ಕೆಎಸ್‌ಆರ್‌ಟಿಸಿಯ ಐರಾವತ ಕ್ಲಬ್ ಕ್ಲಾಸ್ ಬಸ್‌ಗಳ ಮೇಲಿರುವ ಮಗುವಿನ ನಿದ್ರೆಯ ಜನಪ್ರಿಯ ಚಿತ್ರವು ಪ್ರಯಾಣದ ಆರಾಮದಾಯಕತೆಯನ್ನು ಬಿಂಬಿಸುತ್ತದೆ. ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಅವರು ಓಗಿಲ್ವಿ ಆಂಡ್ ಮ್ಯಾಥರ್ ಸಂಸ್ಥೆಗಾಗಿ ಈ ಸುಂದರ ಚಿತ್ರವನ್ನು ಸೆರೆಹಿಡಿದಿದ್ದರು.

ಬೆಂಗಳೂರು (ಅ.15): ಒಂದು ಪುಟ್ಟ ಮಗುವಿನ ಪ್ರಶಾಂತ ನಿದ್ರೆ, ಒಂದು ಸ್ಟ್ರೋಲರ್ (Stroller) ಹಾಗೂ ಅತ್ಯಂತ ಸರಳವಾದ ಆಲೋಚನೆ; ಇವಿಷ್ಟೇ ಕೆಎಸ್‌ಆರ್‌ಟಿಸಿಯ (KSRTC) ಐಷಾರಾಮಿ ಬಸ್‌ಗಳನ್ನು ರಸ್ತೆಯಲ್ಲಿ ಚಲಿಸುವ ಜಾಹೀರಾತು ಫಲಕಗಳಾಗಿ (Moving Billboard) ಪರಿವರ್ತಿಸಿದವು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಐಷಾರಾಮಿ 'ಐರಾವತ ಕ್ಲಬ್ ಕ್ಲಾಸ್' ಬಸ್‌ಗಳ ಪಕ್ಕದಲ್ಲಿ ಪ್ರಶಾಂತವಾಗಿ ನಿದ್ರಿಸುತ್ತಿರುವ ಮಗುವಿನ ಈ ಫೋಟೋ ರೂಪುಗೊಂಡು ಬರೋಬ್ಬರಿ ಎರಡು ದಶಕಗಳು (20 ವರ್ಷಗಳು) ಕಳೆದಿವೆ. ಆದರೆ, ಇಂದಿಗೂ ರಸ್ತೆಯಲ್ಲಿ ಚಲಿಸುವ ಈ ಬಸ್ ಹಾಗೂ ಅದರ ಮೇಲಿರುವ ಚಿತ್ರ ಪ್ರತಿಯೊಬ್ಬ ಪ್ರಯಾಣಿಕನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು ಮೂಲದ ಪ್ರಸಿದ್ಧ Commercial Photographer ಸೆಂಥಿಲ್ ಕುಮಾರ್ ಮುರುಗನಂದನ್ (Senthil Kumar Muruganandhan) ಈ ಅಪರೂಪದ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಇಷ್ಟು ವರ್ಷಗಳ ನಂತರವೂ ತಮ್ಮ ಫೋಟೋಗೆ ಸಿಗುತ್ತಿರುವ ಈ ಅಪಾರ ಜನಪ್ರಿಯತೆಯನ್ನು ಕಂಡು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಅವರು ರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ನ ವೀಡಿಯೋ ಒಂದನ್ನು ತಾವೇ ಸರಳವಾಗಿ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದರು. ಈ ವೀಡಿಯೋ ನೋಡನೋಡುತ್ತಿದ್ದಂತೆಯೇ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು (Views) ಪಡೆದುಕೊಂಡು ವೈರಲ್ ಆಗಿದ್ದು, ದಶಕಗಳ ಹಿಂದೆ ಸೃಷ್ಟಿಯಾದ ಈ ಅಭಿಯಾನದ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ.

