ಬೆಂಗಳೂರಿನ ಪ್ರಮುಖ ಕೈಗಾರಿಕಾ ಕಾರಿಡಾರ್ ಆದ 7 ಕಿ.ಮೀ ಉದ್ದದ ಬೊಮ್ಮಸಂದ್ರ-ಜಿಗಣಿ ಲಿಂಕ್ ರಸ್ತೆಯಲ್ಲಿ 350ಕ್ಕೂ ಹೆಚ್ಚು ಗುಂಡಿಗಳಿದ್ದು, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಜಾಲತಾಣ X ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು (ಆ.11): ಬಯೋಕಾನ್, ಸಿಪ್ಲಾ, ಮೈಕ್ರೋಲ್ಯಾಬ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಸೇರಿದಂತೆ 1 ಸಾವಿರಕ್ಕೂ ಹೆಚ್ಚು ಪ್ರಮುಖ ಕೈಗಾರಿಕೆಗಳಿರುವ 7 ಕಿ.ಮೀ ಉದ್ದದ ಬೊಮ್ಮಸಂದ್ರ–ಜಿಗಣಿ ಲಿಂಕ್ ರಸ್ತೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಗುಂಡಿಗಳು ಸೃಷ್ಟಿಯಾಗಿವೆ. ಹದಗೆಟ್ಟ ರಸ್ತೆ ಕುರಿತು ಉದ್ಯಮಿ ಕಿರಣ್ ಮಜುಮ್ದಾರ್ ಶಾ ಅವರು ಜಾಲತಾಣ ಎಕ್ಸ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
7 ಕಿ.ಮೀ ಕೈಗಾರಿಕಾ ಕಾರಿಡಾರ್‌ನಲ್ಲಿ ಬರೀ ಗುಂಡಿಗಳಿದ್ದು, ಫುಟ್‌ಪಾತ್ ಇಲ್ಲ. ಕಳಪೆ ಮೂಲಸೌಕರ್ಯಗಳಿಂದ ಬೇಸತ್ತಿರುವ 1 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳ ಮುಖ್ಯಸ್ಥರು, ನೌಕರರು ರಸ್ತೆ ಸರಿಪಡಿಸುವಂತೆ ಗೋಗರೆಯುತ್ತಿದ್ದಾರೆ. ಇಲ್ಲಿ ವಾಹನಗಳು ಓಡಾಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಕಚೇರಿಗೆ ಹೋಗುವ ಸಮಯವೂ ವಿಳಂಬವಾಗುತ್ತಿದೆ. ಅನಗತ್ಯವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿವೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ
ಕೈಗಾರಿಕಾ ಕಾರಿಡಾರ್‌ಗಳ ಅತ್ಯಂತ ಮುಖ್ಯವಾದ ಲಿಂಕ್ ರಸ್ತೆಯನ್ನು ಸುಸ್ಥಿತಿಯಲ್ಲಿಡಬೇಕಾಗಿತ್ತು. ಆದರೆ, ಅನೇಕ ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದ ರಸ್ತೆ ದುಸ್ಥಿತಿಯಲ್ಲಿದೆ. ಈ ಕುರಿತು ಕೂಡಲೇ ಗಮನ ಹರಿಸಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಲ್ಲಿ ಕಿರಣ್ ಶಾ ಮನವಿ ಮಾಡಿದ್ದಾರೆ.


