ಬೆಂಗಳೂರಿನ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಲು ಕೋರಿದಾಗ, ಸೋನು ನಿಗಮ್ ಪಹಲ್ಗಾಮ್ ಘಟನೆಯನ್ನು ಉಲ್ಲೇಖಿಸಿ, ಭಯ ವ್ಯಕ್ತಪಡಿಸಿದರು. ಹರೀಶ್ ಗಂಗಾಧರ್, ನಿಗಮ್‌ರ ಈ ಹೇಳಿಕೆಯನ್ನು ಟೀಕಿಸಿ, ಕನ್ನಡಿಗರ ಅಭಿಮಾನವನ್ನು ಅವಮಾನಿಸಿದ್ದಾರೆ ಎಂದಿದ್ದಾರೆ. ನಿಗಮ್ ಮಾತ್ರ ತಾವು ಕನ್ನಡ ಹಾಡುಗಳನ್ನು ಪ್ರೀತಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೋರ್ವ ಕನ್ನಡದ ಹಾಡು ಹಾಡಿ ಎಂದು ಹೇಳಿದ್ದಾನೆ. ಆಗ ಗಾಯಕ ಸೋನು ನಿಗಮ್‌ ಅವರಿಗೆ ಬೆದರಿಕೆ ಎನಿಸುವ ಹಾಗೆ ಆಗಿದೆ. ಆಗ ಅವರು ಪಹಲ್ಗಾಮ್‌ನಲ್ಲಿ ನಡೆದಿದ್ದು ಗೊತ್ತಲ್ವಾ? ಇದೇ ಕಾರಣಕ್ಕೆ ಎಂದು ಹೇಳಿದ್ದಾರೆ. ಕನ್ನಡ ಹಾಡು ಹಾಡಿ ಎಂದು ಹೇಳೋದಕ್ಕೂ, ಪಹಲ್ಗಾಮ್‌ ಭಯೋತ್ಪಾದನೆಗೂ ಏನು ಸಂಬಂಧ ಎಂಬುದು ಅನೇಕರ ಪ್ರಶ್ನೆ ಆಗಿದೆ. ಈ ಬಗ್ಗೆ ಹರೀಶ್‌ ಗಂಗಾಧರ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದಾರೆ.


ಹರೀಶ್‌ ಗಂಗಾಧರ್‌ ಏನಂತಾರೆ? 
ಬಾಲಿವುಡ್‌ನಲ್ಲಿ ನೇಪೋಟಿಸಂ ಇದೆ. ಅಲ್ಲಿ ಗುಂಪುಗಾರಿಕೆ ಇದೆ. ಬೇರೆ ಭಾಷೆಯ ಹಾಡು, ಕಥೆಗಳನ್ನು ಡಬ್ ಮಾಡಿ ತಮ್ಮದಾಗಿಸಿಕೊಳ್ಳುವ ಕನ್ನಿಂಗ್ನೆಸ್ ಇದೆ. ಆದ್ರೆ ಅವರಲ್ಲಿ ಸೋನು ನಿಗಮ್ ನಂತಹ ಧಿಮಾಕಿನ ಮನುಷ್ಯನನ್ನು ಹೊರದಬ್ಬುವ ಗುಣವು ಇದೆ. ನಾನೇ ಶ್ರೇಷ್ಠ, ನಾನೇ ಶ್ರೇಷ್ಠ ಎನ್ನುವ ಶ್ರೇಷ್ಠತೆಯ ವ್ಯಸನ ತಲೆಗೇರಿದ ಮೇಲೆ ಬಾಲಿವುಡ್ ಇವನನ್ನು ಮುಲಾಜಿಲ್ಲದೆ ಹೊರದಬ್ಬಿತ್ತು.
ಅರಿಜಿತ್ ಸಿಂಗ್, ಜುಬಿನ್, ಅರ್ಮಾನ್ ಮಲಿಕ್, ವಿಶಾಲ್ ಮಿಶ್ರ, ಅಮಿತ್ ತಿವಾರಿ, ಅನುಪಮ್ ರಾಯ್ ಬಂದ ಮೇಲೆ ಸೋನು ನಿಗಮ್ ಅವರಿಗೆ ರಿಯಾಲಿಟಿ ಶೋ, ಕಾನ್ಸರ್ಟ್ಸ್ ಗಟ್ಟಿಯಾಗಿದೆ. ವೆಂಟಿಲೇಟರ್‌ನಲ್ಲಿದ್ದ ಇಂತಹ ಹಾಡುಗಾರನಿಗೆ ಉಸಿರುಕೊಟ್ಟಿದ್ದು ಕನ್ನಡ. ವಯಸ್ಸು, ಹೊಸ ದನಿ, ಟ್ರೆಂಡ್ ನೋಡದೆ ಆತನ ಪ್ರತಿಭೆ ಮಣೆ ಹಾಕಿದ ಕನ್ನಡಿಗರು ನಿಗಮ್ ಅವರನ್ನು ದೇವರ ಮಟ್ಟಕ್ಕೆ ಏರಿಸಿದರು. ಮೊನ್ನೆ ಮೊನ್ನೆವರೆಗೆ ಸಾಧಾರಣ ಲಿರಿಕ್ಸ್ ಇರುವ ಮಾಯಾವಿ ಹಾಡು ಕೂಡ ಹಿಟ್ ಆಗುವಂತೆ ಕನ್ನಡಿಗರು ನೋಡಿಕೊಂಡರು. ಆದ್ರೆ ಅವ ಮಾಡಿದ್ದೇನು? ಕನ್ನಡದ ವ್ಯಂಗ್ಯ. ಕನ್ನಡಿಗರು ಇಟ್ಟಿದ್ದ ಪ್ರೀತಿ, ಅಭಿಮಾನಕ್ಕೆ? ದೊಡ್ಡ ಅವಮಾನ...
ಕನ್ನಡಾಭಿಮಾನಕ್ಕೂ ಪೆಹಲ್ಗಾಮ್ ಭಯೋತ್ಪಾದಕ ಹೇಯ ಕೃತ್ಯಕ್ಕೂ ಏನಪ್ಪಾ ಸಂಬಂಧ? What is he hinting at? Let me clarify. ಇವನಿಗೆ ಹಣ ಮಾಡಲು ಕನ್ನಡ ಬೇಕು ಆದ್ರೆ ಇವನಲ್ಲಿ ಒಳಗೊಳಗೆ ಹಿಂದಿಯ ಕುರಿತು ಅತಿಯಾದ ಆರಾಧನೆ ಅಭಿಮಾನ ಇದೆ. ಅದನ್ನು ನಾವು ಕಲಿಯದೇ ಇದ್ದಿದ್ದಕ್ಕೆ, ಆ ಭಾಷೆಯನ್ನು ನಾವು ರಾಷ್ಟ್ರೀಯ ಭಾಷೆ ಎಂದು ಒಪ್ಪದಿದ್ದಿದಕ್ಕೆ ನಮ್ಮ ದೇಶದಲ್ಲಿ ಐಕ್ಯತೆ ಇಲ್ಲ ಎಂದು ಸೂಚಿಸಲು ಹೋಗಿದ್ದಾನೆ ಅಷ್ಟೇ... Such flawed logic...
ಪರಭಾಷೆಯವರನ್ನು ಕರೆಸಿ ಕನ್ನಡಿಗರು ಅವಮಾನ ಮಾಡಿಸಿಕೊಂಡಿದ್ದು ಇದೆ ಮೊದಲಲ್ಲ. ಆದರೆ ನಾವು ಏನನ್ನೂ ಕಲಿತಿಲ್ಲ. ನಮ್ಮ ನೆಲದ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದಕ್ಕೆ ಈ ಅವಮಾನ ಪಾಠವಾಗಲಿ ಅಷ್ಟೆ...

