ಬೆಂಗಳೂರು ಸುತ್ತಲಿನ ಎಂಟು ರೈಲ್ವೆ ಮಾರ್ಗಗಳನ್ನು ಜೋಡಿಹಳಿ, ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ವಿಸ್ತ್ರತ ಯೋಜನಾ ವರದಿಯನ್ನು ಶೀಘ್ರವೇ ರೈಲ್ವೆ ಮಂಡಳಿಗೆ ಸಲ್ಲಿಸಲಾಗುವುದು ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ತಿಳಿಸಿದರು.

ಬೆಂಗಳೂರು : ಬೆಂಗಳೂರು ಸುತ್ತಲಿನ ಎಂಟು ರೈಲ್ವೆ ಮಾರ್ಗಗಳನ್ನು ಜೋಡಿಹಳಿ, ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ವಿಸ್ತ್ರತ ಯೋಜನಾ ವರದಿಯನ್ನು ಶೀಘ್ರವೇ ರೈಲ್ವೆ ಮಂಡಳಿಗೆ ಸಲ್ಲಿಸಲಾಗುವುದು ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರೈಲ್ವೆ ಸಂಪರ್ಕ ಅಭಿವೃದ್ಧಿಗೊಳಿಸಲು ಕ್ರಮ ವಹಿಸಲಾಗಿದೆ. ಎಂಟು ಮಾರ್ಗಗಳ ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್‌) ನಡೆಸಿದ್ದು, ವರ್ಷಾಂತ್ಯಕ್ಕೆ ರೈಲ್ವೆ ಮಂಡಳಿಗೆ ಎಲ್ಲ ವರದಿ ಸಲ್ಲಿಕೆ ಆಗಲಿದೆ. ಬೆಂಗಳೂರು-ಮೈಸೂರು ಚತುಷ್ಪಥ ಹಳಿ ನಿರ್ಮಾಣ ಯೋಜನೆಯ 6850 ಕೋಟಿ ರು. ವೆಚ್ಚದ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ವರ್ಷಾಂತ್ಯಕ್ಕೆ ರೈಲ್ವೆ ಮಂಡಳಿಗೆ ಸಲ್ಲಿಸಲಾಗುವುದು ಎಂದರು.

3500 ಕೋಟಿ ರು. ವೆಚ್ಚದ ಬೆಂಗಳೂರು ತುಮಕೂರು ಮಾರ್ಗ ಚತುಷ್ಪಥವಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆ ಡಿಪಿಆರ್‌ ಅನ್ನು ಆಗಸ್ಟ್‌ ತಿಂಗಳಲ್ಲಿ ಸಲ್ಲಿಸಲಾಗುವುದು, ಯಲಹಂಕ - ದೇವನಹಳ್ಳಿ ಜೋಡಿ ಮಾರ್ಗಕ್ಕಾಗಿ 455 ಕೋಟಿ ಪರಿಷ್ಕೃತ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ. ಮುಂದಿನ ತಿಂಗಳೊಳಗೆ ಸಂಚಾರ ಸಮರ್ಥನಾ ವರದಿ ಸಲ್ಲಿಸಲಿದ್ದೇವೆ ಎಂದರು.

ದೇವನಹಳ್ಳಿ - ಕೋಲಾರ - ಬಂಗಾರಪೇಟೆ ಜೋಡಿ ಮಾರ್ಗದ ಡಿಪಿಆರ್ ಅನ್ನು ನವೆಂಬರ್‌ ಒಳಗೆ ರೈಲ್ವೆ ಮಂಡಳಿಗೆ ವರದಿ ಸಲ್ಲಿಸುತ್ತೇವೆ. ವೈಟ್‌ಫೀಲ್ಡ್-ಬಂಗಾರಪೇಟೆ ಚತುಷ್ಪಥ ನಿರ್ಮಾಣದ ಕಾಮಗಾರಿಗೆ ಮೇ ತಿಂಗಳಲ್ಲಿ 1481 ರು. ಕೋಟಿ ಮೊತ್ತದ ಡಿಪಿಆರ್‌ ಸಲ್ಲಿಸಲಾಗಿದೆ.ಬೈಯ್ಯಪ್ಪನಹಳ್ಳಿ- ಹೊಸೂರು ಚತುಷ್ಪಥ ನಿರ್ಮಾಣ ಸಮೀಕ್ಷೆ ಪೂರ್ಣಗೊಂಡು 2550.71 ಕೋಟಿ ಅಂದಾಜು ವೆಚ್ಚದ ಡಿಪಿಆರ್‌ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಚಿಕ್ಕಬಾಣಾವರ-ಕುಣಿಗಲ್-ಹಾಸನ ಜೋಡಿಹಳಿ ಯೋಜನೆ ಡಿಪಿಆರ್‌ ಆಗಿದ್ದು, 4150 ಕೋಟಿ ಮೊತ್ತದಲ್ಲಿ ಕಾಮಗಾರಿ ನಡೆಯಲಿದೆ. ಈ ವರದಿಯನ್ನು ಆಗಸ್ಟ್ ಒಳಗಾಗಿ ಹಾಗೂ ಬಂಗಾರಪೇಟೆ-ಜೋಲಾರಪೇಟೆ ಚತುಷ್ಪಥ ನಿರ್ಮಾಣ ಯೋಜನೆಗೆ ₹ 3600 ಕೋಟಿ ಅಂದಾಜಿಸಿದ್ದು, ಜುಲೈ ಒಳಗೆ ಡಿಪಿಆರ್ ಅನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

