ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಸ್ಯ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ, ರಾಜ್ಯ ಸರ್ಕಾರವು ಫೋಟೋಶೂಟ್‌, ವಿಡಿಯೋ ಶೂಟ್‌, ಸೈಕ್ಲಿಂಗ್ ಸೇರಿದಂತೆ ಹಲವು ಮನರಂಜನಾ ಚಟುವಟಿಕೆಗಳನ್ನು ನಿಷೇಧಿಸಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. 

ಬೆಂಗಳೂರು (ನ.22): ಒಂದೆಡೆ ರಾಜ್ಯ ಸರ್ಕಾರ ಲಾಲ್‌ಬಾಗ್‌ನ ಅಡಿಯಲ್ಲಿಯೇ ಸುರಂಗ ಕೊರೆಯಲು ಹಾಗೂ ಎಂಟ್ರಿ-ಎಕ್ಸಿಟ್‌ ರಾಂಪ್‌ ನೀಡಲು ಮುಂದಾಗಿದೆ. ಇದರಿಂದ ಲಾಲ್‌ಬಾಗ್‌ಗೆ ಹಾನಿಯಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟು ದೊಡ್ಡ ಗಂಡಾಂತರ ಎದುರಲ್ಲಿದ್ದರೂ ತೋಟಗಾರಿಕೆ ಇಲಾಖೆ ತಲೆಕೆಡಿಸಿಕೊಂಡಿಲ್ಲ. ಆದರೆ, ಇಲಾಖೆ ತಲೆಕೆಡಿಸಿಕೊಂಡಿರುವುದು ಲಾಲ್‌ಬಾಗ್‌ನಲ್ಲಿ ಆಗುವ ಫೋಟೋ ಶೂಟ್‌ ವಿಡಿಯೋ ಶೂಟ್‌ ಬಗ್ಗೆ.

ಹೌದು, ಲಾಲ್‌ಬಾಗ್‌ನಲ್ಲಿ ಫೋಟೋಶೂಟ್‌, ವಿಡಿಯೋಶೂಟ್‌ ಹೆಚ್ಚಾಗುತ್ತಿರುವ ಕಾರಣಕ್ಕೆ ಇವುಗಳಿಗೆ ನಿಷೇಧ ವಿಧಿಸಿ ಆದೇಶ ಹೊರಡಿಸಿದೆ. ಪ್ರವಾಸಿ ತಾಣ ಲಾಲ್‌ಬಾಗ್‌ನಲ್ಲಿ ಇನ್ನುಮುಂದೆ ಮನರಂಜನಾ ಚಟುವಟಿಕೆಗೆ ಅವಕಾಶ ಇರೋದಿಲ್ಲ. ನಿಯಮ ಉಲ್ಲಂಘಿಸಿ ಫೋಟೋಶೂಟ್‌, ವಿಡಿಯೋ ಶೂಟ್‌ ಮಾಡಿದರೆ ದಂಡ ಬೀಳಲಿದೆ.

ಲಾಲ್‌ಬಾಗ್ ನಲ್ಲಿ ಮನರಂಜನಾ ಚಟುವಟಿಕೆಗಳ ಮೇಲೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಯಾಗಿದೆ. ಬೆಳಿಗ್ಗೆ 5.30 ರಿಂದ 9 ಗಂಟೆ ಹಾಗೂ ಸಂಜೆ 4.30 ರಿಂದ 7 ಗಂಟೆಯೊಳಗೆ ವಾಕಿಂಗ್, ಜಾಗಿಂಗ್ ಅವಕಾಶ ಇರಲಿದೆ. ಸೈಕ್ಲಿಂಗ್ ಮತ್ತು ಸ್ಕೇಟಿಂಗ್‌ಗಳಂತಹ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿಷೇಧ ವಿಧಿಸಲಾಗಿದೆ. ಅಷ್ಟು ಮಾತ್ರವಲ್ಲದೆ, ಉದ್ಯಾನದಲ್ಲಿ ಹೊರಗಿನವರು ಗಿಡಗಳನ್ನು ನೆಡುವುದಕ್ಕೂ ಅವಕಾಶವಿಲ್ಲ.

ಆದರೆ, ಪರಿಸರ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಇಲಾಖೆಯಿಂದ ಮುಂಚಿತವಾಗಿ ಅನುಮತಿ ಪಡೆದರೆ ಅವಕಾಶವಿದೆ. ಉದ್ಯಾನವನದ ಸಸ್ಯ ಸಂಪತ್ತು ಮತ್ತು ಜೀನ್ ಬ್ಯಾಂಕ್‌ಗಳನ್ನು ಸಂರಕ್ಷಿಸುವ ಉದ್ದೇಶದಿಂದ ಮಹತ್ವದ ಆದೇಶ ಮಾಡಲಾಗಿದೆ. ಆದೇಶ ಪಾಲಿಸದಿದ್ದಲ್ಲಿ 500 ರೂ ದಂಡವನ್ನು ಇಲಾಖೆ ಹಾಕಲಿದೆ.

ನಿರ್ಬಂಧಿಸಿದ ಚಟುವಟಿಕೆಗಳು

  1. ಸಾಮೂಹಿಕ ಯೋಗ ಚಟುವಟಿಕೆಗಳು
  2. ಮರ ಹತ್ತುವುದು, ರೆಂಬೆಗಳೊಂದಿಗೆ ಆಟವಾಡುವುದು, ಹಣ್ಣು, ಹೂವುಗಳನ್ನು ಕಿತ್ತುಕೊಳ್ಳುವುದು
  3. ಪಕ್ಷಿಗಳು ಮತ್ತು ಮೀನುಗಳಿಗೆ ಆಹಾರ ನೀಡುವುದು ಹಾಗೂ ಸಾಕು ಪ್ರಾಣಿಗಳನ್ನು ಕರೆತರುವುದು
  4. ಹುಲ್ಲುಗಾವಲುಗಳಲ್ಲಿ ಆಟವಾಡುವುದು, ಹೊರಗಿನಿಂದ ಆಹಾರ, ಆಟಿಕೆಗಳು ಮತ್ತು ಬಲೂನ್‌ಗಳನ್ನು ತರುವುದು
  5. ವಾಕಥಾನ್, ಮ್ಯಾರಥಾನ್, ಸ್ಕೇಟಿಂಗ್, ಸೈಕ್ಲಿಂಗ್
  6. ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಅಥವಾ ಸರ್ಕಾರದಿಂದ ನಿಷೇಧಿಸಲಾದ ಯಾವುದೇ ವಸ್ತು
  7. ಟಿವಿ ಧಾರಾವಾಹಿ, ಸಿನಿಮಾ, ರೀಲ್ಸ್, ಪ್ರಿ/ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್‌ಗಳು, ಮಾಡೆಲಿಂಗ್, ಬೇಬಿ ಶವರ್ ಅಥವಾ ಯಾವುದೇ ರೀತಿಯ ಫೋಟೋಶೂಟ್ ಅಥವಾ ಡ್ರೋನ್ ಛಾಯಾಗ್ರಹಣ