ಸಿಜೆ ರಾಯ್ ದುರಂತ ಸಾವು ಪ್ರಕರಣ, ಉನ್ನತ ಮಟ್ಟದ ತನಿಖೆಗೆ ಎಸ್ಐಟಿ ರಚಿಸಿದ ಗೃಹ ಸಚಿವ , ಒಂದಡೆ ಅನುಮಾನಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಎಸ್ಐಟಿ ರಚಿಸಲಾಗಿದೆ.
ಬೆಂಗಳೂರು (ಜ.31) ಉದ್ಯಮಿ ಸಿಜೆ ರಾಯ್ ದುರಂತ ಸಾವು ಪ್ರಕರಣದ ಅನುಮಾನಗಳು ಹೆಚ್ಚಾಗುತ್ತಿದೆ. ಒಂದೆಡೆ ಐಟಿ ಅಧಿಕಾರಿಗಳ ಕಿರುಕುಳಕ್ಕೆ ಸಿಜೆ ರಾಯ್ ಬೇಸತ್ತಿದ್ದರು ಅನ್ನೋ ಮಾಹಿತಿಗಳು ಹರಿದಾಡುತ್ತಿದ್ದರೆ, ಮತ್ತೊಂದಡೆ ಸಿಜೆ ರಾಯ್ ತೆರಿಗೆ, ನಗದು ವ್ಯವಹಾರ, ಐಟಿ ರಿಟರ್ನ್ಸ್, ನಟಿಯರ ಜೊತೆಗಿನ ಲಿಂಕ್ ಕುರಿತ ಮಾತುಗಳು ಕೇಳಿ ಬರುತ್ತಿದೆ. ಈ ಬೆಳವಣಿಗೆ ನಡುವೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ. ಸಿಜೆ ರಾಯ್ ದುರಂತ ಸಾವು ಪ್ರಕರಣದ ಕುರಿತು ಎಸ್ಐಟಿ ತನಿಖೆಗೆ ಆದೇಶ ನೀಡಿದ್ದಾರೆ.
ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚನೆ
ನಗರ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ (ವಿಶೇಥ ತನಿಖಾ ತಂಡ) ತಂಡ ರಚಿಸಲಾಗಿದೆ. ಸಿಜೆ ರಾಯ್ ಸಾವು ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಉದ್ಯಮಿ ಸಾವಿನ ಕುರಿತು ಸಂಪೂರ್ಣ ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಲಾಗಿದೆ. ಪ್ರಕ್ರರಣದ ಸಂಪೂರ್ಣ ತನಿಖೆ ನಡೆಸಿ ಎಸ್‌ಐಟಿ ತಂಡ ವರದಿ ನೀಡಲಿದೆ ಎಂದಿದ್ದಾರೆ.
ಸಿಜೆ ರಾಯ್ ಸಾವು ಪ್ರಕರಣದ ಎಸ್ಐಟಿ ತಂಡಕ್ಕೆ ವಂಶಿಕೃಷ್ಣ ನೇತೃತ್ವ ವಹಿಸಿದರೆ, ತಂಡದಲ್ಲಿ ಕೆಂದ್ರ ವಿಭಾಗ ಡಿಸಿಪಿ ಅಕ್ಷಯ್, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಹಲಸೂರು ಗೇಟ್ ಎಸಿಪಿ ಸುಧೀರ್,ಸಿಸಿಆರ್ ಬಿ ಎಸಿಪಿ ರಾಮಚಂದ್ರ ಹಾಗೂ ಅಶೋಕನಗರ ಇನ್ಸ್ಪೆಕ್ಟರ್ ರವಿ ಈ ತಂಡದಲ್ಲಿದ್ದಾರೆ. ಉನ್ನತ ಮಟ್ಟದ ತನಿಖೆಗಾಗಿ ಎಸ್ಐಟಿ ರಚನೆ ಮಾಡಲಾಗಿದೆ.