288ಕಿಮೀ ಬೆಂಗಳೂರು ವರ್ತುಲ ರೈಲ್ವೆ ಏಳು ಹಂತದಲ್ಲಿ ನಡೆಯಲಿದ್ದು, ಆಗಸ್ಟ್-2025 ರೊಳಗೆ ರೈಲ್ವೆ ಮಂಡಳಿಗೆ ಸಂಪೂರ್ಣ ಡಿಪಿಆರ್ ಸಲ್ಲಿಸುವ ಸಾಧ್ಯತೆ ಇದೆ. ಇದರಿಂದ ಸರಕು ಸಾಗಣೆ, ಪ್ರಯಾಣಿಕ ಸಾರಿಗೆ ಎರಡಕ್ಕೂ ಹೆಚ್ಚಿನ ಅನುಕೂಲ ಆಗಲಿದ್ದು, ನಗರದ ರೈಲ್ವೆ ಸಾರಿಗೆ ಮೇಲಿನ ಒತ್ತಡ ಕಡಿಮೆ ಆಗಲಿದೆ ಎಂದು ಆಶುತೋಷ್‌ ತಿಳಿಸಿದರು.

ದಂಡು ರೈಲ್ವೆ ನಿಲ್ದಾಣದಲ್ಲಿ 2.25ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆ

484 ಕೋಟಿ ರು. ಮೊತ್ತದಲ್ಲಿ ಮರುನಿರ್ಮಾಣ ಆಗುತ್ತಿರುವ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ದಕ್ಷಿಣ ಕಟ್ಟಡದ ಕೆಲಸ ಶೇ70 ರಷ್ಟು, ಉತ್ತರ ಕಟ್ಟಡದ ಕೆಲಸ ಶೇ. 3ರಷ್ಟು ಮುಗಿದಿದೆ. ಈ ನಿಲ್ದಾಣ ತಿಂಗಳಿಗೆ 3.11ಲಕ್ಷ ಯೂನಿಟ್ ವಿದ್ಯುತ್‌ ಬಳಕೆ ಆಗಲಿದೆ. ಆದರೆ, 1852ಕೆಡಬ್ಲೂಪಿ ಮೇಲ್ಚಾವಣಿ ಸೌರಫಲಕವನ್ನು ಈ ನಿಲ್ದಾಣದಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಈ ನಿಲ್ದಾಣ ತನ್ನ ವಿದ್ಯುತ್‌ ಅಗತ್ಯದ ಶೇ. 72.34ರಷ್ಟು ವಿದ್ಯುತ್‌ನ್ನು ತಾನೇ ಉತ್ಪಾದಿಸಿ ಬಳಸಲಿದೆ. ಕೆಎಸ್‌ಆರ್‌ ಬೆಂಗಳೂರು (ಮೆಜಸ್ಟಿಕ್‌) ನಿಲ್ದಾಣದಲ್ಲಿ ₹ 222 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಎರಡು ಪ್ಲಾಟ್‌ಫಾರ್ಮ್‌ ನಿರ್ಮಾಣ ಮಾಡಲಾಗುವುದು. ಯಶವಂತಪುರ ರೈಲ್ವೆ ನಿಲ್ದಾಣ 377.86 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿ ಆಗುತ್ತಿದ್ದು, ಈ ನಿಲ್ದಾಣದಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಕೂಡ ನಿರ್ಮಾಣ ಆಗಲಿದೆ ಎಂದು ಡಿಆರ್‌ಎಂ ಹೇಳಿದರು.

ಎಫ್‌ಎಲ್‌ಎಸ್‌ ಪೂರ್ಣವಾದ ಮಾರ್ಗಗಳು

ಯಲಹಂಕ - ದೇವನಹಳ್ಳಿ ಡಬ್ಲಿಂಗ್ (23.7 ಕಿಮೀ)

ದೇವನಹಳ್ಳಿ-ಕೋಲಾರ-ಬಂಗಾರಪೇಟೆ ಡಬ್ಲಿಂಗ್ (125 ಕಿಮೀ)

ವೈಟ್‌ಫೀಲ್ಡ್-ಬಂಗಾರಪೇಟೆ ಚತುಷ್ಪಥ (47 ಕಿಮೀ)

ಬೈಯ್ಯಪ್ಪನಹಳ್ಳಿ- ಹೊಸೂರು ಚತುಷ್ಪಥ (48.5 ಕಿಮೀ)

ಬೆಂಗಳೂರು- ತುಮಕೂರು ಚತುಷ್ಪಥ (70 ಕಿಮೀ)

ಚಿಕ್ಕಬಾಣಾವರ- ಕುಣಿಗಲ್- ಹಾಸನ ಡಬಲ್ ಲೈನ್ (166 ಕಿಮೀ)

ಬೆಂಗಳೂರು- ಮೈಸೂರು ಚತುಷ್ಪಥ (137 ಕಿಮೀ)

ಬಂಗಾರಪೇಟೆ- ಜೋಲಾರ್‌ಪೇಟ್ಟೈ ಚತುಷ್ಪಥ (72 ಕಿಮೀ)