ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ತಿಂಗಳಿಗೆ 30,000 ರೂಪಾಯಿ ಹೈಕ್ ಕೊಟ್ಟ ಕಾರಣ ಬೆಂಗಳೂರಿಗೆ ಶಿಫ್ಟ್ ಆಗಿದ್ದಾನೆ. ಆದರೆ ಸಂಬಂಳ ಹೆಚ್ಚಾದರೂ ಬೆಂಗಳೂರು ಎಲ್ಲಾ ಖುಷಿಯನ್ನೇ ನುಂಗಿ ಹಾಕಿದೆ ಎಂದು ಉದ್ಯೋಗಿ ನೋವು ತೋಡಿಕೊಂಡಿದ್ದಾನೆ. ಇದಕ್ಕೆ ಕಾರಣವನ್ನೂ ನೀಡಿದ್ದಾನೆ.
ಬೆಂಗಳೂರು(ಮಾ.21) ಕೈತುಂಬ ಸಂಬಳ ನೀಡುವ ನಗರ ಎಂದೇ ಬೆಂಗಳೂರು ಗುರುತಿಸಿಕೊಂಡಿದೆ. ಬಹುತೇಕರು ಬೆಂಗಳೂರಿನಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನೂ ಎಲ್ಲರು ದೂರುತ್ತಾರೆ. ಆದರೆ ಇದನ್ನು ಹೊರತುಪಡಿಸಿದರೆ ಬೆಂಗಳೂರನ್ನು ಬಹುತೇಕರು ಇಷ್ಟಪಡುತ್ತಾರೆ. ಆದರೆ ಇತ್ತೀಚೆಗೆ ನೋಯ್ಡಾದಿಂದ ಬಂಗಳೂರಿಗೆ ಸ್ಥಳಾಂತರಗೊಂಡ ಉದ್ಯೋಗಿ ತನ್ನ ನೋವು, ಆಕ್ರೋಶ ಹೊರಹಾಕಿದ್ದಾನೆ. ಒಂದೇ ಬಾರಿಗೆ ತಿಂಗಳ ಸಂಬಳದಲ್ಲಿ 30,000 ರೂಪಾಯಿ ಏರಿಕೆ ಎಂದಾಗ ಖುಷಿಯಿಂದ ಒಪ್ಪಿಕೊಂಡು ಬೆಂಗಳೂರಿಗೆ ಬಂದು ಕೆಟ್ಟಿದ್ದೇನೆ ಎಂದು ಉದ್ಯೋಗಿ ಹೇಳಿಕೊಂಡಿದ್ದಾನೆ. ಉದ್ಯೋಗಿಯ ಅಸಮಾಧಾನ, ನೋವಿಗೆ ಕೆಲ ಕಾರಣಗಳನ್ನು ಪಟ್ಟಿ ಮಾಡಿದ್ದಾನೆ.
ರೆಡ್ಡಿಟ್‌ನಲ್ಲಿ ಫಿನಾನ್ಶಿಯಲ್ ಸೆಟ್ 7284 ಅನ್ನೋ ಪೋಸ್ಟ್ ಅಡಿಯಲ್ಲಿ ಈತ ನೋಯ್ಡಾದಿಂದ ಬೆಂಗಳೂರಿಗೆ ಬಂದು ಖುಷಿ ಇಲ್ಲದಾಗಿದೆ ಎಂದು ಬರೆದುಕೊಂಡಿದ್ದಾನೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದೆ. ನೋಯ್ಡಾದಲ್ಲಿ ಖುಷಿ ಕಂಡಿದ್ದೆ. ನೋಯ್ಡಾ ನಗರ ವಿವಿಧತೆಯಲ್ಲಿ ಏಕತೆಯ ನಗರವಾಗಿದೆ. ನಗರದ ಮೂಲಭೂತ ಸೌಲಭ್ಯ, ರಸ್ತೆ ಸೇರಿದಂತೆ ಎಲ್ಲವೂ ಉತ್ತಮವಾಗಿದೆ. ನಾನು ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯಲ್ಲಿ ಬೇರೆ ಉತ್ತಮ ಕೆಲಸ ಹುಡುಕುತ್ತಿದ್ದೆ. ಸ್ಯಾಲರಿ ಹೆಚ್ಚಳ, ಹೀಗೆ ಒಂದಷ್ಟು ಕಾರಣಗಳು ಸೇರಿತ್ತು ಎಂದು ಈ ಉದ್ಯೋಗಿ ಹೇಳಿಕೊಂಡಿದ್ದಾನೆ.