ದೇಶದಲ್ಲೆ ಸದ್ದು ಮಾಡುತ್ತಿದೆ ಸಿಜೆ ರಾಯ್ ದುರಂತ ಸಾವು
ಸಿಜೆ ರಾಯ್ ಬೆಂಗಳೂರಿನ ಉದ್ಯಮಿ. ಕೇರಳ ಮೂಲದ ಸಿಜೆ ರಾಯ್ ಬೆಂಗಳೂರಿನಲ್ಲಿ ಕಾನ್ಫಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಸಂಸ್ಥೆ ಆರಂಭಿಸಿ ದೇಶ ವಿದೇಶಗಳಲ್ಲಿ ಉದ್ಯಮ ನಡೆಸುತ್ತಿದ್ದರು. ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಸಿಜೆ ರಾಯ್ ಮಾಲೀಕತ್ವದ ಕಾನ್ಫಿಡೆಂಟ್ ಗ್ರೂಪ್ ಅಸ್ತಿತ್ವಹೊಂದಿದೆ. ದುಬೈ ಸೇರಿದಂತೆ ವಿದೇಶಗಳಲ್ಲೂ ಕಾನ್ಫಿಡೆಂಟ್ ಗ್ರೂಪ್ ಅತ್ಯಂತ ಯಶಸ್ವಿ ಉದ್ಯಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ ಚೇರ್ಮೆನ್ ಸಿಜೆ ರಾಯ್ ನಿನ್ನೆ (ಜ.30) ಬೆಂಗಳೂರಿನ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಐಟಿ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್ ಮೇಲೆ ದಾಳಿ ಮಾಡಿತ್ತು. ಬಳಿಕ ಸತತ ದಾಖಲೆ ಪರಿಶೋಧನೆಯಲ್ಲಿ ತೊಡಗಿತ್ತು. ಕೇರಳದ ಅಧಿಕಾರಿಗಳು ಬೆಂಗಳೂರಿನ ಕಾನ್ಫಿಡೆಂಟ್ ಗ್ರೂಪ್ ಕಚೇರಿಗೆ ದಾಳಿ ಮಾಡಿ ದಾಖಲೆ ಪರಿಶೀಲನೆಯಲ್ಲಿ ತೊಡಗಿತ್ತು. ಇತ್ತ ಐಟಿ ಸೂಚನೆ ಮೇರೆಗೆ ಕಚೇರಿಗೆ ಆಗಮಿಸಿದ ಸಿಜೆ ರಾಯ್, ಕೋಣೆಯೊಳಗೆ ತೆರಳಿ ಎದೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದರು. ಈ ಘಟನೆ ದೇಶಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಉದ್ಯಮ ಜೊತೆಗೆ ಸಿಜೆ ರಾಯ್ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಐಟಿ ಮೂಲಗಳ ಪ್ರಕಾರ ಸಿಜೆ ರಾಯ್ ವಹಿವಾಟುಗಳ ಪಾರದರ್ಶಕತೆ ಕುರಿತು ಅನುಮಾನ ವ್ಯಕ್ತಪಡಿಸಿತ್ತು. ಆದಾಯ ತೆರಿಗೆ ಸಲ್ಲಿಕೆ, ಫ್ಲ್ಯಾಟ್ ಮಾರಾಟದಲ್ಲಿ ನಗದು ವ್ಯವಹಾರ ಸೇರಿದಂತೆ ಹಲವು ಮಾಹಿತಿಗಳ ಕುರಿತು ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಂತೆ ಈ ದುರಂತ ನಡೆದಿತ್ತು.
ಸಿಜೆ ರಾಯ್ ಸಾವಿನಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅತೀ ದೊಡ್ಡ ಶಾಕ್ ಎದುರಾಗಿದೆ. ಅತೀ ಯಶಸ್ವಿಯಾಗಿ ಉದ್ಯಮ ನಡೆಸುತ್ತಿದ್ದ ಸಿಜೆ ರಾಯ್ ಸಾವು ಹಲವು ಅನುಮಾನಗಳ ಜೊತೆಗೆ ಆತಂಕವನ್ನು ಮಂದಿಟ್ಟಿದೆ.


