Asianet Suvarna News Asianet Suvarna News

ಇನ್ಮುಂದೆ ಖಾಸಗಿ ಡೇರಿಗೆ ಕೆಎಂಎಫ್‌ ಹಾಲು ಮಾರಾಟ ಬಂದ್‌!

ಹೊರ ರಾಜ್ಯದ ಖಾಸಗಿ ಡೇರಿಗಳಿಗೆ ಪೂರೈಸುತ್ತಿದ್ದ 8 ಲಕ್ಷ ಲೀಟರ್‌ ಹಾಲು ಸ್ಥಗಿತ|ಕೆಎಂಎಫ್‌ನಲ್ಲೇ ಹಾಲಿನಪುಡಿ, ಬೆಣ್ಣೆ ತಯಾರಿಸಿ ಮಾರಲು ನಿರ್ಧಾರ|ಬೆಣ್ಣೆ-ಹಾಲಿನ ಪೌಡರ್‌ ಉತ್ಪಾದನೆ|ವಹಿವಾಟು ದುಪ್ಪಟ್ಟು ಮಾಡಲು ಪ್ಲಾನ್‌|

KMF Stopped to Sale Milk to Private Dairy
Author
Bengaluru, First Published Oct 30, 2019, 8:28 AM IST

ಸಂಪತ್‌ ತರೀಕೆರೆ

ಬೆಂಗಳೂರು[ಅ.30]:  ದೇಶೀಯ ಮಾರುಕಟ್ಟೆಗೆ ಆರ್‌ಸಿಇಪಿ ವ್ಯಾಪಾರ ಒಪ್ಪಂದದಡಿ ವಿದೇಶಿ ಹಾಲಿನ ಉತ್ಪನ್ನಗಳು ಲಗ್ಗೆ ಇಡಬಹುದೆಂಬ ಆತಂಕದ ನಡುವೆಯೇ ಕೆಎಂಎಫ್‌ ಪ್ರತೀ ಲೀಟರ್‌ಗೆ ಮೂರರಿಂದ ನಾಲ್ಕು ರು. ಲಾಭವಿದ್ದರೂ ಹೊರ ರಾಜ್ಯಗಳ ಖಾಸಗಿ ಡೇರಿಗಳಿಗೆ ಹಾಲು ಮಾರಾಟ ಮಾಡದಿರಲು ನಿರ್ಧರಿಸಿದೆ.

ಕೆಎಂಎಫ್‌ ಕಳೆದ ಹಲವು ವರ್ಷಗಳಿಂದ 8 ಲಕ್ಷ ಲೀಟರ್‌ ಹಾಲನ್ನು ರಾಜ್ಯ ಮತ್ತು ಹೊರ ರಾಜ್ಯದ ಖಾಸಗಿ ಡೇರಿಗಳಿಗೆ ಮಾರಾಟ ಮಾಡುತ್ತಿದ್ದು, ಖಾಸಗಿ ಡೇರಿಗಳು ಅದನ್ನು ತಮ್ಮದೇ ಬ್ರಾಂಡ್‌ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಿ ಲಾಭ ಗಳಿಸುತ್ತಿದ್ದವು. ಈ ಹಾಲು ಮಾರಾಟದಿಂದ ಕೆಎಂಎಫ್‌ಗೆ ಪ್ರತಿ ಲೀಟರ್‌ ಹಾಲಿಗೆ 4 ರು. ಲಾಭ ಸಿಗುತ್ತಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಕೆಎಂಎಫ್‌ ನೂತನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಆಡಳಿತ ಮಂಡಳಿ ನಂದಿನಿ ಹಾಲಿನ ಮಾರುಕಟ್ಟೆ ವಿಸ್ತರಿಸಿಕೊಂಡು ನೇರವಾಗಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ತೀರ್ಮಾನ ಕೈಗೊಂಡಿದೆ. ಪ್ರತಿ ದಿನ ಹೊರ ರಾಜ್ಯದ ಖಾಸಗಿ ಡೇರಿಗಳಿಗೆ ಮಾರಾಟ ಮಾಡುತ್ತಿದ್ದ 8 ಲಕ್ಷ ಲೀಟರ್‌ ಹಾಲನ್ನು ಬೆಣ್ಣೆ ಮತ್ತು ಹಾಲಿನ ಪೌಡರ್‌ ಆಗಿ ಪರಿವರ್ತಿಸಿ ಮಾರಾಟ ಮಾಡಲು ತೀರ್ಮಾನಿಸಿದ್ದು, ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಕೆಎಂಎಫ್‌ ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ.