ಪ್ರಚಾರ ಅಭಿಯಾನದ ಕಲ್ಪನೆ ಹುಟ್ಟಿದ್ದು ಹೇಗೆ?

ಈ ಪ್ರಸಿದ್ಧ ಪ್ರಚಾರ ಅಭಿಯಾನವನ್ನು ಪ್ರಸಿದ್ಧ ಜಾಹೀರಾತು ಸಂಸ್ಥೆಯಾದ 'ಓಗಿಲ್ವಿ ಆಂಡ್ ಮ್ಯಾಥರ್' (Ogilvy & Mather) ವಿನ್ಯಾಸಗೊಳಿಸಿತ್ತು. 'ಸ್ಲೀಪ್ ಲೈಕ್ ಎ ಬೇಬಿ ವಿತ್ ಮಲ್ಟಿ ಆಕ್ಸಲ್ ಕಂಫರ್ಟ್' (Sleep like a baby with multi-axle comfort - ಮಲ್ಟಿ ಆಕ್ಸಲ್ ಹಾಯಾದ ಪ್ರಯಾಣದಲ್ಲಿ ಮಗುವಿನಂತೆ ನಿದ್ರಿಸಿ) ಎಂಬುದು ಈ ಪ್ರಚಾರದ ಮೂಲ ವಾಕ್ಯವಾಗಿತ್ತು.

ಕೆಎಸ್‌ಆರ್‌ಟಿಸಿಯ ಐಷಾರಾಮಿ ಮಲ್ಟಿ ಆಕ್ಸಲ್ ಬಸ್‌ಗಳು ನೀಡುವ ಅತ್ಯುತ್ತಮ ಸಸ್ಪೆಂಷನ್ ಹಾಗೂ ಪ್ರಯಾಣಿಕರಿಗೆ ಸಿಗುವ ಆರಾಮದಾಯಕ ಅನುಭವವನ್ನು ಅತ್ಯಂತ ಸರಳವಾಗಿ ಪ್ರದರ್ಶಿಸುವುದು ಈ ಕಲ್ಪನೆಯ ಮುಖ್ಯ ಉದ್ದೇಶವಾಗಿತ್ತು. ಮಕ್ಕಳ ಫೋಟೋ ಶೂಟ್‌ನಲ್ಲಿ ನಿಪುಣರಾಗಿದ್ದ ಸೆಂಥಿಲ್ ಕುಮಾರ್ ಅವರನ್ನು ಜಾಹೀರಾತು ಸಂಸ್ಥೆಯು ಈ ಫೋಟೋ ತೆಗೆಯಲು ಸಂಪರ್ಕಿಸಿತ್ತು.

"ರಸ್ತೆಯ ಬದಿಯಲ್ಲಿರುವ ಸ್ಥಿರವಾದ ಫ್ಲೆಕ್ಸ್ ಅಥವಾ ಬಿಲ್ ಬೋರ್ಡ್‌ಗಳನ್ನು ಬಳಸುವ ಬದಲು, ಸ್ವತಃ ಬಸ್‌ಗಳನ್ನೇ ಜಾಹೀರಾತು ಮಾಧ್ಯಮವನ್ನಾಗಿ ಏಕೆ ಬಳಸಬಾರದು ಎಂಬುದು ಈ ಯೋಜನೆಯ ಮೂಲ ಆಲೋಚನೆಯಾಗಿತ್ತು" ಎಂದು ಸೆಂಥಿಲ್ ನೆನಪಿಸಿಕೊಂಡಿದ್ದಾರೆ.

ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಆ ಒಂದು ಕ್ಷಣ

ಸಾಮಾನ್ಯವಾಗಿ ದೊಡ್ಡ ಮಟ್ಟದ ಪ್ರಚಾರ ಅಭಿಯಾನಗಳ ಜಾಹೀರಾತು ಶೂಟಿಂಗ್ ಎಂದರೆ ದಿನಗಟ್ಟಲೆ ಸಮಯ ಮತ್ತು ಭಾರಿ ತಯಾರಿ ಬೇಕಾಗುತ್ತದೆ. ಆದರೆ ಈ ಫೋಟೋ ಶೂಟ್ ಅತ್ಯಂತ ಶೀಘ್ರವಾಗಿ ಪೂರ್ಣಗೊಂಡಿತ್ತು. ಕೆಎಸ್‌ಆರ್‌ಟಿಸಿಯಿಂದ ಒಪ್ಪಿಗೆ ಸಿಕ್ಕ ತಕ್ಷಣ, ಜಾಹೀರಾತು ಸಂಸ್ಥೆಯು ಮಗು ಹಾಗೂ ಶೂಟಿಂಗ್‌ಗೆ ಬೇಕಾದ ವಸ್ತುಗಳೊಂದಿಗೆ ಸೆಂಥಿಲ್ ಅವರ ಸ್ಟುಡಿಯೋಗೆ ಆಗಮಿಸಿತ್ತು. ಆದರೆ ಮಗುವಿನ ಫೋಟೋ ತೆಗೆಯುವಾಗ ಎದುರಾಗುವ ಸಾಮಾನ್ಯ ಸವಾಲೊಂದು ಇಲ್ಲೂ ಎದುರಾಗಿತ್ತು!

ಮಗುವನ್ನು ಸ್ಟುಡಿಯೋಗೆ ಕರೆತಂದಾಗ ಅದು ನಿದ್ರಿಸುತ್ತಿರಲಿಲ್ಲ. ಮಗು ನಿದ್ರಿಸುವವರೆಗೆ ನಾವು ತಾಳ್ಮೆಯಿಂದ ಕಾಯಬೇಕಾಯಿತು. ತಾಯಿ ಮಗುವಿಗೆ ಹಾಲುಣಿಸಿದ ನಂತರ ನಾವು ಸೆಟ್‌ಅಪ್ ಸಿದ್ಧಪಡಿಸಿಕೊಂಡು ಕಾಯುತ್ತಿದ್ದಾಗ, ಮಗು ಹಾಯಾಗಿ ನಿದ್ರಿಸಿತು. ತಕ್ಷಣವೇ ನಾವು ಆ ಐಕಾನಿಕ್ ಶಾಟ್ ತೆಗೆದುಕೊಂಡೆವು' ಎಂದು ಸೆಂಥಿಲ್ ವಿವರಿಸಿದ್ದಾರೆ.

ವಿಶೇಷವೆಂದರೆ, ಮಗುವಿನ ನಿದ್ರೆಯ ಭಂಗಿ ಹಾಗೂ ಸ್ಟ್ರೋಲರ್‌ನ ವಿನ್ಯಾಸವು ಬಸ್‌ನ ಒಟ್ಟಾರೆ ವಿನ್ಯಾಸಕ್ಕೆ ಹೊಂದುವಂತೆ ನೈಸರ್ಗಿಕವಾಗಿ ಮೂಡಿಬರಬೇಕಿತ್ತು. ಸ್ಟ್ರೋಲರ್‌ನ ಚಕ್ರದ ವೃತ್ತಾಕಾರದ ವಿನ್ಯಾಸವು ಮಗುವಿನ ತೊಟ್ಟಿಲಂತಹ ವಾತಾವರಣಕ್ಕೂ ಹಾಗೂ ಬಸ್‌ನ ಚಕ್ರಗಳ ಚಲನೆಗೂ ದೃಶ್ಯ ರೂಪದ ನಂಟು ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಐರಾವತ ಬಸ್‌ನ ಮೊದಲ ಪ್ರಯಾಣ ಮತ್ತು ರಹಸ್ಯವಾಗಿಯೇ ಉಳಿದ ಮಗುವಿನ ಗುರುತು!