70, 90 ಗಂಟೆ ಕೆಲಸಕ್ಕೆ ಪರಿಹಾರ ಕೊಟ್ಟ ಬೆಂಗಳೂರಿಗ, ಈತನ ಐಡಿಯಾಗೆ ದಿಗ್ಗಜರೆ ಕಕ್ಕಾಬಿಕ್ಕಿ
ದೆಹಲಿ ರಾಜಧಾನಿ ವ್ಯಾಪ್ತಿಯಲ್ಲಿ ಕೆಲಸ ನೋಡುತ್ತಾ ಸಮಯ ಕಳೆದರು ಅವಕಾಶಗಳು ಕೈ ತಪ್ಪಿಹೋಗಬಹುದು ಎಂದುಕೊಂಡೆ. ಹೀಗಾಗಿ ಉತ್ತಮ ಕೆಲಸ, ವೇತನ ಇದ್ದರೆ ಪ್ರಯತ್ನಿಸೋಣ ಎಂದುಕೊಂಡಿದ್ದೆ. ಹೀಗಿರುವಾಗ ಬೆಂಗಳೂರಿನಿಂದ ಕೆಲಸದ ಆಫರ್ ಬಂದಿತ್ತು.ಆಗ ಇರುವ ಸಂಬಂಳಕ್ಕೆ ಹೋಲಿಸಿದರೆ ಪ್ರತಿ ತಿಂಗಳಲ್ಲಿ 30,000 ರೂಪಾಯಿ ಹೆಚ್ಚುವರಿಯಾಗಿತ್ತು. ಆದರೆ ಬೆಂಗಳೂರಿಗೆ ಬಂದ ಬಳಿಕ ಗೊತ್ತಾಯಿತು 30 ಸಾವಿರ ರೂಪಾಯಿ ಕಾರಣಕ್ಕೆ ಸ್ಥಳಾಂತರ ಮಾಡಿದ್ದು ಉತ್ತಮ ನಿರ್ಧಾರವಲ್ಲ ಅನ್ನೋದು ಎಂದು ಈತ ಹೇಳಿದ್ದಾನೆ. ಇದಕ್ಕೆ ಕಾರಣವನ್ನೂ ನೀಡಿದ್ದಾನೆ.
ಬೆಂಗಳೂರು ನಗರ ಅಚ್ಚುಕಟ್ಟಾಗಿ ಇಲ್ಲ. ಯಾವ ಯೋಜನೆಗಳು, ನಗರದ ಯಾವ ಮೂಲೆ ಕೂಡ ಸರಿಯಾದ ಪ್ಲಾನಿಂಗ್ ಪ್ರಕಾರ ನಡೆದಿಲ್ಲ. ಇಲ್ಲಿನ ಟ್ರಾಫಿಕ್ ಊಹಿಸಲು ಸಾಧ್ಯವಾಗುತ್ತಿಲ್ಲ. ಅತ್ಯಂತ ಕೆಟ್ಟ ರಸ್ತೆಗಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಇದರ ಜೊತೆಗೆ ಉತ್ತರ ಹಾಗೂ ದಕ್ಷಿಣ ಅನ್ನೋ ಚರ್ಚೆ, ಟೀಕೆ ಬೇರೆ. ಇದ್ಯಾವುದು ನೋಯ್ಡಾದಲ್ಲಿ ಇರಲಿಲ್ಲ. ಇದಕ್ಕಿಂತ ಹೆಚ್ಚಿನ ಜನರಿದ್ದ ವಲಯಗಳು ನೋಯ್ಡಾದಲ್ಲಿದೆ. ಆದರೆ ವ್ಯವಸ್ಥೆಗಳು ಚೆನ್ನಾಗಿತ್ತು.ಆದರೆ ಬೆಂಗಳೂರಿಗೆ ಬಂದು ಸಿಲಕಿಕೊಂಡೆ. ಯಾರಾದರೂ ನೋಯ್ಡಾದಿಂದ ಬೆಂಗಳೂರಿಗೆ ಸ್ಥಳಾಂತರವಾಗುವ ಯೋಚನೆಯಲ್ಲಿದ್ದರೆ, ನಿಮ್ಮ ನಿರ್ಧಾರಕ್ಕೆ ಮತ್ತಷ್ಟು ಸಮಯ ಕೊಡಿ. ಹಲವು ಬಾರಿ ಯೋಚಿಸಿ. ಕೇವಲ ವೇತನ ನೋಡಿದರೆ ಸಾಲದು. ನೋಯ್ಡಾ ಟೈರ್ 1 ನಗರದಲ್ಲಿ ಅತ್ಯುತ್ತಮ. ಹೌದು, ವಾಯುಮಾಲಿನ್ಯ ಹೆಚ್ಚಾಗಿದೆ. ಆದರೆ ಸಿಟಿ ಆತ್ಮೀಯವಾಗಿಸಲಿದೆ ಎಂದು ಹೇಳಿಕೊಂಡಿದ್ದಾರೆ.
ಈತನ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ವಿರುದ್ದ ನಾನು ತೆಗೆದುಕೊಂಡಿದ್ದೇನೆ. ಬೆಂಗಳೂರಿನಿಂದ ನೋಯ್ಡಾಗೆ ಸ್ಥಳಾಂತರಗೊಂಡಿದ್ದೇನೆ. ನಾನು ಬೆಂಗಳೂರಿನ ಗೆಳೆಯರ ಬಳಗವನ್ನು ಮಿಸ್ ಮಾಡಿಕೊಳ್ಳುತ್ತೇನೆ. ಇನ್ನುಳಿದಂತೆ ಎಲ್ಲವೂ ನನಗೆ ನೋಯ್ಡಾದಲ್ಲಿ ಚೆನ್ನಾಗಿದೆ ಎಂದಿದ್ದಾರೆ. ಹೆಚ್ಚಿನವರು ನೋಯ್ಡಾ ಸುರಕ್ಷಿತವಲ್ಲ ಎಂದು ಹೇಳುತ್ತಾರೆ. ಆದರೆ ನನಗೆ ಬೆಂಗಳೂರಿನಲ್ಲಿ ಹೆಚ್ಚಿನ ಆತಂಕ ಎದುರಾಗಿದೆ. ಬೆಂಗಳೂರಿಗೆ ಹೋಲಿಸಿದರೆ ನೋಯ್ಡಾ ಹೆಚ್ಚು ಸುರಕ್ಷಿತವಾಗಿದೆ ಎಂದಿದ್ದಾರೆ.
