ಬೆಂಗಳೂರು ಅಭಿವೃದ್ಧಿಗೆ ಸಮಗ್ರ ದೀರ್ಘಕಾಲದ ಮಹಾ ಯೋಜನೆ ರೂಪಿಸಲು ಸಚಿವ ಕೃಷ್ಣಬೈರೇಗೌಡ ಸೂಚಿಸಿದ್ದಾರೆ. ಮೆಟ್ರೋ ನಿಲ್ದಾಣಗಳಿಗೆ ಜಿಪಿಎಸ್ ಆಧಾರಿತ ಫೀಡರ್ ಬಸ್ ಸೌಲಭ್ಯ ಕಲ್ಪಿಸಲು ಮತ್ತು ರಸ್ತೆ ಅಗೆದವರೇ ಅದನ್ನು ದುರಸ್ತಿ ಮಾಡುವ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ.

ಬೆಂಗಳೂರು: ದಿನೇ ದಿನೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಅಭಿವೃದ್ಧಿಗೆ ಸಮಗ್ರ ದೀರ್ಘಕಾಲದ ಮಹಾ ಯೋಜನೆ ರೂಪಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಪಿಎಸ್ ಆಧಾರಿತ ಫೀಡರ್ ಬಸ್ ಸೌಲಭ್ಯ

ಶುಕ್ರವಾರ ನಗರದಲ್ಲಿ ನಡೆದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಲ್ಕನೇ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಲು ಮೆಟ್ರೋ ನಿಲ್ದಾಣಗಳಿಗೆ ‘ಫೀಡರ್ ಬಸ್’ ಸೇವೆ ಅತ್ಯಗತ್ಯ. ಮೆಟ್ರೋ ನಿಲ್ದಾಣಗಳ 2 ರಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿಎಂಟಿಸಿ ವತಿಯಿಂದ ಜಿಪಿಎಸ್ ಆಧಾರಿತ ಫೀಡರ್ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.

ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಶಿಲ್ಪಾ ನಾಗ್, ನಿತಿಶ್, ಜಲಮಂಡಳಿ ಅಧ್ಯಕ್ಷೆ ಮಂಜುಳಾ, ಬಿಎಂಆರ್.ಡಿಎ ಆಯುಕ್ತ ರಾಜೇಂದ್ರ ಚೋಳನ್, ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್, ಜಿ. ಜಗದೀಶ್, ಡಾ.ರಾಜೇಂದ್ರ ಕೆ.ವಿ, ಬಿಎಂಟಿಸಿ ಎಂಡಿ ರಘುನಂದನ್ ಮೂರ್ತಿ, ಬಿಎಸ್.ಡಬ್ಲ್ಯು.ಎಂಎಲ್ ಸಿಇಒ ಕರೀಗೌಡ, ಅಗ್ನಿಶಾಮಕ, ಬೆಸ್ಕಾಂ, ಮೆಟ್ರೋ ಅಧಿಕಾರಿಗಳು ಉಪಸ್ಥಿತರಿದ್ದರು.

ರಸ್ತೆ ಅಗೆದವರೇ ದುರಸ್ಥಿ ಮಾಡಲು ತಾಕೀತು

ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಹಾಗೂ ರಸ್ತೆ ಹಾಳಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ ಸಚಿವರು, ವಿವಿಧ ಇಲಾಖೆಗಳು ರಸ್ತೆ ಅಗೆಯುವುದರಿಂದ ನಾಗರಿಕರು ಅನುಭವಿಸುವ ತೊಂದರೆಗೆ ಪಾಲಿಕೆಗಳು ದೂಷಣೆಗೊಳಗಾಗುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ‘ಯಾವ ಸಂಸ್ಥೆಯು ರಸ್ತೆಯನ್ನು ಅಗೆಯುತ್ತದೆಯೋ, ಅದೇ ಸಂಸ್ಥೆಯೇ ಅದನ್ನು ಸಂಪೂರ್ಣವಾಗಿ ಮುಚ್ಚುವ ಜವಾಬ್ದಾರಿ ಹೊರಬೇಕು’ ಎಂದು ಕೃಷ್ಣಬೈರೇಗೌಡ ಸೂಚಿಸಿದರು.

ಇಂದಿರಾನಗರ ಮಟ್ರೋ ಹಳಿಗೆ ಧುಮುಕಿದ ವ್ಯಕ್ತಿ

ಬೆಂಗಳೂರು: ನಮ್ಮ ಮೆಟ್ರೋದ ಮಾರ್ಗ-1 (ನೇರಳೆ ಮಾರ್ಗ)ದಲ್ಲಿ ಗುರುವಾರ ಬೆಳಗ್ಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಹಳಿಗೆ ಇಳಿದ ಪರಿಣಾಮ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತಲ್ಲದೆ, ರೈಲು 10 ನಿಮಿಷಗಳು ವಿಳಂಬವಾಗಿ ಸಂಚರಿಸಬೇಕಾಯಿತು.

ಬೆಳಗ್ಗೆ ಸುಮಾರು 9.22ರಲ್ಲಿ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಹಳಿಗಳ ಮೇಲೆ ಧುಮುಕಿದರು. ಈ ಘಟನೆಯಿಂದಾಗಿ ತುರ್ತು ಟ್ರಿಪ್ ವ್ಯವಸ್ಥೆ ಮತ್ತು ತುರ್ತು ನಿಲುಗಡೆ ಬಟನ್ ಸಕ್ರಿಯಗೊಂಡವು. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ರಕ್ಷಿಸಿ ಮೇಲೆ ಕರೆತಂದರು. ಈ ಘಟನೆಯಿಂದಾಗಿ ನೇರಳೆ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ಸುಮಾರು 10 ನಿಮಿಷಗಳ ವಿಳಂಬ ಉಂಟಾಯಿತು. ಅಲ್ಲದೆ, ಕೆಂಪೇಗೌಡ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸುವ ಸಲುವಾಗಿ ಹಸಿರು ಮಾರ್ಗದಲ್ಲಿಯೂ ಕೆಲವು ರೈಲುಗಳ ಸಂಚಾರವನ್ನು ನಿಯಂತ್ರಿಸಲಾಯಿತು.

ಆ ವ್ಯಕ್ತಿ ಯಾರು, ಆತನ ಉದ್ದೇಶಗಳ ಕುರಿತು ವಿಚಾರಣೆಗಾಗಿ ಆತನನ್ನು ಇಂದಿರಾನಗರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಬೆಳಗ್ಗೆ 9.40 ರಿಂದ ಎರಡೂ ಮಾರ್ಗಗಳಲ್ಲಿ ರೈಲು ಸಂಚಾರವನ್ನು ಸಹಜ ಸ್ಥಿತಿಗೆ ತರಲಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸಿದೆ. ಇದೇ ತಿಂಗಳು ವೃದ್ದರೊಬ್ಬರು ರೈಲು ಹಳಿಗಳ ಮೇಲೆ ಇಳಿದ ಪರಿಣಾಮ ಸಿಬ್ಬಂದಿ ಅವರನ್ನು ರಕ್ಷಿಸಿದ್ದರು.