ಕನ್ನಡ ಹಾಡು ಹಾಡಿ ಎಂದಾಕ್ಷಣ ಸೋನು ನಿಗಮ್ ಅವರು, "ನಾನು ಎಲ್ಲ ಭಾಷೆಗಳಲ್ಲಿಯೂ ಹಾಡು ಹಾಡಿದ್ದೇನೆ. ಆದರೆ ನನ್ನ ಜೀವನದಲ್ಲಿ ನಾನು ಹಾಡಿದ ಬೆಸ್ಟ್ ಹಾಡುಗಳು ಅಂದ್ರೆ ಕನ್ನಡದವು ಎಂದು ಖುಷಿಯಿಂದ ಹೇಳ್ತೀನಿ. ನಾನು ಯಾವಾಗಲೇ ಆದರೂ ಇಲ್ಲಿಗೆ ಬಂದಾಗ ಖುಷಿಯಿಂದ, ಬಹಳ ಪ್ರೀತಿಯಿಂದ ಬರ್ತೀನಿ. ನಾವು ಪ್ರತಿದಿನವೂ ಇವೆಂಟ್‌ಗಳನ್ನು ಮಾಡ್ತೀವಿ. ಆದರೆ ಕರ್ನಾಟಕದಲ್ಲಿ ಎಲ್ಲಿಯೇ ಕಾರ್ಯಕ್ರಮವಿರಲೀ, ನಾವು ಬಹಳ ಗೌರವದಿಂದ, ಖುಷಿಯಿಂದ ಬರುತ್ತೇವೆ ಎನ್ನೋದಂತೂ ಸತ್ಯ. ನಮ್ಮನ್ನು ನೀವೆಲ್ಲರೂ ನಿಮ್ಮ ಕುಟುಂಬದವರು ಎಂಬಂತೆ ಸ್ವೀಕರಿಸಿದ್ದೀರಿ ಎನ್ನೋದು ಬಹಳ ಖುಷಿ ಕೊಟ್ಟಿದೆ" ಎಂದು ಹೇಳಿದರು.

ಅಷ್ಟೇ ಅಲ್ಲದೆ ಪಹಲ್ಗಾಮ್‌ನಲ್ಲಿ ನಡೆದಿದ್ದು ಗೊತ್ತಲ್ವಾ? ಇದೇ ಕಾರಣಕ್ಕೆ ಎಂದು ಅವರು ಹೇಳಿದ್ದರು. ಪಾಕಿಸ್ತಾನದ ಉಗ್ರರು ಕಾಶ್ಮೀರದಲ್ಲಿನ ಪ್ರವಾಸಿಗರನ್ನು ಕೊಂದರು. ಇದಕ್ಕೂ ಕನ್ನಡ ಹಾಡಿಗೂ ಏನು ಸಂಬಂಧ ಎನ್ನೋದು ಎಲ್ಲರ ಪ್ರಶ್ನೆ ಆಗಿದೆ.