Karnataka traffic fine: ರಾಜ್ಯದಲ್ಲಿ ಬಾಕಿ ಇರುವ ಸಂಚಾರ ಇ-ಚಲನ್ ದಂಡಗಳಿಗೆ ಮತ್ತೊಮ್ಮೆ ಶೇ.50ರಷ್ಟು ರಿಯಾಯಿತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ವಾಹನ ಸವಾರರು ಕರ್ನಾಟಕ ಒನ್ ಅಥವಾ ಪೇಟಿಎಂ ಮೂಲಕ ತಮ್ಮ ವಾಹನದ ಮೇಲಿರುವ ದಂಡವನ್ನು ಸುಲಭವಾಗಿ ಪರಿಶೀಲಿಸಿ ಪಾವತಿಸಬಹುದಾಗಿದೆ.

ಬೆಂಗಳೂರು: ನೀವು ಬೈಕ್, ಸ್ಕೂಟರ್ ಅಥವಾ ಕಾರು ಹೊಂದಿದ್ದೀರಾ? ನಿಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡಗಳಿವೆಯೇ? ಹಾಗಿದ್ದರೆ ವಾಹನ ಸವಾರರಿಗೆ ಇಲ್ಲೊಂದು ಬಹುಮುಖ್ಯ ಮಾಹಿತಿ ಇಲ್ಲಿದೆ..

ಹಿಂದೆ ರಾಜ್ಯ ಸರ್ಕಾರ ಸಂಚಾರ ದಂಡ ಪಾವತಿಗೆ 50% ರಿಯಾಯಿತಿ ಘೋಷಣೆ ಮಾಡಿತ್ತು. ಆಗ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹರಿದು ಬಂದಿತ್ತು. ಜೊತೆಗೆ ಲಕ್ಷಾಂತರ ವಾಹನ ಸವಾರರು ನಿರಾಳರಾಗಿದ್ದರು. ಇದೀಗ ಅದೇ ಮಾದರಿಯಲ್ಲಿ ಬಾಕಿ ಇರುವ ಸಂಚಾರ ಇ-ಚಲನ್ ದಂಡಗಳಿಗೆ ಮತ್ತೊಮ್ಮೆ 50% ರಿಯಾಯಿತಿ (50% Discount on Traffic Fine) ನೀಡುವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ. ಈ ಕುರಿತು ಸಾರಿಗೆ ಇಲಾಖೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚರ್ಚೆ ನಡೆಯುತ್ತಿದೆ.

ಹಿಂದೆ ನಡೆದ ಲೋಕ ಅದಾಲತ್‌ನಲ್ಲಿ ನೀಡಲಾಗಿದ್ದ 50% ರಿಯಾಯಿತಿ ಭರ್ಜರಿ ಯಶಸ್ಸು ಕಂಡಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ AI ಆಧಾರಿತ ಕ್ಯಾಮೆರಾಗಳು ಜಾರಿಗೆ ಬಂದ ನಂತರ.. ಸಣ್ಣಪುಟ್ಟ ನಿಯಮ ಉಲ್ಲಂಘನೆಗಳಿಗೂ ಸಾವಿರಾರು ರೂಪಾಯಿ ದಂಡ ವಾಹನ ಮಾಲೀಕರ ಹೆಸರಿಗೆ ಜಮೆಯಾಗುತ್ತಿದೆ. ಹಲವರ ವಾಹನಗಳ ಮೌಲ್ಯಕ್ಕಿಂತ ದಂಡದ ಮೊತ್ತವೇ ಹೆಚ್ಚಾಗಿದೆ.

