ಬೆಂಗಳೂರು  [ನ.15]:  ನಾಗಪುರದಿಂದ ಬೆಂಗಳೂರಿಗೆ 180 ಪ್ರಯಾಣಿಕರೊಂದಿಗೆ ಬರುತ್ತಿದ್ದ ‘ಗೋ ಏರ್‌’ ವಿಮಾನವು, ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮೇಲೆ ಇಳಿಯದೇ ಪಕ್ಕದಲ್ಲೇ ಇದ್ದ ಹುಲ್ಲು ಹಾಸಿನ ಮೇಲೆ ಇಳಿದು ಸುಮಾರು ದೂರ ಸಾಗಿದ ಘಟನೆ ನವೆಂಬರ್‌ 11ರಂದು ನಡೆದಿದೆ. ಸುದೈವವಶಾತ್‌, ತಪ್ಪಿನ ಅರಿವಾಗಿ ವಿಮಾನವನ್ನು ಪೈಲಟ್‌ ಕೂಡಲೇ ಮತ್ತೆ ಮೇಲೇರುವಂತೆ ಮಾಡಿದ್ದು, ಹೈದರಾಬಾದ್‌ನತ್ತ ತಿರುಗಿಸಿ ಅಲ್ಲಿನ ಏರ್‌ಪೋರ್ಟ್‌ನಲ್ಲಿ ಇಳಿಸಿದ್ದಾನೆ. ಎಲ್ಲ 180 ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ.

ಆದರೆ, ವಿಮಾನವನ್ನು ಸೂಕ್ತ ರೀತಿಯಲ್ಲಿ ಭೂಸ್ಪರ್ಶ ಮಾಡಿಸದ ಕಾರಣ ಪೈಲಟ್‌ನನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ವಿಮಾನಯಾನ ನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ.

ಬೆಳಗ್ಗೆ ನಾಗಪುರದಿಂದ ಹೊರಟ ‘ಜಿ8-811’ ವಿಮಾನವು ಕೆಲವು ಗಂಟೆಗಳ ಬಳಿಕ ಬೆಂಗಳೂರಿನಲ್ಲಿ ಇಳಿಯಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಮಂಜು ಮುಸುಕಿದ ಮಬ್ಬು ವಾತಾವರಣ ಇದ್ದ ಕಾರಣ ತಕ್ಷಣ ಲ್ಯಾಂಡ್‌ ಆಗದೇ ಸುಮಾರು ಹೊತ್ತು ಆಗಸದಲ್ಲೇ ಗಿರಕಿ ಹೊಡೆಯಿತು. ಕೊನೆಗೆ ಏರ್‌ ಟ್ರಾಫಿಕ್‌ ಕಂಟ್ರೋಲ್‌ (ಎಟಿಸಿ) ಕೊಠಡಿಯ ಅನುಮತಿ ದೊರಕಿದ ಬಳಿಕ ಲ್ಯಾಂಡ್‌ ಮಾಡಲು ಪೈಲಟ್‌ ಯತ್ನಿಸಿದ್ದಾನೆ. ಆದರೆ ವಿಮಾನ ರನ್‌ವೇ ಮೇಲೆ ಬರದೇ ಪಕ್ಕದಲ್ಲೇ ಇದ್ದ ಹುಲ್ಲಿನ ಮೇಲೆ ಸುಮಾರು ದೂರ ಸಾಗಿದೆ. ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷವೇ ಹೀಗೆ ಲ್ಯಾಂಡ್‌ ಆಗಲು ಕಾರಣ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಗ ಪೈಲಟ್‌ಗೆ ತಪ್ಪಿನ ಅರಿವಾಗಿದೆ. ಆದಾಗ್ಯೂ ಆತ ಧೈರ್ಯ ತೋರಿಸಿ ವಿಮಾನ ಎಂಜಿನ್‌ ವೇಗವನ್ನು ಹೆಚ್ಚಿಸಿದ್ದಾನೆ. ಸುದೈವವಶಾತ್‌ ವಿಮಾನವು ಹುಲ್ಲು ಹಾಸಿನಿಂದಲೇ ಮೇಲೇರಿದೆ. ಮೇಲೇರಿದ ವಿಮಾನವನ್ನು ಹೈದರಾಬಾದ್‌ಗೆ ತಿರುಗಿಸುವಂತೆ ಪೈಲಟ್‌ಗೆ ಸೂಚಿಸಲಾಗಿದ್ದು, ಆತ ಅದನ್ನು ಹೈದರಾಬಾದ್‌ನಲ್ಲಿ ಸುರಕ್ಷಿತ ಭೂಸ್ಪರ್ಶ ಮಾಡಿದ್ದಾನೆ. ಆಗ ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಎಲ್ಲ 180 ಪ್ರಯಾಣಿಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಹೈದರಾಬಾದ್‌ಗೆ ಬಂದಿಳಿದ ನಂತರ ವಿಮಾನವನ್ನು ಪರಿಶೀಲಿಸಲಾಗಿದ್ದು, ಲ್ಯಾಂಡಿಂಗ್‌ ಗಿಯರ್‌ನಲ್ಲಿ ಮಣ್ಣು ಹಾಗೂ ಹುಲ್ಲು ಸಿಕ್ಕಿಹಾಕಿಕೊಂಡಿದ್ದು ಕಂಡುಬಂದಿದೆ. ಇದು ವಿಮಾನವು ರನ್‌ವೇ ಬದಲು ಹುಲ್ಲು ಹಾಸಿನ ಮೇಲೆ ಲ್ಯಾಂಡ್‌ ಆಗಿದ್ದನ್ನು ಸಾಬೀತುಪಡಿಸಿದೆ.

‘ವಿಮಾನದ ಡಿಜಿಟಲ್‌ ಫ್ಲೈಟ್‌ ಡಾಟಾ ರೆಕಾರ್ಡರ್‌ ಯಂತ್ರವನ್ನು ವಶಕ್ಕೆ ತೆಗೆದುಕೊಂಡು, ಯಾವ ತಾಂತ್ರಿಕ ತೊಂದರೆಯಿಂದ ವಿಮಾನ ಹುಲ್ಲಿನ ಮೇಲೆ ಇಳಿಯಿತು ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಮಾನವನ್ನು ಏರ್‌ಬಸ್‌ ಕಂಪನಿ ಉತ್ಪಾದಿಸಿದ್ದು, ‘ಏರ್‌ಬಸ್‌ ಎ320 ನಿಯೋ’ ವಿಮಾನವಾಗಿದೆ. ಇವುಗಳ ಎಂಜಿನ್‌ನಲ್ಲಿ ತಾಂತ್ರಿಕ ದೋಷಗಳು ಕಂಡುಬಂದ ಬಗ್ಗೆ ಈಗಾಗಲೇ ಸಾಕಷ್ಟುಬಾರಿ ದೂರುಗಳು ಕೇಳಿಬಂದಿವೆ.

ಆದದ್ದೇನು?

1. 180 ಪ್ರಯಾಣಿಕರಿದ್ದ ಗೋ ಏರ್‌ ವಿಮಾನ ನಾಗ್ಪುರದಿಂದ ಬೆಂಗಳೂರಿಗೆ ಆಗಮನ

2. ಮಂಜು ಮುಸುಕಿದ್ದರಿಂದಾಗಿ ತಕ್ಷಣ ಇಳಿಸಲಾಗದೆ ವಿಮಾನನಿಲ್ದಾಣ ಸುತ್ತ ಹಾರಾಟ

3. ಲ್ಯಾಂಡಿಂಗ್‌ ವೇಳೆ ರನ್‌ವೇ ಬಿಟ್ಟು ಪಕ್ಕದ ಹುಲ್ಲಿನ ನೆಲದ ಮೇಲೆ ಚಲಿಸಿದ ವಿಮಾನ

4. ತಪ್ಪಿನ ಅರಿವಾಗಿ ವಿಮಾನದ ವೇಗವನ್ನು ಹೆಚ್ಚಿಸಿ ಮತ್ತೆ ಟೇಕಾಫ್‌ ಮಾಡಿದ ಪೈಲಟ್‌

5. ಹೈದರಾಬಾದ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್‌: ನಿಟ್ಟುಸಿರುಬಿಟ್ಟಪ್ರಯಾಣಿಕರು