ರಾಜ್ಯದ ಹಾಲು ಒಕ್ಕೂಟಗಳಿಗೆ ಪ್ರಸ್ತುತ ಪ್ರತಿದಿನ 78 ಲಕ್ಷ ಲೀಟರ್‌ ಹಾಲು ಸರಬರಾಜಾಗುತ್ತಿದೆ. ಇದರಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಗೆ 48 ಲಕ್ಷ ಲೀ. ಹಾಲು ಬಳಕೆಯಾಗುತ್ತಿದೆ. ಉಳಿದ 30 ಲಕ್ಷ ಲೀಟರ್‌ನಲ್ಲಿ 12 ಲಕ್ಷ ಲೀಟರ್‌ ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿಯ ಸರ್ಕಾರಿ ಮತ್ತು ಸಹಕಾರಿ ಸಂಸ್ಥೆಗಳಿಗೆ ಮತ್ತು 6 ಲಕ್ಷ ಲೀಟರ್‌ ಕ್ಷೀರಭಾಗ್ಯ ಯೋಜನೆಗೆ ಹಾಗೂ 8 ಲಕ್ಷ ಲೀಟರ್‌ ಹಾಲನ್ನು ರಾಜ್ಯ ಹಾಗೂ ಹೊರ ರಾಜ್ಯದ ಖಾಸಗಿ ಡೇರಿಗಳಿಗೆ ಮಾರಾಟ ಮಾಡುತ್ತಿತ್ತು. ಉಳಿದ ನಾಲ್ಕು ಲಕ್ಷ ಲೀಟರ್‌ ಹಾಲಿನಲ್ಲಿ ಬೆಣ್ಣೆ ಮತ್ತು ಹಾಲಿನ ಪೌಡರ್‌ ಉತ್ಪಾದನೆ ಮಾಡಲಾಗುತ್ತಿತ್ತು.

ಬೆಣ್ಣೆ-ಹಾಲಿನ ಪೌಡರ್‌ ಉತ್ಪಾದನೆ:

ಇದೀಗ ಕೆಎಂಎಫ್‌ ಖಾಸಗಿ ಡೇರಿಗಳಿಗೆ ಮಾರಾಟ ಮಾಡುತ್ತಿದ್ದ 8 ಲಕ್ಷ ಲೀಟರ್‌ ಹಾಲನ್ನು ಸ್ಥಗಿತಗೊಳಿಸಿದ್ದು, ಒಟ್ಟು 12 ಲಕ್ಷ ಲೀಟರ್‌ ಹಾಲನ್ನು ಬೆಣ್ಣೆ ಮತ್ತು ಹಾಲಿನ ಪೌಡರ್‌ ಉತ್ಪಾದನೆಗೆ ಬಳಸಿಕೊಳ್ಳಲು ನಿರ್ಧರಿಸಿದೆ. ಇದರಿಂದಾಗಿ ಖಾಸಗಿ ಡೇರಿಗಳಿಗೆ ಹಾಲು ಮಾರಾಟದಿಂದ ಪ್ರತಿ ದಿನ ಬರುತ್ತಿದ್ದ 32 ಲಕ್ಷ ರು. ಹಣ ಇನ್ನು ಬರುವುದಿಲ್ಲವಾದರೂ, ಬೆಣ್ಣೆ ಮತ್ತು ಹಾಲಿನ ಪೌಡರ್‌ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಕೆಎಂಎಫ್‌ಗೆ ಯಾವುದೇ ನಷ್ಟವಿಲ್ಲ ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಂಎಫ್‌ ಖಾಸಗಿ ಡೇರಿಗಳಿಗೆ ಮಾರಾಟ ಮಾಡದೆ ಉಳಿದ 12 ಲಕ್ಷ ಲೀಟರ್‌ ಹಾಲಿನಲ್ಲಿ ಪ್ರತಿ ದಿನ 92 ಟನ್‌ ಹಾಲಿನ ಪೌಡರ್‌ ಹಾಗೂ 60 ಟನ್‌ ಬೆಣ್ಣೆ ಉತ್ಪಾದಿಸುತ್ತಿದೆ. ಅಂದರೆ ಒಂದು ಕೆ.ಜಿ. ಬೆಣ್ಣೆ ತಯಾರಿಕೆಗೆ 22 ಲೀಟರ್‌ ಹಾಲು ಮತ್ತು ಒಂದು ಕೆ.ಜಿ. ಹಾಲಿನ ಪೌಡರ್‌ ಉತ್ಪಾದಿಸಲು 12 ಲೀಟರ್‌ ಹಾಲು ಬೇಕಾಗುತ್ತದೆ. ಒಂದು ಕೆ.ಜಿ. ಬೆಣ್ಣೆ ಮತ್ತು ಹಾಲಿನ ಪೌಡರ್‌ ಉತ್ಪಾದನೆಗೆ 20ರಿಂದ 22 ರು. ಖರ್ಚಾಗುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ನಂದಿನಿ ಬೆಣ್ಣೆ ಕೆ.ಜಿ.ಗೆ 340 ರು. ಮತ್ತು ಹಾಲಿನ ಪೌಡರ್‌ ಕೆ.ಜಿ.ಗೆ 310ರಿಂದ 320 ರು. ಬೆಲೆ ಇದೆ. ಖಾಸಗಿ ಡೇರಿಗಳಿಗೆ ಹಾಲು ಮಾರಾಟ ಮಾಡಿದ್ದರೆ 32 ಲಕ್ಷ ರು. ಲಾಭ ಬರುತ್ತಿತ್ತು. ಆದರೆ ಹಾಲು ಮಾರಾಟ ನಿಲ್ಲಿಸಿ ಬೆಣ್ಣೆ ಮತ್ತು ಹಾಲಿನ ಪೌಡರ್‌ ತಯಾರಿಸಿ ಮಾರುವುದರಿಂದ ಕೆಎಂಎಫ್‌ಗೆ 40ರಿಂದ 45 ಲಕ್ಷ ರು. ಲಾಭ ಬರಲಿದೆ ಎಂದು ಅಂದಾಜಿಸಲಾಗಿದೆ.

