ಈ ಪ್ರದೇಶವು ನೋಡಲು ಅಚ್ಚುಮೆಚ್ಚು ಬೆಂಗಳೂರಿನ ಕುರುಬರಹಳ್ಳಿ ಮತ್ತು ಲಗ್ಗೆರೆ ಬ್ರಿಡ್ಜ್‌ನಂತೆಯೇ ಇದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಬೆಂಗಳೂರು: ವಿದೇಶಗಳಲ್ಲಿ ವಾಸವಾಗಿರುವ ಭಾರತೀಯರು ಅಲ್ಲಿಯ ಸ್ಥಳ ಮತ್ತು ತಮ್ಮ ಜೀವನಶೈಲಿಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಕನ್ನಡಿಗರು ಸಹ ವಿದೇಶದಲ್ಲಿದ್ದು, ತಾವಿರುವ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. vishaya_vinoda (ನಾನೇ ಸಂತು) ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ವ್ಲಾಗರ್ ಒಬ್ಬರು, ನಾಡಿನ ಜನತೆಗೆ ಅಮೆರಿಕಾದಲ್ಲಿರುವ ಕುರುಬರಹಳ್ಳಿ ಮತ್ತು ಲಗ್ಗೆರೆ ಬ್ರಿಡ್ಜ್ ತೋರಿಸುವ ಕೆಲಸವನ್ನು ಮಾಡಿದ್ದಾರೆ.

ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ನಮ್ಮ ಲಗ್ಗೆರೆಯನ್ನು ಅಮೆರಿಕಾದಲ್ಲಿ ನೆನಸಿಕೊಂಡಿದ್ದಕ್ಕೆ ಧನ್ಯವಾದಗಳು. ಜೈ ಲಗ್ಗರೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಗುರು ಅಲ್ಲೇ ನಮ್ಮನೆ ಕಾಣಿಸುತ್ತಿದೆಯಾ ನೋಡಿ, ಪಕ್ಕದಲ್ಲಿರುವ ಸುಮ್ಮನಹಳ್ಳಿ ಮತ್ತು ಕಾಮಾಕ್ಷಿಪಾಳ್ಯ, ಆಲದಮರ ಇದ್ರೆ ಸ್ವಲ್ಪ ತೋರಿಸಿ ಎಂದು ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಮೆರಿಕಾದಲ್ಲಿರುವ ಕುರುಬರಹಳ್ಳಿ ಮತ್ತು ಲಗ್ಗೆರೆ ಬ್ರಿಡ್ಜ್ ತೋರಿಸುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಏನಿದು ಕುರುಬರಹಳ್ಳಿ, ಲಗ್ಗೆರೆ ಬ್ರಿಡ್ಜ್?

ಬೆಂಗಳೂರಿನ ಜನತೆಗೆ ಅಥವಾ ಕುರುಬರಹಳ್ಳಿ, ಲಗ್ಗೆರೆ ಬ್ರಿಡ್ಜ್ ಭಾಗದ ನಿವಾಸಿಗಳಿಗೆ ಇಲ್ಲಿಯ ಭೂಭಾಗ ಹೇಗಿದೆ ಎಂದು ಗೊತ್ತಿರುತ್ತದೆ. ಬೆಟ್ಟದಂತಿರುವ ಈ ಪ್ರದೇಶದಲ್ಲಿ ಇಂದು ಜನರು ವಾಸವಾಗಿದ್ದಾರೆ. ಒಂದು ಬದಿಯಿಂದ ನೋಡಿದ್ರೆ ಇಳಿಜಾರು ಮತ್ತು ಮತ್ತೊಂದೆಡೆ ದಿಬ್ಬ ಕಾಣಿಸುತ್ತದೆ. ಒಂದು ವೇಳೆ ಮೊದಲ ಬಾರಿಗೆ ನೀವೇನಾದ್ರೂ ಕುರುಬರಹಳ್ಳಿ, ಲಗ್ಗೆರೆ ಬ್ರಿಡ್ಜ್ ಭಾಗಕ್ಕೆ ಹೋದ್ರೆ ಇಲ್ಲಿಯ ಭೌಗೋಳಿಕ ರಚನೆ ಕುತೂಹಲಕ್ಕೆ ಕಾರಣವಾಗುತ್ತದೆ.

ಅಮೆರಿಕಾದಲ್ಲಿ ಇಂತಹುವುದೇ ಭೂ ರಚನೆ!

ವ್ಲಾಗರ್ vishaya_vinoda ತಮ್ಮ ವಿಡಿಯೋದಲ್ಲಿ ಕುರುಬರಹಳ್ಳಿ, ಲಗ್ಗೆರೆ ಬ್ರಿಡ್ಜ್ ಮಾದರಿಯ ಭೂ ರಚನೆ ಹೊಂದಿರುವ ಪ್ರದೇಶವನ್ನು ತೋರಿಸಿದ್ದಾರೆ. ನನಗೆ ಇಲ್ಲಿ ಬಂದ್ರೆ ಕುರುಬರಹಳ್ಳಿ, ಲಗ್ಗೆರೆ ಬ್ರಿಡ್ಜ್ ನೆನಪಿಗೆ ಬರುತ್ತೆ ಎಂದು ಹೇಳಿಕೊಂಡಿದ್ದಾರೆ. ಇದು ಕ್ಯಾಲಿಫೋರ್ನಿಯಾದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಲಂಬಾರ್ಡ್ ಸ್ಟ್ರೀಟ್. ನಮ್ಮ ಕುರುಬರಹಳ್ಳಿ ರೀತಿಯಲ್ಲಿಯೇ ಈ ಏರಿಯಾ ಅಪ್ಸ್ ಆಂಡ್ ಡೌನ್ ಹೊಂದಿದೆ. ಇದು ಜನಪ್ರಿಯ ರಸ್ತೆಯಾಗಿದ್ದು, ಜನರು ತಮ್ಮ ಕಾರ್ ನಿಲ್ಲಿಸಿ ಇಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇವರೆಲ್ಲರನ್ನು ನಮ್ಮ ಕುರುಬರಹಳ್ಳಿಗೆ ಕರೆದುಕೊಂಡು ಬರಬೇಕು ಎಂದು ವ್ಲಾಗರ್ ಹೇಳಿದ್ದಾರೆ.

View post on Instagram