ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ಶಾಸಕರೊಂದಿಗೆ ಸಭೆ ನಡೆಸಿ, ನಗರದ ಅಭಿವೃದ್ಧಿಗೆ ಬೃಹತ್ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಸುರಂಗ ಮಾರ್ಗ, ಎತ್ತರಿಸಿದ ಕಾರಿಡಾರ್ ಮತ್ತು ಹೊಸ ರಸ್ತೆಗಳ ನಿರ್ಮಾಣದಂತಹ ಮೂಲಸೌಕರ್ಯ ಅಭಿವೃದ್ಧಿಗೆ ಯಾವುದೇ ತಾರತಮ್ಯವಿಲ್ಲದೆ ಅನುದಾನ ನೀಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇವತ್ತು ಬೆಂಗಳೂರಿನ ಶಾಸಕರ ಜೊತೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಸಿಲಿಕಾನ್ ಸಿಟಿಯ ಅಭಿವೃದ್ಧಿಗೆ ಸಂಬಂಧಿಸಿ ಕೆಲವು ಮಹತ್ವದ ವಿಚಾರಗಳನ್ನ ಪ್ರಕಟಿಸಿದರು. ಜೊತೆಗೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡೋದಿಲ್ಲ. ಯಾರಿಗೆಲ್ಲ ಎಷ್ಟು ಅನುದಾನ ಬೇಕೋ ಅಷ್ಟನ್ನೂ ನೀಡಿದ್ದೇ ಎಂದು ಸ್ಪಷ್ಟಪಡಿಸಿದರು.
ಸಿಎಂ ಶಿವಕುಮಾರ್ ಏನಂದ್ರು?
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಕ್ಷೇತ್ರಗಳಿಗೂ ಅನುದಾನ ನೀಡುತ್ತಿದ್ದೇವೆ. 500 ಕಿ.ಮೀ ಹೊಸ ರಸ್ತೆ ಸಂಪರ್ಕ ನಿರ್ಮಾಣ ಮಾಡುತ್ತೇವೆ. ಇದು ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುತ್ತದೆ. 40 ಕಿ.ಮೀ ಉದ್ದದ ದ್ವಿಪಥ ಸುರಂಗ ಮಾರ್ಗ ಇದಾಗಿರಲಿದೆ. 120 ಕಿ.ಮೀ ಉದ್ದದ ಎತ್ತರಿಸಿದ ಕಾರಿಡಾರ್ ನಿರ್ಮಾಣ ಮಾಡುತ್ತೇವೆ. 1500 ಕಿ.ಮೀ ಆರ್ಟಿಲರಿ ಮತ್ತು ಸಬ್ ಆರ್ಟಿಲರಿ ರಸ್ತೆಗಳ ಉನ್ನತೀಕರಣ ಕಾರ್ಯವನ್ನೂ ಕೈಗೊಳ್ಳಲಾಗಿದೆ. ಒಟ್ಟಾರೆ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
ದೇಶದ ಬೇರೆ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಜನಸಂಖ್ಯಾ ದರ ಮತ್ತು ವಾಹನಗಳ ಹೆಚ್ಚಳ ದರ ಹೆಚ್ಚಿದೆ. ಆದರೆ ರಸ್ತೆಗಳ ಸಾಮರ್ಥ್ಯ ಬೇರೆ ನಗರಗಳಿಗಿಂತ ಕಡಿಮೆಯಿದೆ. ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇವೆ. ಸಂಚಾರ ವ್ಯವಸ್ಥೆ ಸುಗಮಗೊಳಿಸಲು 40 ಕಿ.ಮೀ ದ್ವಿಪಥ ಸುರಂಗ ನಿರ್ಮಾಣ ಮಾಡಲಿದ್ದೇವೆ. ಹೆಬ್ಬಾಳದಲ್ಲಿ 2 ಕಿಮೀ ಅಲ್ಪದೂರದ ಸುರಂಗ ಕಾಮಗಾರಿ ಕೈಗೊಂಡಿದ್ದೇವೆ. ಇದರಲ್ಲಿ 16 .5 ಕಿಮೀ ಉತ್ತರ-ದಕ್ಷಿಣ ಕಾರಿಡಾರ್ ನಿರ್ಮಾಣಕ್ಕೆ 17,780 ಕೋಟಿ ರೂ. ವೆಚ್ಚವಾಗಲಿದ್ದು, ಸರ್ಕಾರ ಇದರಲ್ಲಿ 7 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಲಿದೆ. 21 ಕಿ.ಮೀ ಉದ್ದದ ಪೂರ್ವ-ಪಶ್ಚಿಮ ಕಾರಿಡಾರ್ನಲ್ಲಿ ಎರಡು ಆಗಮನ ದ್ವಾರ ಇರಲಿದೆ.