ಉಪಯೋಗವೇನು?

ಖಾಸಗಿ ಡೇರಿಗಳಿಗೆ ನಂದಿನ ಹಾಲು ಮಾರಾಟ ಮಾಡದಿರಲು ನಿರ್ಧರಿಸಿರುವುದರಿಂದ ಮಾರುಕಟ್ಟೆಯಲ್ಲಿ ನಂದಿನಿ ಬ್ರಾಂಡ್‌ ಅಭಿವೃದ್ಧಿಗೆ ಅನುಕೂಲವಾಗಲಿದೆ. ಖಾಸಗಿ ಡೇರಿಗಳಿಂದ ಪೈಪೋಟಿಯು ಕಡಿಮೆಯಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ನಂದಿನಿ ಬೆಣ್ಣೆ ಮತ್ತು ಹಾಲಿನ ಪೌಡರ್‌ಗೆ ಬೇಡಿಕೆ ಹೆಚ್ಚಿದ್ದು, ಕೆಎಂಎಫ್‌ಗೆ ನಷ್ಟವಾಗದು ಎಂದು ಲೆಕ್ಕಾಚಾರ ಮಾಡಲಾಗಿದೆ. ಬಮೂಲ್‌ ಕನಕಪುರದಲ್ಲಿ ಸ್ಥಾಪಿಸಿರುವ ಮೆಗಾ ಡೈರಿ ಈಗಾಗಲೇ ಕಾರ್ಯಾರಂಭಿಸಿದ್ದು, ಬೆಣ್ಣೆ ಮತ್ತು ಪೌಡರ್‌ ಉತ್ಪಾದನೆ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ರಾಮನಗರದಲ್ಲಿ 100 ಮೆಟ್ರಿಕ್‌ ಲೀಟರ್‌ ಪ್ಲಾಂಟ್‌ ಆರಂಭವಾಗಲಿದ್ದು, ಅಲ್ಲಿಯೂ ಬೆಣ್ಣೆ ಮತ್ತು ಪೌಡರ್‌ ಉತ್ಪಾದನೆ ಆಗಲಿದೆ. ಇದರಿಂದ ನಂದಿನಿ ಉತ್ಪನ್ನಗಳ ಮಾರುಕಟ್ಟೆವಿಸ್ತರಣೆ ಸಾಧ್ಯವಾಗಲಿದೆ ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ವಹಿವಾಟು ದುಪ್ಪಟ್ಟು ಮಾಡಲು ಪ್ಲಾನ್‌

ಪ್ರಸ್ತುತ 78 ಲಕ್ಷ ಲೀಟರ್‌ ಹಾಲು ಪ್ರತಿದಿನ ಸಂಗ್ರಹವಾಗುತ್ತಿದೆ. ಮುಂದಿನ ವರ್ಷದೊಳಗೆ ಅದನ್ನು ಒಂದು ಕೋಟಿ ಲೀಟರ್‌ಗೆ ಏರಿಸುವ ಉದ್ದೇಶ ಹೊಂದಿದ್ದು, ಅದಕ್ಕೆ ಬೇಕಾದ ಯೋಜನೆ ರೂಪಿಸಲಾಗುತ್ತಿದೆ. ಕೆಎಂಎಫ್‌ ಸದ್ಯ 15 ಸಾವಿರ ಕೋಟಿ ರು. ವಹಿವಾಟು ನಡೆಸುತ್ತಿದ್ದು, ಇದನ್ನು 30 ಸಾವಿರ ಕೋಟಿ ರು.ಗಳಿಗೆ ಏರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಕೆಎಂಎಫ್‌ ಅಧಿಕಾರಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios