ಬೆಂಗಳೂರಿನಲ್ಲಿ ಬ್ಯಾಚುಲರ್‌ಗಳಿಗೆ ಬಾಡಿಗೆ ಮನೆ ಹುಡುಕುವುದು ಅತ್ಯಂತ ಕಷ್ಟಕರವಾಗಿದೆ. ಯುವಕನೊಬ್ಬ ಮನೆ ಹುಡುಕಿ, ಅಡ್ವಾನ್ಸ್ ಕಟ್ಟಿ ಕೀ ಪಡೆದರೂ, ಬ್ಯಾಚುಲರ್ ಎಂಬ ಕಾರಣಕ್ಕೆ ಸೊಸೈಟಿಯವರು ಆತನನ್ನು ಮನೆಯಿಂದ ಹೊರಹಾಕಿದ್ದಾರೆ. ಈ ಕಹಿ ಅನುಭವವನ್ನು ಆತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಐಟಿ ಹಬ್ ಬೆಂಗಳೂರಿನಲ್ಲಿ ಸುಂದರವಾದ ಮನೆ ಹುಡುಕುವುದು ಎಷ್ಟು ಕಷ್ಟ ಎಂಬುದು ಇಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಗೊತ್ತು. ನೀವು ಬಯಸಿದರೆ ದೇವರನ್ನಾದರೂ ಹುಡುಕಬಹುದು, ಆದರೆ ಬೆಂಗಳೂರಿನಲ್ಲಿ ಸೂಕ್ತವಾದ ಫ್ಲಾಟ್ ಹುಡುಕುವುದು ಸುಲಭದ ಮಾತಲ್ಲ" ಎಂಬ ಮಾತು ಇಲ್ಲಿ ನೂರಕ್ಕೆ ನೂರರಷ್ಟು ನಿಜ. ಅದರಲ್ಲೂ ವಿಶೇಷವಾಗಿ ಒಂಟಿಯಾಗಿ ವಾಸಿಸುವ ಬ್ಯಾಚುಲರ್‌ಗಳಿಗಂತೂ ಇದು ಅಗ್ನಿಪರೀಕ್ಷೆಯಿದ್ದಂತೆ. ಫ್ಲಾಟ್ ಹುಡುಕಿ, ದೊಡ್ಡ ಮೊತ್ತದ ಭದ್ರತಾ ಠೇವಣಿ ಪಾವತಿಸಿ, ಮನೆ ಮಾಲೀಕರೊಂದಿಗೆ ಬಾಡಿಗೆ ಒಪ್ಪಂದಕ್ಕೂ ಸಹಿ ಹಾಕಿದ ಮೇಲೆಯೂ ಬ್ಯಾಚುಲರ್ ಎಂಬ ಒಂದೇ ಕಾರಣಕ್ಕೆ ಮನೆಯಿಂದ ಹೊರಹಾಕಲ್ಪಟ್ಟ ಕಹಿ ಅನುಭವವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ.
ಅನುಭವ ಹಂಚಿಕೊಂಡ ಯುವಕ!
ನಿಖಿಲ್ ಶಿಯೋರನ್ ಎಂಬುವವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮಗಾದ ಈ ನಿರಾಶಾದಾಯಕ ಅನುಭವವನ್ನು ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 25 ರಂದು ತಮ್ಮ ಮನೆ ಹುಡುಕಾಟ ಸುಖಾಂತ್ಯ ಕಂಡಿದೆ ಎಂದು ಸಂಭ್ರಮಿಸಿದ್ದ ನಿಖಿಲ್, ಹೊಸ ಮನೆಯ ಕೀಲಿಯ ಚಿತ್ರವನ್ನು ಪೋಸ್ಟ್ ಮಾಡಿ, "ಯುದ್ಧ ಮುಗಿದಿದೆಯೇ?" ಎಂದು ಬರೆದುಕೊಂಡಿದ್ದರು. ಆದರೆ, ಅವರ ಈ ಆಚರಣೆ ಮತ್ತು ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ಬಾಡಿಗೆ ಒಪ್ಪಂದ ಮುಗಿದು ಕೈಗೆ ಕೀಲಿ ಬಂದ ಮೇಲೆಯೂ ವಸತಿ ಸೊಸೈಟಿಯ (Residential Society) ಆಕ್ಷೇಪಣೆಯಿಂದಾಗಿ ಅವರು ಮನೆಯನ್ನು ಖಾಲಿ ಮಾಡಬೇಕಾಯಿತು.
ವ್ಯಂಗಾತ್ಮಕ ಪೋಸ್ಟ್!
ತಮಗಾದ ಘಟನೆಯ ಅಪ್‌ಡೇಟ್ ನೀಡಿದ ನಿಖಿಲ್, "ಬೆಂಗಳೂರಿನ ಮನೆ ಮಾಲೀಕರು ಮತ್ತು ಸೊಸೈಟಿಗಳು ಬ್ಯಾಚುಲರ್‌ಗಳ ವಿಷಯದಲ್ಲಿ ಎಷ್ಟು ಪ್ರತಿಕೂಲವಾಗಿ ನಡೆದುಕೊಳ್ಳುತ್ತಾರೆಂದರೆ, ನೀವು ಅವಿವಾಹಿತರು ಎಂದು ತಿಳಿದರೆ ಸಾಕು, ನಿಮ್ಮನ್ನು ಹಿಂದಕ್ಕೆ ಕರೆದೊಯ್ದು ತಲೆಗೆ ಗುಂಡು ಹಾರಿಸುವಷ್ಟು ಆಕ್ರೋಶ ವ್ಯಕ್ತಪಡಿಸುತ್ತಾರೆ" ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಅವರು ಸೊಸೈಟಿಯ ಅಧ್ಯಕ್ಷರೊಂದಿಗೆ ನಡೆದ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಕೂಡ ಹಂಚಿಕೊಂಡಿದ್ದಾರೆ.
ಪೋಸ್ಟ್ ವೈರಲ್!
ಆ ಚಾಟ್‌ನಲ್ಲಿ ಸೊಸೈಟಿಯ ಅಧ್ಯಕ್ಷರು, ನಿಖಿಲ್ ಅವರ ಬಳಿ "ನಿಮ್ಮ ಮನೆ ಮಾಲೀಕರೊಂದಿಗೆ ಮಾತನಾಡಿ ತಕ್ಷಣವೇ ಬೇರೆ ಆಸ್ತಿಯನ್ನು ಹುಡುಕಿಕೊಳ್ಳಿ" ಎಂದು ಸೂಚಿಸಿದ್ದರು. ಅದಕ್ಕೆ ಉತ್ತರಿಸಿದ ನಿಖಿಲ್, "ನಾನು ಈಗಾಗಲೇ ಅಡ್ವಾನ್ಸ್ ಠೇವಣಿ ಪಾವತಿಸಿದ್ದೇನೆ, ಒಪ್ಪಂದಕ್ಕೆ ಸಹಿ ಮಾಡಿದ್ದೇನೆ ಮತ್ತು ಮಾಲೀಕರೊಂದಿಗೆ ನನ್ನ ಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ಚರ್ಚಿಸಿದ್ದೇನೆ" ಎಂದು ವಿವರಿಸಿದರು. ಆದರೆ ಅಧ್ಯಕ್ಷರು, "ನಮ್ಮ ಅಪಾರ್ಟ್‌ಮೆಂಟ್ ಸೊಸೈಟಿಯಲ್ಲಿ ಯಾವುದೇ ಬ್ಯಾಚುಲರ್‌ಗಳಿಗೆ ಅವಕಾಶವಿಲ್ಲ ಎಂಬ ನಿಯಮವಿದೆ. ದಯವಿಟ್ಟು ನಿಮ್ಮ ಮಾಲೀಕರೊಂದಿಗೆ ಮಾತನಾಡಿ ಸಾಧ್ಯವಾದಷ್ಟು ಬೇಗ ಫ್ಲಾಟ್ ಖಾಲಿ ಮಾಡಿ" ಎಂದು ಕಟ್ಟುನಿಟ್ಟಾಗಿ ತಿಳಿಸಿದರು. ನಿಖಿಲ್ ಶಿಯೋರನ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 5.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಂಟರ್ನೆಟ್‌ನಲ್ಲಿ ಈ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ವಿಭಿನ್ನ ಪ್ರತಿಕ್ರಿಯೆ!
ಅನೇಕ ಒಂಟಿ ಬಾಡಿಗೆದಾರರು ಈ ಘಟನೆಗೆ ಸಾಕಿತ್ವ ವಹಿಸಿ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, "ಇದು ತುಂಬಾ ಮೂರ್ಖತನದ ನಿಯಮ, ನಿಮ್ಮ ಪರಿಸ್ಥಿತಿಗೆ ಬೇಸರವಾಗುತ್ತದೆ" ಎಂದರೆ, ಮತ್ತೊಬ್ಬರು ತಾವು ಮನೆ ಪಡೆಯಲು ಪಟ್ಟ ಸಾಹಸವನ್ನು ಹಂಚಿಕೊಳ್ಳುತ್ತಾ, "ಮನೆ ಸಿಗದೇ ಇದ್ದಾಗ ನನ್ನ ಮಹಿಳಾ ಸಹೋದ್ಯೋಗಿಯನ್ನು ಹೆಂಡತಿಯಂತೆ ನಟಿಸಲು ಕೇಳಿಕೊಂಡಿದ್ದೆ. ನಂತರ ನಾವಿಬ್ಬರೂ ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಸೊಸೈಟಿಗೆ ಸುಳ್ಳು ಹೇಳಿ ಮನೆ ಪಡೆದೆವು. ಮೆಟ್ರೋ ನಗರಗಳಲ್ಲಿ ಇಂತಹ ಸುಳ್ಳುಗಳೇ ಜೀವ ಉಳಿಸುತ್ತವೆ!" ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇನ್ನೊಬ್ಬರು "ನಾನು ಮದುವೆಯಾಗಲು ನಿರ್ಧರಿಸಿರುವುದಕ್ಕೆ ಬೆಂಗಳೂರಿನ ಮನೆ ಮಾಲೀಕರೇ ಪ್ರಮುಖ ಕಾರಣ!" ಎಂದು ಕಾಮೆಂಟ್ ಮಾಡಿದ್ದಾರೆ.
ಧೈರ್ಯ ತುಂಬಿದ ಕಾನೂನು ಸಲಹೆಗಾರರು!
ಮತ್ತೊಂದೆಡೆ, ಸೊಸೈಟಿಯ ನಿಯಮಗಳನ್ನು ಬೆಂಬಲಿಸಿದ ಕೆಲವರು, "ಬ್ಯಾಚುಲರ್‌ಗಳು ಇರುವ ಫ್ಲಾಟ್‌ಗಳಲ್ಲಿ ತಡರಾತ್ರಿಯವರೆಗೆ ಪಾರ್ಟಿ ಮಾಡುವುದು, ಧೂಮಪಾನ, ಅತಿಯಾದ ಶಬ್ದ ಮತ್ತು ಸ್ನೇಹಿತರನ್ನು ಕರೆತಂದು ಕಿರಿಕಿರಿ ಉಂಟುಮಾಡುವುದು ಸಾಮಾನ್ಯ. ಕುಟುಂಬ ಸಮೇತ ವಾಸಿಸುವವರಿಗೆ ಇದರಿಂದ ತೊಂದರೆಯಾಗುತ್ತದೆ" ಎಂದು ವಾದಿಸಿದ್ದಾರೆ. ಕೆಲ ಕಾನೂನು ಸಲಹೆಗಾರರು ಮತ್ತು ನೆಟ್ಟಿಗರು ನಿಖಿಲ್ ಅವರಿಗೆ ಧೈರ್ಯ ತುಂಬಿದ್ದು, "ನಿಮ್ಮ ಮತ್ತು ಮನೆ ಮಾಲೀಕರ ನಡುವೆ ಕಾನೂನಾತ್ಮಕ ಒಪ್ಪಂದವಾಗಿದೆ. ಮಾಲೀಕರಿಗೆ ಅಭ್ಯಂತರವಿಲ್ಲದಿದ್ದರೆ ಸೊಸೈಟಿಯು ಕಾನೂನುಬಾಹಿರವಾಗಿ ನಿಮ್ಮನ್ನು ಹೊರಹಾಕಲು ಸಾಧ್ಯವಿಲ್ಲ. ಇದರ ವಿರುದ್ಧ ಹೋರಾಡಿ" ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯಲ್ಲಿ ಬ್ಯಾಚುಲರ್‌ಗಳು ಎದುರಿಸುತ್ತಿರುವ ನೈಜ ಸವಾಲುಗಳಿಗೆ ಈ ಘಟನೆ ಕನ್ನಡಿ ಹಿಡಿದಿದೆ.