ರಾಷ್ಟ್ರೀಯ ಹೆದ್ದಾರಿ ಮಾನದಂಡದ ಪ್ರಕಾರ 23,165 ಕೋಟಿ ಬಂಡವಾಳ ವೆಚ್ಚದಲ್ಲಿ120 ಕಿಮೀ ಎತ್ತರಿಸಿದ ಕಾರಿಡಾರ್ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಇದರಲ್ಲಿ ನಾಲ್ಕು ಕೆಟಗರಿ ಮಾಡಲಾಗಿದೆ. 10 ಕಿಮೀ ಕಡಿಮೆ ಇರುವ ಕಾರಿಡಾರ್ಗಳಲ್ಲಿ ಟೋಲ್ ಇರುವುದಿಲ್ಲ. ಬೆಂಗಳೂರು ನಗರದಲ್ಲಿ ಸುಮಾರು 500 ಕಿ.ಮೀ ಹೊಸ ರಸ್ತೆ ಸಂಪರ್ಕ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ ಚಾನೆಲ್ ಬದಿಯಲ್ಲಿ 300 ಕಿಮೀ ಬಫರ್ ರಸ್ತೆ ನಿರ್ಮಾಣ ಮಾಡ್ತೀವಿ. 68 ಕಿಮೀ ಬುಸಿನೆಸ್ ಕಾರಿಡಾರ್ ನಿರ್ಮಾಣವೂ ಇದರಲ್ಲಿ ಸೇರಿದೆ. 17 ಕಿಮೀ ಹೊರವರ್ತುಲ ರಸ್ತೆಯ ಮರು ಅಭಿವೃದ್ಧಿ, 1500 ಕಿಮೀ ಆರ್ಟಿಲರಿ ಮತ್ತು ಸಬ್ ಆರ್ಟಿಲರಿ ರಸ್ತೆಗಳ ಉನ್ನತೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಸದ್ಯದಲ್ಲೇ ಹೊಸದಾಗಿ ನಗರದ ಹೊರ ವಲಯದಲ್ಲಿ 18 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭಿಸಲಾಗುವುದು. ರಾಜ್ಯ ಸರ್ಕಾರ ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿ 37 ಕಿಮೀ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಕೇವಲ 11 ಕಿಮೀ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದರು.
ಇದೇ ವೇಳೆ ಅನುದಾನ ಹಂಚಿಕೆಯಲ್ಲಿ ತಾರತಮ್ಯದ ಬಗ್ಗೆ ಪ್ರತಿಕ್ರಿಯಿಸಿ.. ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಅಗತ್ಯ ಅನುದಾನವನ್ನು ಒದಗಿಸಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಸಾಕಷ್ಟು ಅನುದಾನವನ್ನು ಒದಗಿಸಲಾಗಿದೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತುರ್ತಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಹಾಗೂ ಬಿಡಬ್ಲುಎಸ್ಎಸ್ಬಿ ಮೂಲಕ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಕಾರ್ಯ ಕೈಗೊಂಡಿದ್ದೇವೆ ಎಂದರು.






