Mann Ki Baat: ಬೆಂಗಳೂರಿನ ಯೂಥ್ ಫಾರ್ ಪರಿವರ್ತನ್ ಸಂಸ್ಥೆಗೆ ಮೋದಿ ಭೇಷ್
ಬೆಂಗಳೂರು ನಗರದ 370 ಸ್ಥಳಗಳ ಸೌಂದರ್ಯವೃದ್ಧಿ ಮಾಡಿದೆ ಯೂಥ್ ಫಾರ್ ಪರಿವರ್ತನ್ ಸಂಸ್ಥೆ. ಈ ಬಗ್ಗೆ ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಚ್ಛತೆ ಮತ್ತು ನವೀನ ವಿಧಾನಗಳ ಅಳವಡಿಕೆ ವೇಳೆ ಸ್ಥಳೀಯ ಸಂಘ ಸಂಸ್ಥೆಗಳನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವ ಬಗ್ಗೆ ಮತ್ತೊಮ್ಮೆ ಬಲವಾದ ವಾದ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ವಿಷಯದಲ್ಲಿ ಬೆಂಗಳೂರಿನ ‘ಯೂಥ್ ಫಾರ್ ಪರಿವರ್ತನ್’ (Youth For Parivarthan) ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾನುವಾರ ಮಾಸಿಕ ‘ಮನ್ ಕೀ ಬಾತ್’ (Mann Ki Baat) ರೇಡಿಯೋ ಕಾರ‍್ಯಕ್ರಮದಲ್ಲಿ ಮಾತನಾಡಿದ ಮೋದಿ ‘ನಾನು ಚುನಾಯಿತ ವ್ಯಕ್ತಿಗಳ ಜೊತೆ, ಅದರಲ್ಲೂ ವಿಶೇಷವಾಗಿ ನಗರಗಳ ಮೇಯರ್ ಮತ್ತು ಗ್ರಾಮ ಪಂಚಾಯತ್ ಮುಖ್ಯಸ್ಥರ ಜೊತೆ ಸಂವಾದ ನಡೆಸುವಾಗ, ಸ್ವಚ್ಛತೆ ಮತ್ತು ನವೀನ ವಿಧಾನಗಳ ಅಳವಡಿಕೆಯಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡುತ್ತೇನೆ. ಇದಕ್ಕೆ ಒಂದು ಉದಾಹರಣೆ ನೀಡುತ್ತೇನೆ.
ಬೆಂಗಳೂರಿನಲ್ಲಿ ಯೂಥ್ ಫಾರ್ ಪರಿವರ್ತನ್ ಎಂಬ ತಂಡವೊಂದಿದೆ. ಕಳೆದ 8 ವರ್ಷಗಳಿಂದ ಈ ತಂಡವು ಸ್ವಚ್ಛತೆ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಅವರ ಗುರಿ ಸ್ಪಷ್ಟವಾಗಿದೆ. ‘ದೂರುವುದನ್ನು ಬಿಡಿ, ಕಾರ್ಯಪ್ರವೃತ್ತರಾಗಿ’ ಎಂಬುದು. ಈ ತಂಡ ಇದುವರೆಗೂ ನಗರದಾದ್ಯಂತ 370 ಸ್ಥಳಗಳ ಸೌಂದರ್ಯವೃದ್ಧಿ ಮಾಡಿದೆ’ ಎಂದು ಶ್ಲಾಘಿಸಿದರು. ‘ಈ ತಂಡ ಪ್ರತಿಯೊಂದು ಸ್ಥಳದಲ್ಲೂ 100-150 ಜನರನ್ನು ಒಗ್ಗೂಡಿಸಿಕೊಂಡು, ಪ್ರತಿ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಗೋಡೆಗಳನ್ನು ಸ್ವಚ್ಛಗೊಳಿಸುವ, ಸ್ವಚ್ಛಗೊಳಿಸಿದ ಬಳಿಕ ಅವುಗಳನ್ನು ಸುಂದರ ಕಲಾಕೃತಿಗಳಿಂದ ಶೃಂಗರಿಸುವ ಮತ್ತು ಕಸ ಎತ್ತುವ ಕೆಲಸವನ್ನು ಮಾಡುತ್ತಿವೆ. ಇಂತಹ ತಂಡಗಳು ಎಲ್ಲರಿಗೂ ಸ್ಪೂರ್ತಿಯಾಗಬೇಕು’ ಎಂದು ಮೋದಿ ಹೇಳಿದರು.
ಇದನ್ನು ಓದಿ: Mann Ki Baat: Cheetah ಮರಳಿದ್ದಕ್ಕೆ ದೇಶದ 130 ಕೋಟಿ ಜನ ಖುಷಿಯಾಗಿದ್ದಾರೆ ಎಂದ ಪ್ರಧಾನಿ ಮೋದಿ
ಈ ಬಗ್ಗೆ ಪಿಎಂಒ ಕಚೇರಿ, ಸಿಎಂ ಬೊಮ್ಮಾಯಿ ಸೇರಿ ಹಲವು ಸಚಿವರು, ಸಂಸದರು ಸಹ ಟ್ವೀಟ್ ಮಾಡಿ ಯೂಥ್ ಫಾರ್ ಪರಿವರ್ತನ್ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಯೂಥ್ ಫಾರ್ ಪರಿವರ್ತನ್ ಸಂಸ್ಥೆ ಸಹ ಧನ್ಯವಾದ ತಿಳಿಸಿದೆ.
ಏನಿದು ಯೂಥ್ ಫಾರ್ ಪರಿವರ್ತನ್..?
2014ರಲ್ಲಿ ಆರಂಭವಾದ ಸ್ವಯಂಸೇವಾ ಸಂಸ್ಥೆ. 8000 ಸದಸ್ಯರಲ್ಲಿ 500 ಜನ ಸಕ್ರಿಯರಾಗಿದ್ದಾರೆ. ಬೆಂಗಳೂರಿನಲ್ಲಿ ಕಸ ಹಾಕುವ, ಅನೈರ್ಮಲ್ಯವಿರುವ ಸ್ಥಳ ಗುರುತಿಸಿ ಭಾನುವಾರಗಳಂದು ಪಾಲಿಕೆ ಸಹಯೋಗದೊಂದಿಗೆ ಅವುಗಳನ್ನು ಸ್ವಚ್ಛಗೊಳಿಸಿ ಅಲ್ಲಿನ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸವನ್ನು ಈ ಸಂಸ್ಥೆಯ ಸದಸ್ಯರು ಮಾಡುತ್ತಾರೆ. ಈವರೆಗೆ 370 ಸ್ಥಳಗಳನ್ನು ಸ್ವಚ್ಛಗೊಳಿಸಿದೆ.
ಇದನ್ನೂ ಓದಿ: Mann Ki Baat: ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಮೋದಿ ಶ್ಲಾಘನೆ
ಪ್ರತಿ ತಿಂಗಳ ಕೊನೆಯಂತೆ ನಿನ್ನೆ ಅಂದರೆ ಸೆಪ್ಟೆಂಬರ್ 25, 2022 ರಂದು ಪ್ರಧಾನಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಸಿಸಿ ರೇಡಿಯೊ ಭಾಷಣ ಮಾಡಿದ್ದಾರೆ. ಇದು ಪ್ರಧಾನಿ ಮೋದಿಯವರ 93ನೇ ಮನ್ ಕೀ ಬಾತ್ ಎಪಿಸೋಡ್ ಆಗಿದೆ.