ಛಾಯಾಗ್ರಾಹಕ ಸೆಂಥಿಲ್ ಅವರ ಪ್ರಕಾರ, ಈ ಪ್ರಚಾರದ ಯಶಸ್ಸಿಗೆ ಅದರ ಸರಳತೆ ಹಾಗೂ ಜನರೊಂದಿಗೆ ನೇರವಾಗಿ ಹೊಂದಿಕೊಂಡ ಭಾವನಾತ್ಮಕ ಬೆಸುಗೆಯೇ ಮುಖ್ಯ ಕಾರಣ. "ಮಕ್ಕಳಿಗೆ ಸಂಬಂಧಿಸಿದ ಯಾವುದೇ ದೃಶ್ಯವು ಜನರಿಗೆ ತಕ್ಷಣವೇ ಕನೆಕ್ಟ್ ಆಗುತ್ತದೆ. ಮನಸ್ಸಿಗೆ ತಕ್ಷಣ ತಟ್ಟುವ ಅತ್ಯಂತ ಸರಳ ಕಲ್ಪನೆಗಳು ಯಾವಾಗಲೂ ಸಾರ್ವಕಾಲಿಕ ಯಶಸ್ಸು ಗಳಿಸುತ್ತವೆ" ಎನ್ನುತ್ತಾರೆ ಅವರು. ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಈ ನೂತನ ಫೋಟೋ ಬ್ರಾಂಡಿಂಗ್ ಹೊಂದಿದ್ದ ಪ್ರಥಮ 'ಐರಾವತ ಕ್ಲಬ್ ಕ್ಲಾಸ್' ಬಸ್ (ನೊಂದಣಿ ಸಂಖ್ಯೆ: KA-01-F-9133) ಪ್ರಥಮ ಬಾರಿಗೆ 2010 ರ ನವೆಂಬರ್ 25 ರಂದು ಬೆಂಗಳೂರು - ತಿರುಪತಿ ಮಾರ್ಗದಲ್ಲಿ ತನ್ನ ಅಧಿಕೃತ ರಸ್ತೆ ಸಂಚಾರವನ್ನು ಆರಂಭಿಸಿತ್ತು.

ಆದರೆ, ಇಷ್ಟೆಲ್ಲಾ ವರ್ಷಗಳ ಕಾಲ ಲಕ್ಷಾಂತರ ಪ್ರಯಾಣಿಕರನ್ನು ಆಕರ್ಷಿಸಿದ ಆ ಫೋಟೋದಲ್ಲಿರುವ ಮಗು ಯಾರು? ಎಂಬ ಪ್ರಶ್ನೆಗೆ ಮಾತ್ರ ಇಂದಿಗೂ ಉತ್ತರ ಸಿಕ್ಕಿಲ್ಲ! ಶೂಟಿಂಗ್ ಮುಗಿದ ನಂತರ ಆ ಮಗು ಯಾರು ಎಂಬುದನ್ನು ಪತ್ತೆಹಚ್ಚಲು ಅಥವಾ ಅವರ ಕುಟುಂಬವನ್ನು ಸಂಪರ್ಕಿಸಲು ತನಗೆ ಸಾಧ್ಯವಾಗಿಲ್ಲ ಎಂದು ಸೆಂಥಿಲ್ ಕುಮಾರ್ ತಿಳಿಸಿದ್ದಾರೆ. ಆದರೂ ಸಹ, ದಿನಂಪ್ರತಿ ದೇಶದ ವಿವಿಧ ಭಾಗಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಐರಾವತ ಬಸ್‌ಗಳ ಮೂಲಕ ಆ ಮುದ್ದಾದ ಮಗುವಿನ ನಿದ್ರೆಯ ಚಿತ್ರ ಮಾತ್ರ ಕನ್ನಡಿಗರ ಹಾಗೂ ಪ್ರಯಾಣಿಕರ ಮನಸ್ಸಿನಲ್ಲಿ ಎಂದೆಂದಿಗೂ ಅಮರವಾಗಿದೆ.