ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದ್ದು, ಅನರ್ಹರನ್ನು ಕೈಬಿಡಲು ಹೊಸ ಆಪ್ ಮೂಲಕ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಲಿದೆ. ಮೃತಪಟ್ಟವರ ಖಾತೆಯಲ್ಲಿದ್ದ ಹಣವನ್ನು ವಾಪಸ್ ಪಡೆಯಲಾಗುತ್ತಿದ್ದು, ಅರ್ಹರಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ಮೂಲಕ ಯೋಜನೆ ಮುಂದುವರಿಯಲಿದೆ ಎಂದು ಎಚ್ಎಂ ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಹತ್ವ ಯೋಜನೆಗಳಲ್ಲಿ ಗ್ಯಾರಂಟಿ ಯೋಜನೆಗಳು ಮಹತ್ವದ ಪಾತ್ರವಹಿಸಿದೆ. ಸರ್ಕಾರ ಅಧಿಕಾರಕ್ಕೆ ಬಂದ ಸಮಯದಿಂದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಆದರೆ ಈಗ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿದ್ದ ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗಳ ಪರಿಷ್ಕರಣೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈಗಾಗಲೇ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಕಾರ್ಯ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಈಗ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆಗೂ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್ಎಂ ರೇವಣ್ಣ ಅವರು ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಒಂದು ಕೋಟಿ 22 ಲಕ್ಷ ಯಜಮಾನಿಯರ ಖಾತೆ ಹಣ ಸಂದಾಯ
ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಗ್ಯಾರಂಟಿ ಯೋಜನೆ ಜಾರಿ ಮಾಡುವ ಭರವಸೆ ನೀಡಿದ್ದೇವು. ಇದರಂತೆ ಅಧಿಕಾರಕ್ಕೆ ಬಂದ ಕೂಡಲೇ ಯಾವುದೇ ಲಂಚ, ಮಧ್ಯವರ್ತಿಗಳು ಇಲ್ಲದೆ ಗ್ಯಾರಂಟಿ ಯೋಜನೆಗಳನ್ನು ಒಂದೇ ವರ್ಷದಲ್ಲಿ ಜಾರಿ ಮಾಡಿದ್ದೇವು. ಮೋದಿ ಕೂಡ ಈ ಯೋಜನೆಗಳನ್ನು ಜಾರಿ ಮಾಡಲು ಆಗೋದಿಲ್ಲ ಎಂದು ಹೇಳಿದ್ದರು. ಆದರೆ ನಾವು ಯೋಜನಯನ್ನು ಜಾರಿ ಮಾಡಿ, ಯಶಸ್ವಿಯಾಗಿ ಮುಂದುವರಿಸಿದ್ದೇವೆ. ಯೋಜನೆಗಳ ಅನುಷ್ಠಾನಕ್ಕೆ ಗ್ಯಾರಂಟಿ ಸಮಿತಿಗಳನ್ನು ಮಾಡಿದ್ದೇವು, 4650 ಜನರು ಇದರ ಬಗ್ಗೆ ಕೆಲಸ ಮಾಡಿದ್ದೇವು. ಡಿಬಿಟಿ ಮೂಲಕ ನೇರವಾಗಿ ಜನರ ಖಾತೆಗೆ ಹಾಕಿದ್ದೇವು, ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆ ಯಜಮಾನಿಗೆ ನೇರವಾಗಿ ತಿಂಗಳಿಗೆ ಎರಡು ಸಾವಿರದಂತೆ, ಒಂದು ಕೋಟಿ 22 ಲಕ್ಷದ ಜನತೆಗೆ ಈವರೆಗೂ 79 ಸಾವಿರ 404 ಕೋಟಿ ರೂಪಾಯಿಗಳನ್ನು ಜಮೆ ಮಾಡಿದ್ದೇವೆ ಎಂದು ಹೇಳಿದರು.