  • ದಂಡ ಚೆಕ್ ಮಾಡೋದು ಹೇಗೆ?
  • ನಿಮ್ಮ ವಾಹನದ ಮೇಲೆ ಎಷ್ಟು ದಂಡ ಬಾಕಿ ಇದೆ ಎಂದು ತಿಳಿಯಲು ಕೇವಲ 2 ನಿಮಿಷಗಳು ಸಾಕು
  • ಮೊದಲು ಕರ್ನಾಟಕ ಸಂಚಾರ ಪೊಲೀಸ್‌ನ ಅಧಿಕೃತ ವೆಬ್‌ಸೈಟ್, ಕರ್ನಾಟಕ ಒನ್, ಬೆಂಗಳೂರು ಒನ್ ಪೋರ್ಟಲ್‌ಗೆ ಭೇಟಿ ನೀಡಿ
  • Collection of Traffic Police Violation Fine ಆಯ್ಕೆ ಕ್ಲಿಕ್ ಮಾಡಿ
  • ನಂತರ ನಿಮ್ಮ ವಾಹನದ ನೋಂದಣಿ ಸಂಖ್ಯೆ ನಮೂದಿಸಿ
  • ಸ್ಕ್ರೀನ್ ಮೇಲೆ ನಿಮ್ಮ ವಾಹನ ಯಾವ ಜಾಗದಲ್ಲಿ ನಿಯಮ ಉಲ್ಲಂಘಿಸಿದೆ
  • ಕ್ಯಾಮೆರಾ ಸೆರೆಹಿಡಿದ ಫೋಟೋ, ಒಟ್ಟು ಎಷ್ಟು ದಂಡ ಬಾಕಿ ಇದೆ ಎಂಬ ವಿವರ ತೋರಿಸುತ್ತದೆ

ದಂಡ ಪಾವತಿ ಹೇಗೆ?

  • ಕರ್ನಾಟಕ ಒನ್ ಅಥವಾ ಪೇಟಿಎಂ (Paytm) ಆ್ಯಪ್‌ನಲ್ಲಿ Traffic Authority ಆಯ್ಕೆ ಮಾಡಿ
  • ನಿಮ್ಮ ವಾಹನ ಸಂಖ್ಯೆ ನಮೂದಿಸಿ, ಬಾಕಿ ಇರುವ ದಂಡದ ವಿವರ ಪರಿಶೀಲಿಸಿ
  • ನೆಟ್ ಬ್ಯಾಂಕಿಂಗ್, ಯುಪಿಐ (GPay/PhonePe) ಅಥವಾ ಡೆಬಿಟ್ ಕಾರ್ಡ್ ಮೂಲಕ ದಂಡ ಕಟ್ಟಿ
  • ತಕ್ಷಣವೇ ಅಧಿಕೃತ ಇ-ರಸೀದಿ ಡೌನ್‌ಲೋಡ್ ಮಾಡಿಕೊಳ್ಳಬಹುದು

ಸರ್ಕಾರದಿಂದ 50% ರಿಯಾಯಿತಿ ಕುರಿತು ಅಧಿಕೃತ ಅಧಿಸೂಚನೆ ಹೊರಬಿದ್ದ ತಕ್ಷಣ ರಿಯಾಯಿತಿ ದರದಲ್ಲೇ ಪಾವತಿಸಲು ಅವಕಾಶ ಸಿಗಲಿದೆ. ವಾಹನ ಸವಾರರು ತಮ್ಮ ಬಾಕಿ ವಿವರಗಳನ್ನು ಮೊದಲೇ ತಿಳಿದಿಟ್ಟುಕೊಳ್ಳುವುದು ಉತ್ತಮ. ನಿಯಮ ಉಲ್ಲಂಘಿಸಿ ದಂಡ ಕಟ್ಟೋದಕ್ಕಿಂತ ಮೊದಲೇ ಜಾಗೃತರಾದರೆ ಇಂತಹ ಪ್ರಮೇಯಗಳು ಬರೋದೇ ಇಲ್ಲ. ಅಲ್ಲದೇ ಹೆಲ್ಮೆಟ್‌ ಧರಿಸುವಂತಹ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳುವುದರಿಂದ ನಿಮ್ಮ ಜೀವ ಕೂಡ ಸೇಫ್ ಆಗಿ ಇರಲಿದೆ.