೀಟರ್‌ಗೆ ಸೀಮಿತಗೊಳಿಸಲಾಗಿತ್ತು.

ಬಳಿಕ ಟ್ರಿನಿಟಿ ನಿಲ್ದಾಣದ ಬಳಿಯ ಪಿಲ್ಲರ್ ಸಂಖ್ಯೆ 155 ರಲ್ಲಿದ್ದ ಈ ಹನಿಕಾಂಬ್ ಸಮಸ್ಯೆಯನ್ನು ಸಂಪೂರ್ಣವಾಗಿ ಸರಿಪಡಿಸಲಾಯಿತು. ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರ ಸಲಹೆಯ ಮೇರೆಗೆ ಬಿಎಂಆರ್‌ಸಿಎಲ್ ‘ಎಪಾಕ್ಸಿ ಗ್ರೌಟ್ ಇಂಜೆಕ್ಷನ್’ (Epoxy Grout Injection) ತಂತ್ರಜ್ಞಾನದ ಮೂಲಕ ಆ ರಂಧ್ರಗಳನ್ನು ಮುಚ್ಚಿ, ರಚನೆಯನ್ನು ಬಲಪಡಿಸಿತ್ತು. ನಂತರ ಐಐಎಸ್‌ಸಿ ತಜ್ಞರು ಸುರಕ್ಷತಾ ಪ್ರಮಾಣಪತ್ರ ನೀಡಿದ ಬಳಿಕ, 2019 ರ ಫೆಬ್ರವರಿಯಲ್ಲಿ ತಾತ್ಕಾಲಿಕ ಆಧಾರಗಳನ್ನು ತೆರವುಗೊಳಿಸಿ ಎಂದಿನಂತೆ ರೈಲು ಸಂಚಾರ ಪುನರಾರಂಭಿಸಲಾಗಿತ್ತು.

ಪ್ರಯಾಣಿಕರ ಸುರಕ್ಷತೆಯೇ ಮೊದಲ ಆದ್ಯತೆ

ಪ್ರಯಾಣಿಕರ ಸುರಕ್ಷತೆಗೆ ತಾವು ಮೊದಲ ಆದ್ಯತೆ ನೀಡುವುದಾಗಿ ಬಿಎಂಆರ್‌ಸಿಎಲ್ ಪುನರುಚ್ಚರಿಸಿದೆ. "ಬಿಎಂಆರ್‌ಸಿಎಲ್‌ನ ಪ್ರಮಾಣಿತ ಸುರಕ್ಷತಾ ನಿಯಮಾವಳಿಗಳ ಪ್ರಕಾರ, ಯಾವುದೇ ತಾಂತ್ರಿಕ ನಿಯತಾಂಕಗಳ ಹತ್ತಿರದ ವೀಕ್ಷಣೆ ಅಗತ್ಯವಿದ್ದಾಗ, ಗರಿಷ್ಠ ಕಾರ್ಯಾಚರಣೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಗುತ್ತದೆ. ಹಸಿರು ಮಾರ್ಗದಲ್ಲಿ ರೈಲು ಸೇವೆಗಳು ವೇಳಾಪಟ್ಟಿಯಂತೆಯೇ ಮುಂದುವರಿದಿದ್ದರೂ, ಆರ್‌ವಿ ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ ಪ್ರಯಾಣದ ಸಮಯ ಸ್ವಲ್ಪ ಹೆಚ್ಚಾಗಬಹುದು" ಎಂದು ಸಂಸ್ಥೆ ತಿಳಿಸಿದೆ.

ತಾಂತ್ರಿಕ ತಂಡಗಳು ನಿರಂತರವಾಗಿ ಈ ವಿಭಾಗವನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಅಗತ್ಯ ತಪಾಸಣೆ ಮತ್ತು ದೋಷ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅತ್ಯುನ್ನತ ಸುರಕ್ಷತೆ ಮತ್ತು ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವ ಮೂಲಕ ಈ ದುರಸ್ತಿ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ತಿಳಿಸಿದೆ.