ಯೋಜನೆಯಲ್ಲಿ ಕೆಲವು ನ್ಯೂನ್ಯತೆಗಳು ಬೆಳಕಿಗೆ
ಇಂತಹ ಯೋಜನೆ ಯಾವುದೇ ರಾಜ್ಯದಲ್ಲಿ ಆಗಿಲ್ಲ. ಆದರೆ 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಭೆ ಮಾಡುವ ಸಂದರ್ಭದಲ್ಲಿ ಕೆಲವು ನ್ಯೂನ್ಯತೆ ಇರುವುದು ಕಂಡು ಬಂತು. ಇದರಂತೆ ನ್ಯೂನ್ಯತೆಗಳನ್ನು ಗುರುತಿಸಿ ಸರಿಪಡಿಸುವ ಕೆಲಸ ಮಾಡಿದ್ದೇವು. ಗೃಹಲಕ್ಷ್ಮೀ ಯೋಜನೆಯಂತೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದ್ದರು, ಅದು ಕೆಲವು ಬ್ಯಾಂಕ್ ಖಾತೆಗಳಲ್ಲಿಯೇ ಉಳಿದುಕೊಂಡಿತ್ತು. ಗೃಹಲಕ್ಷ್ಮೀ ಫಲಾನುಭವಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಈ ಹಣ ಬ್ಯಾಂಕ್ ಖಾತೆಯಲ್ಲಿಯೇ ಉಳಿದುಕೊಂಡಿತ್ತು, ಇಂತಹ ಹಣ 117 ಕೋಟಿ ರೂಪಾಯಿ ಸರ್ಕಾರಕ್ಕೆ ವಾಪಸ್ ಬರಬೇಕಿತ್ತು. ಇದರಲ್ಲಿ ಈಗ 47 ಕೋಟಿ ರೂಪಾಯಿ ವಾಪಸ್ ಬಂದಿದ್ದು, ಉಳಿದ ಹಣ ರಿಕವರಿ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಯೋಜನೆ ಪರಿಷ್ಕರಣೆಗೆ ವಿಶೇಷ ಆಪ್ ಸಿದ್ಧ
ಈಗ ನಾವು ಸ್ಮಾರ್ಟ್ ಕಾರ್ಡ್ ಜಾರಿ ಮಾಡಲು ಮುಂದಾಗಿದ್ದೇವೆ. ಈಗ ಮತ್ತೆ ಪ್ರೀ ವೆರಿಫಿಕೇಶನ್ ಮಾಡಲು ಮುಂದಾಗಿದ್ದೇವೆ. ಇದಕ್ಕೆ ಒಂದು ಆಪ್ ಮಾಡಿ, ಅದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಯಜಮಾನಿಯ ಎಫಿಕ್ ಕಾರ್ಡ್ ನಂಬರ್, ವಿಳಾಸ, ಮೊಬೈಲ್ ಸಂಖ್ಯೆ, ಮನೆಯ ಪರಿಸ್ಥಿತಿ, ಮನೆಯವರ ಆದಾಯ ಸೇರಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸುತ್ತೇವೆ. ಇದಕ್ಕೆ ಬೇಕಾದ ಆಪ್ ಈಗಾಗಲೇ ಸಿದ್ಧ ಮಾಡಲಾಗಿದೆ ಎಂದು ಎಚ್ಎಂ ರೇವಣ್ಣ ವಿವರಿಸಿದರು.
ಯೋಜನೆ ನಿಲ್ಲೋದಿಲ್ಲ, ಅರ್ಹರಿಗೆ ಮಾತ್ರ ಹಣ!
ನಾವು ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ ಮುಂದಾದರೆ, ವಿರೋಧ ಪಕ್ಷದವರು ಹಣ ಹಾಕುವುದನ್ನು ನಿಲ್ಲಿಸುತ್ತಾರೆ ಎಂದು ಅಪಪ್ರಚಾರ ಮಾಡುಬಹುದು. ಆದರೆ ನಾವು ಯಾವುದೇ ಕಾರಣಕ್ಕೂ ಹಣ ಹಾಕುವುದನ್ನು ನಿಲ್ಲಿಸುವುದಿಲ್ಲ. ನಮ್ಮ ಉದ್ದೇಶ ಅರ್ಹರನ್ನು ಗುರುತಿಸಿ, ಅನರ್ಹರನ್ನು ಯೋಜನೆಯಿಂದ ಕೈಬಿಡುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ನಾವೇ ನಿಮ್ಮ ಮನೆಗೆ ಬರ್ತೀವಿ!
ಯೋಜನೆ ಪರಿಷ್ಕರಣೆ ಮಾಡಲು ಜನರು ಯಾವುದೇ ಕಚೇರಿಗೆ ಹೋಗುವ ಅಗತ್ಯವಿಲ್ಲ. ನಮ್ಮ ಗ್ಯಾರಂಟಿ ಸಮಿತಿ ಸದಸ್ಯರು, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಜನರು ಬಳಿ ಹೋಗಿ ಮಾಹಿತಿ ಪಡೆದುಕೊಳ್ಳುತ್ತಾರೆ. ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಕೂಡ ಇದೇ ರೀತಿ ಮಾಡಿದ್ದೇವೆ. ಮುಂದಿನ ಅವಧಿಯಲ್ಲಿ ಇದು ಮುಂದುವರಿಯಲಿದೆ ಎಂದು ಎಚ್ಎಂ ರೇವಣ್ಣ ತಿಳಿಸಿದರು.
ಬ್ಯಾಂಕ್ ಖಾತೆಗೆ ಹಣವನ್ನು ಎರಡು ಮೂರು ತಿಂಗಳಿಗೆ ಒಮ್ಮೆ ಒಟ್ಟಿಗೆ ಹಣ ಸಂದಾಯ ಮಾಡುತ್ತಿದ್ದೇವೆ. ಎರಡೂವರೆ ಲಕ್ಷ ಕೋಟಿ ಇದ್ದ ರಾಜ್ಯದ ಬಜೆಟ್ ಗಾತ್ರ ಈಗ ನಾಲ್ಕು ಲಕ್ಷ ಚಿಲ್ಲರೆ ಕೋಟಿಗೆ ಹೆಚ್ಚಾಗಿದೆ. ನಾವು ಯೋಜನೆ ಜಾರಿ ಮಾಡುವುದರಿಂದ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ಹೆಚ್ಚುವರಿಯಾಗಿ ಜಿಎಸ್ಟಿ ಸಂಗ್ರಹ ಮಾಡುತ್ತಿದ್ದೇವೆ. ನಮ್ಮ ಯೋಜನೆಯನ್ನು ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ ಎಂದು ಎಚ್ಎಂ ರೇವಣ್ಣ ಹೇಳಿದರು.






